ಬೆಂಗಳೂರು: ಕೊಡುಗೈ ದಾನಿ, ಪಬ್ಲಿಕ್ ಹೀರೋ ಸಾಯಿರಾಂ ಗೋಪಾಲಕೃಷ್ಣ ಭಟ್(85) ಶನಿವಾರ ಮಧ್ಯಾಹ್ನ ಸ್ವಗೃಹದಲ್ಲಿ ನಿಧನರಾಗಿದ್ದಾರೆ.
ಕಾಸರಗೋಡು ಜಿಲ್ಲೆಯ ಬದಿಯಡ್ಕ ಗ್ರಾಮ ಪಂಚಾಯತಿನ ಕಿಳಿಂಗಾರು ಗ್ರಾಮದಲ್ಲಿ ಕೃಷ್ಣ ಭಟ್ ಮತ್ತು ಸುಬ್ಬಮ್ಮ ದಂಪತಿಗಳ ಕಿರಿಯ ಪುತ್ರನಾಗಿ 17 ಜುಲೈ 1937ರಂದು ಜನಿಸಿದ ಕಿಳಿಂಗಾರು ನಡುಮನೆ ಗೋಪಾಲಕೃಷ್ಣ ಭಟ್ ಇವರು ಜನಮಾನಸದಲ್ಲಿ ಕೊಡುಗೈ ದಾನಿ ಎಂದೇ ಗುರುತಿಸಲ್ಪಟ್ಟಿದ್ದರು.
Advertisement
ಕೊಡುಗೈ ದಾನಿ ಎಂದೇ ಪ್ರಸಿದ್ಧರಾಗಿದ್ದ ಸಾಯಿರಾಂ ಭಟ್ ಅವರ ಸಮಾಜ ಸೇವೆ ಕುರಿತು ವಿಶೇಷ ಸುದ್ದಿಯನ್ನು 28 ಜುಲೈ 2015ರಂದು ಪಬ್ಲಿಕ್ ಹೀರೊ ಕಾರ್ಯಕ್ರಮದಲ್ಲಿ ಪ್ರಸಾರ ಮಾಡಲಾಗಿತ್ತು. ಇದನ್ನೂ ಓದಿ: ಕೊಡಗಿನ ಪೊಲೀಸ್ ಅಧಿಕಾರಿ ನಾಪತ್ತೆ – ಕುಟುಂಬಸ್ಥರಿಂದ ದೂರು ದಾಖಲು
Advertisement
ಪುಟ್ಟಪರ್ತಿ ಭಗವಾನ್ ಶ್ರೀ ಸತ್ಯ ಸಾಯಿಬಾಬಾ ಅವರ ಪರಮ ಭಕ್ತರಾಗಿದ್ದ ಗೋಪಾಲಕೃಷ್ಣ ಭಟ್ ಸಾಯಿರಾಂ ಭಟ್ ಎಂದೇ ಪ್ರಸಿದ್ಧರಾಗಿದ್ದರು.
Advertisement
Advertisement
ಗೋಪಾಲಕೃಷ್ಣ ಭಟ್ ಸರಳ ವ್ಯಕ್ತಿಯಾಗಿದ್ದು, ತಾವು ಉಳಿಸಿದ ಹಣದಿಂದ ಸಾವಿರಾರು ಜನರಿಗೆ ಸಹಾಯ ಮಾಡಿ ಪ್ರಸಿದ್ಧರಾಗಿದ್ದರು. ಹಿಂದು, ಮುಸ್ಲಿಂ, ಕ್ರಿಶ್ಚಿಯನ್ ಎಂಬ ಭೇದಭಾವ ತೋರದ ಇವರು, 50 ಸೆಂಟ್ಸ್ ಗಿಂತ ಕಡಿಮೆ ಸ್ಥಳವಿರುವ ಮತ್ತು ಶಾಶ್ವತ ಉದ್ಯೋಗವಿರದ 265 ಬಡವರಿಗೆ ಮನೆ ನಿರ್ಮಿಸಿಕೊಟ್ಟಿದ್ದರು.
ಸುಮಾರು 45 ವರ್ಷಗಳ ಹಿಂದೆ ಪತ್ನಿ ಸಮೇತರಾಗಿ ಕಾಶಿಯಾತ್ರೆ ಕೈಗೊಳ್ಳಲು ಮುಂದಾಗಿದ್ದರು. ಆ ಸಮಯದಲ್ಲಿ ಸುರಿದ ಭಾರಿ ಮಳೆಗೆ ಮನೆ ಕಳೆದುಕೊಂಡ ಸಮೀಪದ ವ್ಯಕ್ತಿಯೋರ್ವನ ದಯನೀಯ ಸ್ಥಿತಿ ಕಂಡು ಮರುಗಿದ ಇವರು ಕಾಶೀಯಾತ್ರೆಯನ್ನೇ ರದ್ದುಗೊಳಿಸಿ, ಆ ದುಡ್ಡಿನಲ್ಲಿ ಉಚಿತವಾಗಿ ಮನೆ ಕಟ್ಟಿಕೊಟ್ಟರು. ಅಂದಿನಿಂದ ಇವರು ಜನಸೇವೆ ಪ್ರಾರಂಭಿಸಿದ್ದರು. ಇದನ್ನೂ ಓದಿ: ಅಣ್ಣ, ತಂಗಿ ಒಂದೇ ಬಾರಿಗೆ ಪಿಎಸ್‌ಐ ಹುದ್ದೆಗೆ ಆಯ್ಕೆ
ಸುಮಾರು 10 ಜನರಿಗೆ ಆಟೋರಿಕ್ಷಾ ಹಾಗೂ ಸುಮಾರು 300 ಜನರಿಗೆ ಉಚಿತ ಹೊಲಿಗೆ ಯಂತ್ರ ನೀಡಿ ಸ್ವಉದ್ಯೋಗಕ್ಕೆ ಪ್ರೋತಾಹ ಕೂಡಾ ಮಾಡಿದ್ದರು. 1996ರಿಂದ ಆರಂಭಿಸಿ ಕೊರೋನಾ ಆರಂಭಿಕ ಹಂತದವರೆಗೆ ಪ್ರತಿ ಶನಿವಾರ ಉಚಿತ ವೈದ್ಯಕೀಯ ಶಿಬಿರಗಳನ್ನು ತನ್ನ ಮನೆಯಲ್ಲಿ ಆಯೋಜಿಸಿ ಲಕ್ಷಾಂತರ ಬಡ ರೋಗಿಗಳಿಗೆ ಸಹಾಯ ಮಾಡಿದ್ದರು.
ಕಡು ಬಡವರಿಗೆ ಉಚಿತವಾಗಿ ಹಾಗೂ ಸಾರ್ವಜನಿಕರಿಗೆ ಅತಿ ಕಡಿಮೆ ದರದಲ್ಲಿ ಶುಭ ಸಮಾರಂಭ ನಡೆಸಲು ಅನುವಾಗುವಂತಹ, ಸಕಲ ಸೌಲಭ್ಯಗಳನ್ನು ಹೊಂದಿದ ಸಾಯಿ ಮಂದಿರ ಎಂಬ ಸಮುದಾಯ ಭವನವನ್ನು ತನ್ನ ಮನೆ ಸಮೀಪ 2001ರಲ್ಲಿ ನಿರ್ಮಿಸಿದ್ದರು. ಹಲವು ಬಾರಿ ಸಾಮೂಹಿಕ ವಿವಾಹ ಕಾರ್ಯಕ್ರಮಗಳನ್ನು ಏರ್ಪಡಿಸಿ, ಸುಮಾರು 45 ಜೋಡಿಗಳ ವಿವಾಹ ನೆರವೇರಿಸಿದ್ದರು. ಇದನ್ನೂ ಓದಿ: 93 ಚುನಾವಣೆಗಳಲ್ಲಿ ಸೋತಿರೋ ಈ ವ್ಯಕ್ತಿಗೆ ಸೋಲಿನಲ್ಲೂ ಸೆಂಚುರಿ ಹೊಡೆಯೋ ಆಸೆ!
ಕೇರಳ ಮತ್ತು ಕರ್ನಾಟಕದ ಹಲವು ಸಚಿವರು, ಸಂಸದರು ಹಾಗೂ ಶಾಸಕರು ಇವರು ನಿರ್ಮಿಸಿದ ಮನೆ ಹಸ್ತಾಂತರ ಕಾರ್ಯಕ್ರಮಗಳಿಗೆ ಆಗಮಿಸಿ ಇವರ ಆಶೀರ್ವಾದ ಪಡೆದುಕೊಂಡಿದ್ದರು. ಲಯನ್ಸ್ ಕ್ಲಬ್, ಕಲ್ಕೂರ ಪ್ರತಿಷ್ಠಾನ ಸೇರಿದಂತೆ ಹಲವು ಸಂಘ-ಸಂಸ್ಥೆಗಳು ಇವರನ್ನು ಸನ್ಮಾನಿಸಿತ್ತು.
ಸಾಯಿರಾಂ ಭಟ್ಟರ ಕುರಿತು ಕನ್ನಡದಲ್ಲಿ ಮಹಾದಾನಿ ಸಾಯಿರಾಂ ಭಟ್ (ಗುಣಾಜೆ ರಾಮಚಂದ್ರ ಭಟ್), ಮಲಯಾಳಂನಲ್ಲಿ ದಾನ ಪುರುಷ (ಎ.ಬಿ. ಕುಟ್ಟಿಯಾನ) ಹಾಗೂ ಇದರ ಕನ್ನಡಾನುವಾದ ದಾನ ಗಂಗೆ (ರವಿ ನಾಯ್ಕಾಪು) ಮುಂತಾದ ಪುಸ್ತಕಗಳು ಪ್ರಕಟವಾಗಿವೆ. ಈ ಮಹಾ ದಾನಿ ಇಂದು ಒಬ್ಬ ಪುತ್ರ ಹಾಗೂ ಇಬ್ಬರು ಪುತ್ರಿಯರನ್ನು ಅಗಲಿದ್ದಾರೆ. ಸಾಯಿರಾಂ ಅಗಲಿಕೆಯಿಂದಾಗಿ ಪ್ರಯೋಜನ ಪಡೆದವರು ಕಂಬನಿ ಮಿಡಿದಿದ್ದಾರೆ.
ಸಾಯಿರಾಂ ಗೋಪಾಲಕೃಷ್ಣ ಭಟ್ ಅವರ ಪಬ್ಲಿಕ್ ಹೀರೋ ವೀಡಿಯೋವನ್ನು ನೋಡಲು ಕ್ಲಿಕ್ ಮಾಡಿ: ಪಬ್ಲಿಕ್ ಹೀರೋ ಸಾಯಿರಾಂ ಗೋಪಾಲಕೃಷ್ಣ ಭಟ್