ದಾವಣಗೆರೆ: ವೃತ್ತಿಯಲ್ಲಿ ಶಿಕ್ಷಕರಾಗಿ ನಿವೃತ್ತಿಯಾಗಿರೋ ದಾವಣಗೆರೆಯ ಶಿವಾನಂದಪ್ಪ ಅಡ್ಮನಿ ಇಳಿವಯಸ್ಸಿನಲ್ಲಿ ಮಕ್ಕಳು-ಮೊಮ್ಮಕ್ಕಳ ಜೊತೆ ಕೂತು ಕಾಲ ಕಳೆಯಲಾರದೆ ಪ್ರಕೃತಿ ಪ್ರೇಮ ಮೆರೆಯುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾರೆ.
ಅಂಗವಿಕಲರಾದರೂ ಊರುಗೋಲು ಸಹಾಯದಿಂದ ಪಾರ್ಕ್ ಸ್ವಚ್ಛಗೊಳಿಸುತ್ತಿರುವ ಶಿವಾನಂದಪ್ಪ ದಾವಣಗೆರೆಯ ಚಿಕ್ಕಮಣಿ ದೇವರಾಜ ಅರಸ್ ಬಡಾವಣೆ ನಿವಾಸಿಯಾಗಿದ್ದಾರೆ. ಹರಿಹರದ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ 30 ವರ್ಷಗಳ ಕಾಲ ಸಹಾಯಕ ಮುಖ್ಯಶಿಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾಗಿದ್ದಾರೆ. ಕಳೆದ 10 ವರ್ಷಗಳಿಂದ ಚಿಕ್ಕಮಣಿ ದೇವರಾಜ ಅರಸ್ ಬಡಾವಣೆಯಲ್ಲಿ ನೆಲೆಸಿದ್ದಾರೆ. ಬಡಾವಣೆಯ ಸುತ್ತಮುತ್ತಲಿರುವ ಮೂರು ಪಾರ್ಕ್ ಗಳನ್ನು ದತ್ತು ಪಡೆದಿದ್ದು ಸ್ವಚ್ಛತೆ ಜೊತೆಗೆ ಗಿಡಮರಗಳಿಗೆ ನೀರುಣಿಸಿ ಬೆಳೆಸುತ್ತಿದ್ದಾರೆ.
Advertisement
Advertisement
ಕಳೆದ 30 ವರ್ಷಗಳಿಂದ ದಾವಣಗೆರೆ ತಾಲೂಕಿನ ಹರಿಹರದಲ್ಲಿ ಅಂಬೇಡ್ಕರ್ ಪ್ರೌಢಶಾಲೆಯಲ್ಲಿ ಸಹಾಯಕ ಮುಖ್ಯಶಿಕ್ಷಕರಾಗಿ ಕೆಲಸ ಮಾಡಿ ಶಿವಾನಂದಪ್ಪ ನಿವೃತ್ತಿಯಾಗಿದ್ದಾರೆ. ಕಳೆದ ಹತ್ತು ವರ್ಷಗಳಿಂದ ಚಿಕ್ಕಮಣಿ ದೇವರಾಜ ಅರಸ್ ಬಡಾವಣೆಯಲ್ಲಿ ವಾಸವಾಗಿದ್ದು, ಬಡಾವಣೆಯ ಸುತ್ತಮುತ್ತಲಿರುವ ಮೂರು ಪಾರ್ಕ್ ಗಳನ್ನು ದತ್ತು ಪಡೆದಿದ್ದು ನಿಸ್ವಾರ್ಥತೆಯಿಂದ ಅವುಗಳನ್ನು ಸ್ವಚ್ಛಗೊಳಿಸುವ ಹಾಗೂ ಮರಗಿಡಗಳನ್ನು ಬೆಳೆಸುವ ಕೆಲಸ ಮಾಡುತ್ತಾರೆ.
Advertisement
ಬೆಳಗ್ಗೆ ಎದ್ದಾಗಿನಿಂದ ಇವರದ್ದು ಇದೇ ಕೆಲಸ. 1994 ರಲ್ಲಿ ಇವರಿಗೆ ಅಪಘಾತವಾಗಿ ಬಲಗಾಲಿನ ಮಂಡಿಚಿಪ್ಪು ನಜ್ಜುಗುಜ್ಜಾಗಿ ಅಂಗವಿಕಲರಾಗಿದ್ದಾರೆ. ಆದರೂ ತೆವಳುತ್ತಲೇ ಇಡೀ ಪಾರ್ಕ್ ಅನ್ನು ಸ್ವಚ್ಛಗೊಳಿಸುತ್ತಾ ಗಿಡ ಮರಗಳನ್ನು ಬೆಳೆಸುತ್ತಿದ್ದಾರೆ. ಪರಿಸರದ ಬಗ್ಗೆ ಅತಿಯಾದ ಪ್ರೀತಿ ಹೊಂದಿರುವ ಶಿವಾನಂದಪ್ಪ, ಸಾಯುವವರೆಗೂ ನಾನು ಇದೇ ಕೆಲಸ ಮಾಡುತ್ತೇನೆ ಪರಿಸರವನ್ನು ಉಳಿಸಿ ಬೆಳೆಸುವುದೇ ನನ್ನ ಕಾಯಕ ಎಂದು ಹೇಳುತ್ತಾರೆ.
Advertisement
ಶಿವಾನಂದಪ್ಪನವರು ಇಳಿ ವಯಸ್ಸಿನಲ್ಲಿ ಊರುಗೋಲನ್ನು ಹಿಡಿದು ಇಡೀ ಪಾರ್ಕ್ ಅನ್ನು ಸ್ವಚ್ಛ ಗೊಳಿಸುತ್ತಿರುವುದಲ್ಲದೆ, ಬೇಸಿಗೆಯಲ್ಲಿ ಗಿಡಮರಗಳಿಗೆ ವಾಟರ್ ಕ್ಯಾನಿನಲ್ಲಿ ನೀರು ಹಾಕುತ್ತಾರೆ. ಅಲ್ಲದೆ ಕೇವಲ ಪಾರ್ಕ್ ಒಂದೇ ಅಲ್ಲ ಬಡಾವಣೆಯ ರಸ್ತೆಗಳು, ದೇವಸ್ಥಾನ, ಹಾಸ್ಟೆಲ್ ಗಳ ಮುಂದೆ ಕೂಡ ಗಿಡ ಮರಗಳನ್ನು ಬೆಳೆಸಿ ಪೋಷಿಸುತ್ತಿದ್ದಾರೆ.
ತಮ್ಮ ಮನೆ ಮುಂಭಾಗವಷ್ಟೇ ಅಲ್ಲ ಖಾಲಿ ಕಂಡು ಬಂದರೆ ಸಾಕು ಅಲ್ಲಿ ಗಿಡಗಳನ್ನು ನೆಟ್ಟು ಅವುಗಳನ್ನು ಪೋಷಿಸುತ್ತಿದ್ದಾರೆ. ಶಿವಾನಂದಪ್ಪನವರಿಗೆ ಒಬ್ಬನೇ ಮಗನಿದ್ದು ಇವರ ಈ ಕೆಲಸಕ್ಕೆ ಕುಟುಂಬಸ್ಥರ ಬೆಂಬಲವಿದೆ. ಆರೋಗ್ಯದ ಕಡೆ ಗಮನಕೊಡಿ ಎಂದು ಯಾವಾಗಲೂ ಅವರ ಹೆಂಡತಿ ಬೈಯುತ್ತಿರುತ್ತಾರೆ. ಅಲ್ಲದೆ ಶಿವಾನಂದಪ್ಪನವರ ಈ ನಿಸ್ವಾರ್ಥ ಸೇವೆಯಿಂದ ಇಡೀ ಬಡಾವಣೆಯ ಜನರು ಅವರ ಅಭಿಮಾನಿಗಳಾಗಿ ಈ ನಿಸ್ವಾರ್ಥ ಸೇವೆಯಲ್ಲಿ ಕೈ ಜೋಡಿಸುತ್ತಿದ್ದಾರೆ.
ಒಟ್ಟಾರೆಯಾಗಿ ಅಂಗವಿಕಲರಾಗಿದ್ದರು ಕೂಡ ಪರಿಸರ ರಕ್ಷಣೆ ಹಾಗೂ ಸ್ವಚ್ಛತೆಯ ಬಗ್ಗೆ ನಿಸ್ವಾರ್ಥ ಸೇವೆ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ.