Connect with us

6 ವರ್ಷದ ಹಿಂದೆ ಮೂರು ಮಕ್ಕಳಿದ್ದ ಗಡಿನಾಡ ಕನ್ನಡ ಶಾಲೆಯಲ್ಲಿ ಈಗ ಓದ್ತಿದ್ದಾರೆ 120 ಮಕ್ಕಳು!

6 ವರ್ಷದ ಹಿಂದೆ ಮೂರು ಮಕ್ಕಳಿದ್ದ ಗಡಿನಾಡ ಕನ್ನಡ ಶಾಲೆಯಲ್ಲಿ ಈಗ ಓದ್ತಿದ್ದಾರೆ 120 ಮಕ್ಕಳು!

ಬೆಳಗಾವಿ: ಇಂದು ನಮ್ಮ ಪಬ್ಲಿಕ್ ಹೀರೋ ಒಬ್ಬರಲ್ಲ, ಮೂವರು. ಗಡಿನಾಡು ಬೆಳಗಾವಿಯಿಂದ ಬಂದಿರೋ ಹೀರೋಗಳಿವರು. ಕೇವಲ ಮೂವರು ಮಕ್ಕಳಿದ್ದ ಸರ್ಕಾರಿ ಕನ್ನಡ ಶಾಲೆಯನ್ನು ದತ್ತು ಪಡೆದು ಅಭಿವೃದ್ಧಿ ಮಾಡಿದ್ದಾರೆ. ಇವತ್ತು ಈ ಶಾಲೆಯಲ್ಲಿ 120 ಮಕ್ಕಳಿದ್ದಾರೆ. ಎಲ್ಲರಿಗೂ ಹೈಟೆಕ್ ಶಿಕ್ಷಣ ಸಿಗುತ್ತಿದೆ.

ರಾಮದುರ್ಗ ಮೂಲದ ವೈದ್ಯ ದಂಪತಿ ಶಶಿಕಾಂತ ಕುಲಗೋಡ ಅವರ ಪತ್ನಿ ವಿಜಯಲಕ್ಷ್ಮಿ ಹಾಗೂ ರವೀಂದ್ರ ಗುರುವನ್ನವರ ಇವತ್ತಿನ ನಮ್ಮ ಪಬ್ಲಿಕ್ ಹೀರೋಗಳು. ಬೆಳಗಾವಿ ಮಹಾನಗರದ ಶಿವಬಸವ ನಗರದ ಪ್ರಾಥಮಿಕ ಕನ್ನಡ ಶಾಲೆಯಲ್ಲಿ 6 ವರ್ಷಗಳ ಹಿಂದೆ ಕೇವಲ ಮೂವರೇ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದರು. ಮೂರು ಕೊಠಡಿಯ ಶಾಲೆಗೆ ಶಿಕ್ಷಕರು ಬೇಕಾಬಿಟ್ಟಿಯಾಗಿ ಬಂದು ಪಾಠ ಮಾಡಿ ಹೋಗ್ತಿದ್ರು. ರಾತ್ರಿಯಾದ್ರೆ ಶಾಲಾ ಕಟ್ಟಡದಲ್ಲಿ ಅಕ್ರಮ ಚಟುವಟಿಕೆಗಳು ನಡೆಯುತ್ತಿದ್ದವು.

ಶಾಲೆಯ ಪಕ್ಕದಲ್ಲೇ ಇದ್ದ ವೈದ್ಯ ದಂಪತಿ ಶಶಿಕಾಂತ ಕುಲಗೋಡ ಹಾಗೂ ಇವರ ಪತ್ನಿ ವಿಜಯಲಕ್ಷ್ಮಿ ಶಾಲೆ ಅಭಿವೃದ್ಧಿಗೆ ಪಣ ತೊಟ್ಟರು. ಶಾಲೆಯನ್ನು ದತ್ತು ಪಡೆದು ಎರಡು ಹೊಸ ಕೊಠಡಿಗಳ ಜೊತೆಗೆ 4 ಹೈಟೆಕ್ ಶೌಚಾಲಯ ಕಟ್ಟಿಸಿದ್ದಾರೆ. ಸತತ 6 ವರ್ಷಗಳ ಪರಿಶ್ರಮದಿಂದ ಈ ಶಾಲೆ ಈಗ ಹೈಟೆಕ್ ಆಗಿದೆ. ಈ ವೈದ್ಯ ದಂಪತಿ ವಾರಕ್ಕೆ ಮೂರು ದಿನ ಸಂಜೆ ಹೊತ್ತಲ್ಲಿ ಮಕ್ಕಳಿಗೆ ಟ್ಯೂಷನ್ ಕೂಡಾ ಮಾಡ್ತಾರೆ.

ವೈದ್ಯ ದಂಪತಿ ಜೊತೆಗೆ ರವೀಂದ್ರ ಗುರುವನ್ನವರ ಅನ್ನೋರು ಕೈ ಜೋಡಿಸಿದ್ದಾರೆ. ಐಐಟಿಯಲ್ಲಿ ಪಿಎಚ್‍ಡಿ ಮಾಡಿರೋ ಇವರು ಪ್ರತಿ ಶನಿವಾರ ಹಾಗೂ ಭಾನುವಾರ ಮಕ್ಕಳಿಗೆ ವಿಶೇಷ ಕ್ಲಾಸ್ ತೆಗೆದುಕೊಳ್ತಾರೆ. ಈ ಶಾಲಾ ಮಕ್ಕಳಿಗೆ ಹೊಸ ಯೂನಿಫಾರಂ, ನೋಟ್‍ಬುಕ್, ಪೆನ್, ಪುಸ್ತಕ ಎಲ್ಲವನ್ನೂ ಇವರ ದುಡ್ಡಿನಿಂದಲೇ ಕೊಡಿಸಿದ್ದಾರೆ. ಟೀಚರ್‍ಗಳಿಗೆ ವಿಶೇಷ ಟ್ರೈನಿಂಗ್ ಕೂಡಾ ಕೊಡ್ತಾರೆ. ಮಕ್ಕಳಿಗೆ ಸರ್ಕಾರದ ಅನ್ನಭಾಗ್ಯದ ಜೊತೆ ಇಲ್ಲಿ ಮೊಳಕೆ ಕಟ್ಟಿದ ಕಾಳು ಸೇರಿದಂತೆ ಪೌಷ್ಠಿಕಾಂಶದ ಆಹಾರ ನೀಡಲಾಗುತ್ತೆ. ಶಾಲೆ ನೋಡಿಕೊಳ್ಳಲು ಒಬ್ಬ ಸೆಕ್ಯೂರಿಟಿ ಗಾರ್ಡ್ ಕೂಡಾ ನೇಮಿಸಲಾಗಿದೆ. ಇವರಿಗೆ ಶಾಲಾ ಆವರಣದಲ್ಲೇ ಮನೆ ಕಟ್ಟಿಕೊಟ್ಟಿದ್ದು, ಇವರ ಸಂಬಳವನ್ನೂ ಈ ಪ್ರಾಧ್ಯಾಪಕರೇ ನೀಡುತ್ತಿದ್ದಾರೆ.

ಗಡಿನಾಡಲ್ಲಿ ಕನ್ನಡ ಹಾಗೂ ಕನ್ನಡ ಶಾಲೆಗಳೇ ಮಾಯವಾಗ್ತಿರೋ ಈ ಕಾಲದಲ್ಲಿ ಈ ಮೂವರ ಕೆಲಸ ನಿಜಕ್ಕೂ ಶ್ಲಾಘನೀಯ.

https://www.youtube.com/watch?v=jG3GoTOCDuo

 

Advertisement
Advertisement