-ನೇರಲೇಕೆರೆಯ ಸವಿತಾ ನಮ್ಮ ಪಬ್ಲಿಕ್ ಹೀರೋ
ಹಾಸನ: ಪುರುಷ ಪ್ರಧಾನ ಸಮಾಜದಲ್ಲಿ ಹಲವು ಮಹಿಳೆಯರು ವಿಶೇಷ ಸಾಧನೆ ಮೂಲಕ ಗಮನ ಸೆಳೆದಿದ್ದಾರೆ. ಅದೇ ರೀತಿ ಹಾಸನದ ಮಹಿಳೆಯೊಬ್ಬರು ಬಡತನವನ್ನು ಮೆಟ್ಟಿನಿಂತು ಕೆಲಸ ಗಿಟ್ಟಿಸಿದ್ದಲ್ಲದೆ, ಬಿಡುವಿನ ಸಮಯದಲ್ಲಿ ಪುರುಷರಂತೆ ಹಾರ್ಮೋನಿಯಂ ನುಡಿಸುತ್ತ, ಹಳ್ಳಿಗಳಲ್ಲಿ ಪೌರಾಣಿಕ ನಾಟಕ ಕಲಿಸುತ್ತ ಕಲಾ ಸೇವೆ ಮಾಡುತ್ತಿದ್ದಾರೆ. ಈ ಮೂಲಕ ತಮ್ಮ ಕೈಯಲ್ಲಿ ಏನು ಮಾಡಲು ಸಾಧ್ಯ ಎನ್ನುವವರಿಗೆ ಸ್ಪೂರ್ತಿ ಆಗಿದ್ದಾರೆ.
ಹಾಸನ ಜಿಲ್ಲೆ, ಚನ್ನರಾಯಪಟ್ಟಣ ತಾಲ್ಲೂಕಿನ ನೇರಲೇಕೆರೆಯ ನಿವಾಸಿ ಸವಿತಾ ಇವತ್ತಿನ ನಮ್ಮ ಪಬ್ಲಿಕ್ ಹೀರೋ. ಹಿಂದಿ ಬಿಎಡ್ ಪದವಿಧರೆಯಾಗಿರುವ ಸವಿತಾ ಅವರು ಪ್ರಾಥಮಿಕ ಕೃಷಿ ಸಹಕಾರ ಪತ್ತಿನಲ್ಲಿ ಕಾರ್ಯದರ್ಶಿಯಾಗಿ ಕೆಲಸ ಮಾಡಿಕೊಂಡಿದ್ದಾರೆ. ಬಿಡುವಿನ ವೇಳೆ ಪೌರಾಣಿಕ ನಾಟಕ ಕಲಿಸುತ್ತಾರೆ. ಚಿಕ್ಕಂದಿನಿಂದಲ್ಲೂ ಸವಿತಾ ಅವರಿಗೆ ಪೌರಾಣಿಕ ನಾಟಕ ಅಂದ್ರೆ ಇಷ್ಟ. ಹಾರ್ಮೋನಿಯಂ ಕಲಿಬೇಕೆಂಬುದು ಅಪಾರ ಆಸೆ. ಅದರಂತೆ ತಮ್ಮ ಕೆಲಸದ ಬಿಡುವಿನಲ್ಲಿ ಹಾರ್ಮೋನಿಯಂ ಕಲಿತರು. ಕುರುಕ್ಷೇತ್ರ, ರಾಜ ಸತ್ಯವ್ರತ ನಾಟಕಗಳನ್ನು ಕರಗತ ಮಾಡಿಕೊಂಡರು. ಇದೀಗ ರಾಮಾಯಣ ನಾಟಕವನ್ನು ಅಭ್ಯಾಸ ಮಾಡುತ್ತಿದ್ದಾರೆ. ತಾವು ಸಂಪೂರ್ಣವಾಗಿ ಕಲಿತ ನಾಟಕಗಳನ್ನು ಇತರರಿಗೆ ಕಲಿಸುವ ಮೂಲಕ ಕಲಾಸೇವೆಯಲ್ಲಿ ತೊಡಗಿಕೊಂಡಿದ್ದಾರೆ.
ನಾಟಕ ಕಲಿಸಲು ಹಳ್ಳಿಯ ಜನ ಇವರಿಗೆ ಹಣ ನೀಡುತ್ತಾರಾದರೂ ಅವರು ನೀಡುವ ದುಡ್ಡು ಸವಿತಾರ ಓಡಾಟಕ್ಕೆ ಸಾಕಾಗುತ್ತದೆ. ಕೆಲವೊಮ್ಮೆ 50 ಕಿಲೋಮೀಟರ್ ವರೆಗೂ ತಮ್ಮ ಸ್ಕೂಟರ್ ನಲ್ಲಿ ಹೋಗಿ ನಾಟಕ ಕಲಿಸಿದ್ದುಂಟು. ಹಣಕ್ಕಾಗಿ ನಾನು ನಾಟಕ ಕಲಿಸುತ್ತಿಲ್ಲ. ಇದೊಂದು ಕಲಾ ಸೇವೆ ಎಂದು ಸವಿತಾ ಹೇಳುತ್ತಾರೆ.