ನನಸಾಯ್ತು 30 ವರ್ಷಗಳ ಅರಣ್ಯದ ಕನಸು – 10 ಎಕರೆಯಲ್ಲಿ ತಲೆಯೆತ್ತಿದೆ ಸಮೃದ್ಧ ಕಾಡು

Public TV
2 Min Read
MNG PUTTUR

-ಸರ್ಕಾರವನ್ನೇ ನಾಚಿಸಿದ ಪುತ್ತೂರಿನ ಸದಾಶಿವ ಮರಿಕೆ

ಮಂಗಳೂರು: ಒಂದಿಂಚು ಜಾಗ ಇದ್ದರೆ ಅದರಲ್ಲಿ ಲಾಭ ಪಡೆಯಬೇಕೆನ್ನುವವರೇ ಹೆಚ್ಚು. ಅದರಲ್ಲೂ ಪಿತ್ರಾರ್ಜಿತ ಆಸ್ತಿ ಸಿಕ್ಕಿದರೆ ಅದನ್ನು ತಿಂದು ಮುಗಿಸೋದು ಹೇಗೆ ಅನ್ನೋದನ್ನೇ ಕಾಯುತ್ತಿರುವ ಜನ ಇರೋ ಕಾಲ ಇದು. ಆದರೆ ಇಲ್ಲೊಬ್ಬರು ತಮ್ಮ ಎಕರೆಗಟ್ಟಲೆ ಜಾಗವನ್ನು ಪರಿಸರಕ್ಕಾಗಿಯೇ ಅರ್ಪಣೆಗೈದಿದ್ದಾರೆ. ಅರಣ್ಯ ಇಲಾಖೆ, ಸರ್ಕಾರವನ್ನು ನಾಚಿಸುವಂತೆ ಎಕರೆಗಟ್ಟಲೆ ತಮ್ಮ ಸ್ವಂತ ಜಾಗದಲ್ಲಿ ದಟ್ಟ ಅರಣ್ಯವನ್ನು ಬೆಳೆಸಿದ್ದಾರೆ. ಇಂತಹ ಅಪರೂಪದ ಪರಿಸರ ಪ್ರೇಮಿ ಪುತ್ತೂರು ತಾಲೂಕಿನ ಸಂಟ್ಯಾರು ನಿವಾಸಿ ಪ್ರಗತಿಪರ ಕೃಷಿಕ ಸದಾಶಿವ ಮರಿಕೆ ನಮ್ಮ ಪಬ್ಲಿಕ್ ಹೀರೋ.

vlcsnap 2019 09 24 08h32m08s123 e1569294537449

ಪರಿಸರದ ಬಗ್ಗೆ ಅತಿಯಾದ ಕಾಳಜಿ ಇರುವ ಸದಾಶಿವ ಮರಿಕೆ ತಮ್ಮಿಂದ ಏನಾದರೂ ಈ ಪ್ರಕೃತಿಗೆ ಅಳಿಲು ಸೇವೆ ಮಾಡಬೇಕೆಂದು ಕಳೆದ 30 ವರ್ಷಗಳ ಹಿಂದೆ ಕಂಡಿದ್ದ ಕನಸನ್ನು ಇದೀಗ ನನಸಾಗಿಸಿದ್ದಾರೆ. ನಾಶವಾಗುತ್ತಿರುವ ಪರಿಸರವನ್ನು ಉಳಿಸಬೇಕು, ಜೊತೆಗೆ ಪ್ರಾಣಿ ಪಕ್ಷಿಗಳಿಗೆ ಅದರಿಂದ ಸಹಕಾರಿ ಆಗಬೇಕೆಂದುಕೊಂಡ ಸದಾಶಿವರವರು ಅದಕ್ಕಾಗಿ ದಟ್ಟ ಅರಣ್ಯವನ್ನು ಮಾಡಬೇಕೆಂದು ಪಣ ತೊಟ್ಟಿದ್ದರು. ಅದರಂತೆ ತಮ್ಮ ಪೂರ್ವಜರಿಂದ ಬಂದಿರುವ ಒಟ್ಟು 25 ಎಕರೆ ಜಮೀನಿನ ಪೈಕಿ ಕೃಷಿ ರಹಿತ ಹತ್ತು ಎಕರೆ ಬರಡು ಭೂಮಿಯಲ್ಲಿ ಕಾಡು ಬೆಳೆಸಬೇಕೆಂದು ನಿರ್ಧರಿಸಿದ್ದರು. ಅದಕ್ಕಾಗಿ ಕಾಡಿನಲ್ಲಿರುವ ವಿವಿಧ ತಳಿಯ ಮರಗಳ ಗಿಡಗಳನ್ನು ತಂದು ಗುಡ್ಡದ ಉದ್ದಕ್ಕೂ ನೆಟ್ಟಿದ್ದರು.

PUTTUR 1

30 ವರ್ಷಗಳ ಸತತ ಪರಿಶ್ರಮದ ಬಳಿಕ ಗಿಡಗಳು ಮರವಾಗಿ ಬೆಳೆದಿದ್ದು ಇದೀಗ ದಟ್ಟ ಅರಣ್ಯವಾಗಿದೆ. ತಮ್ಮ ಸ್ವಂತ ಜಮೀನಿನಲ್ಲೇ ಅರಣ್ಯ ಇಲಾಖೆ ಹಾಗೂ ಸರ್ಕಾರವನ್ನು ನಾಚಿಸುವಂತಹ ದಟ್ಟ ಅರಣ್ಯವನ್ನು ಬೆಳೆಸಿದ್ದಾರೆ. ಇದರಿಂದಾಗಿ ಒಂದೆಡೆ ಸಮೃದ್ಧ ಕಾಡು, ಅದರಿಂದಾಗಿ ಜಮೀನಿನಲ್ಲಿ ನೀರಿನ ಉತ್ಪತ್ತಿಯೂ ಆಗಿದೆ. ಇದೀಗ ತಾವೇ ಬೆಳೆಸಿದ ದಟ್ಟ ಅರಣ್ಯದಲ್ಲಿ ಪ್ರತಿದಿನ ಒಂದು ಸುತ್ತು ಹೊಡೆಯುವ ಸದಾಶಿವರವರು ಅರಣ್ಯದಿಂದ ತೃಪ್ತಿ ಕಂಡಿದ್ದಾರೆ. ಕಾಡಿನಲ್ಲಿ ಹಕ್ಕಿಗಳ ಇಂಚರ, ಚಿಲಿಪಿಲಿಯ ನಾದ ಕೇಳುತ್ತಾರೆ. ಭೂಮಿಯಲ್ಲಿ ಕಾಡು, ಹಸಿರು ಇಲ್ಲದೇ ಇದ್ದರೆ ಮನುಷ್ಯನ ಉಳಿವು ಸಾಧ್ಯವಿಲ್ಲ ಎಂಬುವುದು ಸದಾಶಿವ ಅವರ ಮಾತು.

vlcsnap 2019 09 24 08h33m52s144

ಆರಂಭದಲ್ಲಿ ಜಮೀನಿನ ಮಧ್ಯೆ ಇದ್ದ ಕೆರೆಯಿಂದಲೇ ಗಿಡಗಳಿಗೆ ನೀರುಣಿಸುತ್ತಿದ್ದರು. ಬೇಸಿಗೆಯಲ್ಲಿ ನೀರು ಪೂರೈಸುವುದು ಕಷ್ಟವೂ ಆಗಿತ್ತು. ಆದರೆ ಕಾಡು ಬೆಳೆದಂತೆ ಜಮೀನಿನಲ್ಲಿ ನೀರಿನ ಸಮಸ್ಯೆಯೂ ಇಲ್ಲದಾಗಿದೆ. ಕಾಡಿನ ಮಧ್ಯೆ ಬಿದ್ದ ಮಳೆ ನೀರು ಅಲ್ಲಿಯೇ ಇಂಗುವಂತೆ ಇಂಗು ಗುಂಡಿಗಳನ್ನು ನಿರ್ಮಿಸಿದ್ದಾರೆ. ಈಗ ಒಂದೆಡೆ ಸಮೃದ್ಧ ಕಾಡು, ಇನ್ನೊಂದೆಡೆ ಯಾವ ಬರಗಾಲ ಬಂದರೂ ಕಡಿಮೆಯಾಗದಷ್ಟು ಯಥೇಚ್ಛ ನೀರು ಜಮೀನಿನಲ್ಲಿ ಸೃಷ್ಟಿಯಾಗಿದ್ದು ಕೃಷಿ ಬದುಕಿನಲ್ಲಿ ಸಂತೃಪ್ತಿ ಕಂಡಿದ್ದಾರೆ. ಇವರ ದಟ್ಟ ಕಾಡಿನಿಂದಾಗಿ ಅಕ್ಕಪಕ್ಕದ ಜಮೀನುಗಳಲ್ಲಿಯೂ ಅಂತರ್ಜಲ ಮಟ್ಟ ಹೆಚ್ಚಾಗಿದೆ.

PUTTUR

ಕಾಡು ಕಡಿದು ನಾಶ ಮಾಡುವ ಸರ್ಕಾರ, ತಮ್ಮ ಜಮೀನುಗಳಲ್ಲಿ ಬೆಳೆದು ನಿಂತ ಮರಗಳನ್ನು ಕಡಿದು ಮಾರಾಟ ಮಾಡೋ ಜನಸಾಮಾನ್ಯರ ಮಧ್ಯೆ ಸದಾಶಿವ ಮರಿಕೆ ತಮ್ಮದೇ ಜಾಗದಲ್ಲಿ ದಟ್ಟಾರಣ್ಯವನ್ನೇ ಬೆಳೆಸಿ ಗಮನ ಸೆಳೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *