ಮಡಿಕೇರಿ: ಕೈ ಕಾಲು ಎಲ್ಲವೂ ಸರಿ ಇದ್ದರೂ ದುಡಿದುಕೊಂಡು ತಿನ್ನೋಕೆ ಕೆಲವರು ಸೋಮಾರಿಗಳಾಗಿ ಇರ್ತಾರೆ. ಆದರೆ ದೃಷ್ಟಿ ಇಲ್ಲದಿದ್ರೂ ನಮ್ಮ ಇವತ್ತಿನ ಪಬ್ಲಿಕ್ ಹೀರೋ ರುದ್ರಾಚಾರಿ ಅವರು ಬದುಕು ಸಾಗಿಸುತ್ತಿದ್ದಾರೆ. ವಿಶೇಷ ಅಚ್ಚರಿ ಅಂದ್ರೆ ಇವರು ಟೈಲರಿಂಗ್ ಮಾಡುತ್ತಿದ್ದಾರೆ.
ಕೊಡಗಿನ ಸೋಮವಾರಪೇಟೆಯ ಹಾನಗಲ್ಲು ಶೆಟ್ಟಳ್ಳಿಯ ರುದ್ರಾಚಾರಿ ಅವರು ಇವತ್ತಿನ ನಮ್ಮ ಪಬ್ಲಿಕ್ ಹೀರೋ. 60 ವರ್ಷದ ಇವರಿಗೆ ಕಣ್ಣು ಕಾಣಲ್ಲ. 21ನೇ ವಯಸ್ಸಿನಲ್ಲೇ ಕಣ್ಣು ಮಂಜಾಗಲು ಆರಂಭಿಸಿ, 33ನೇ ವಯಸ್ಸಿಗೆ ಸಂಪೂರ್ಣ ದೃಷ್ಟಿಯೇ ಹೋಗಿದೆ. ಆದರೂ ಯಾರಿಗೂ ಕಡಿಮೆ ಇಲ್ಲದಂತೆ ಶಾಲಾ ಮಕ್ಕಳ ಯುನಿಫಾರಂ, ಮಹಿಳೆಯರ ಉಡುಪುಗಳನ್ನು ಹೊಲೆಯುತ್ತಾ ತುತ್ತಿನ ಚೀಲ ತುಂಬಿಕೊಳ್ಳುತ್ತಿದಾರೆ. ಕಣ್ಣು ಕಾಣಲ್ಲ ಅಂತಾರೆ, ಮತ್ತೆ ಟೈಲರಿಂಗ್ ಮಾಡ್ತಾರಾ ಎಂದು ಅಚ್ಚರಿಯಾಗುತ್ತದೆ. ಮಂಗಳೂರಿನ ಅತ್ತಾವರದ ವಿಶೇಷ ತರಬೇತಿ ರುದ್ರಾಚಾರಿ ಅವರಿಗೆ ವರವಾಗಿದೆ.
Advertisement
Advertisement
ಕಳೆದ ವರ್ಷ ಸುರಿದ ಮಳೆಯಿಂದಾಗಿ ಇವರ ಮನೆಯೂ ಕೊಚ್ಚಿ ಹೋಗಿದೆ. ಬ್ಯಾಂಕ್‍ಗಳನ್ನು ಕೇಳಿದ್ರೆ, ಕಣ್ಣು ಕಾಣದಿರುವ ನೀವು ಟೈಲರಿಂಗ್ ಕೆಲಸ ಹೇಗೆ ಮಾಡ್ತೀರಾ. ನಿಮಗೆ ಸಾಲ ತೀರಿಸೋಕೆ ಆಗುತ್ತಾ ಅಂತ ಪ್ರಶ್ನಿಸ್ತಿವೆಯೇ ಹೊರತು ಸಾಲ ಕೊಡುತ್ತಿಲ್ಲ. ರುದ್ರಾಚಾರಿ ಅವರ ಪತ್ನಿ ಹಲವು ವರ್ಷಗಳ ಹಿಂದೆಯೇ ಸಾವನ್ನಪ್ಪಿದ್ದಾರೆ.
Advertisement
ಬದುಕಿಗೆ ಬೆಳಕಾಗಿದ್ದ ತಾಯಿಯನ್ನು 4 ವರ್ಷದ ಹಿಂದೆ ಕಳೆದುಕೊಂಡಿದ್ದು ಈಗಲೂ ಅಮ್ಮನ ನೆನೆದು ಕಣ್ಣೀರಾಗ್ತಾರೆ. ಇಬ್ಬರು ಮಕ್ಕಳಿದ್ದರೂ ಜೊತೆಗಿಲ್ಲ. ಒಟ್ಟಿನಲ್ಲಿ ಕಣ್ಣು ಕಾಣದಿದ್ದರೂ ಸ್ವಾಭಿಮಾನದಿಂದ ಬದುಕು ನಡೆಸುತ್ತಿರುವ ಇವರಿಗೆ ನಮ್ಮದೊಂದು ಸಲಾಂ.