ಕೊಪ್ಪಳ: ಸರ್ಕಾರಿ ನೌಕರಿಯಿಂದ ನಿವೃತ್ತಿ ಹೊಂದಿದರೆ ಸಾಕಪ್ಪ ಸಾಕು. ಮುಂದಿನ ಜೀವನವನ್ನು ಮಕ್ಕಳು, ಮೊಮ್ಮಕ್ಕಳೊಂದಿಗೆ ಆರಾಮಾಗಿ ಕಳೆಯಬಹುದೆಂದು ಬಹುತೇಕರು ಯೋಚನೆ ಮಾಡುತ್ತಾರೆ. ಕೆಲವರು ಖಾಸಗಿ ಉದ್ಯೋಗದತ್ತ ಮುಖ ಮಾಡುತ್ತಾರೆ. ಇಂದಿನ ನಮ್ಮ ಪಬ್ಲಿಕ್ ಹೀರೋ ಶಿಕ್ಷಕ ವೃತ್ತಿಯಿಂದ ನಿವೃತ್ತಿಯಾಗಿ 16 ವರ್ಷ ಕಳೆದರೂ ಇಂದಿಗೂ ಮಕ್ಕಳಿಗೆ ಉಚಿತ ಪಾಠ ಮಾಡುತ್ತಿದ್ದಾರೆ.
ಕೊಪ್ಪಳದ ಕಿನ್ನಾಳ ಗ್ರಾಮದ ಶಂಕ್ರಪ್ಪ ಮಹೇಂದ್ರಕರ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ. 75 ವರ್ಷದ ಶಂಕ್ರಪ್ಪ ಮೇಷ್ಟ್ರು ನಿವೃತ್ತ ಮುಖ್ಯ ಶಿಕ್ಷಕರು. ವಿಶ್ರಾಂತ ಜೀವನಕ್ಕೆ ಮೊರೆ ಹೋಗದ ಶಂಕ್ರಪ್ಪ ಮೇಷ್ಟ್ರು ಈಗಲೂ ವಾರಕ್ಕೆ ಮೂರು ಸರ್ಕಾರಿ ಶಾಲೆಗೆ ತೆರಳಿ ಮಕ್ಕಳಿಗೆ ಉಚಿತವಾಗಿ ಪಾಠ ಮಾಡುತ್ತಾರೆ. ಮಕ್ಕಳಿಗೆ ಕಬ್ಬಿಣದ ಕಡಲೆ ಎನಿಸುವ ಗಣಿತ ಮತ್ತು ಇಂಗ್ಲಿಷ್‍ನ್ನು ಪ್ರೀತಿಯಿಂದ ಕಲಿಸುತ್ತಾರೆ.
Advertisement
Advertisement
ನಿವೃತ್ತಿಯಾಗಿ ಹದಿನಾರು ವರ್ಷ ಕಳೆದರೂ ಮನೆಯಲ್ಲಿ ಕೂರದ ಹಿರಿಜೀವ ಮಕ್ಕಳಿಗೆ ಅಕ್ಷರ ಜ್ಞಾನ ನೀಡುತ್ತಿದ್ದಾರೆ. ಕೊಪ್ಪಳ, ಕಿಡದಾಳ ಸಿಂಧೋಗಿ ಸೇರಿದಂತೆ ನಾನಾ ಕಡೆ ಸ್ವಂತ ಹಣದಲ್ಲಿ ಖರ್ಚು ಮಾಡಿಕೊಂಡು ಮಕ್ಕಳಿಗೆ ಪಾಠ ಹೇಳುತ್ತಿದ್ದಾರೆ. ಶಾಲೆಯಲ್ಲಿ ಮಕ್ಕಳೊಂದಿಗೆ ಮಗುವಾಗಿ ಆಟವಾಡುತ್ತಾರೆ. ಹೀಗಾಗಿ ಶಂಕ್ರಪ್ಪ ಮಾಸ್ಟರ್ ಅಂದ್ರೆ ಮಕ್ಕಳಿಗೆ ಅಚ್ಚು ಮೆಚ್ಚು.
Advertisement
ಒಟ್ಟಾರೆ ನಿವೃತ್ತಿಯಾಗಿ ಮನೆಯಲ್ಲಿ ಹಾಯಾಗಿ ಇರಬೇಕಿದ್ದ ಶಿಕ್ಷಕರು ಮಕ್ಕಳಿಗೆ ಶಿಕ್ಷಣ ಧಾರೆ ಎರೆಯುತ್ತಿರೋದು ನಿಜಕ್ಕೂ ಹೆಮ್ಮೆಯ ಕೆಲಸವಾಗಿದೆ. ನಿವೃತ್ತಯಾಗಿದ್ದೇವೆ, ಇನ್ನೇನು ಕೆಲಸ ಮಾಡೋದು ಅನ್ನೋರ ಮಧ್ಯೆ ಶಂಕ್ರಪ್ಪ ಮೇಷ್ಟ್ರು ತುಂಬಾನೆ ಡಿಫರೆಂಟ್.