Monday, 23rd July 2018

ಆಟೋ ಓಡಿಸೋ ಜೊತೆಗೆ ಟ್ರಾಫಿಕ್ ಕಂಟ್ರೋಲ್ ಮಾಡೋ ಮಂಗಳೂರಿನ ರಮೇಶ್

– ಇವರಿಗೆ ಪೊಲೀಸರಿಂದಲೂ ಫುಲ್ ಸಪೋರ್ಟ್

ಮಂಗಳೂರು: ಆಟೋ ಡ್ರೈವರ್‍ಗಳಂದ್ರೆ ಡಬಲ್ ಹಣ ಕೇಳ್ತಾರೆ, ಕರೆದ ಕಡೆ ಬರಲ್ಲ, ಕಿರಿಕಿರಿ ಮಾಡ್ತಾರೆ, ಎರ್ರಾಬಿರ್ರಿ ಆಟೋ ಓಡಿಸ್ತಾರೆ ಅನ್ನೋ ಆರೋಪವಿದೆ. ಆದ್ರೆ ಇವತ್ತಿನ ನಮ್ಮ ಪಬ್ಲಿಕ್ ಹೀರೋ ಈ ಅಪವಾದಗಳಿಂದ ದೂರವಿದ್ದಾರೆ. ಆಟೋ ಓಡಿಸೋ ಜೊತೆಗೆ ಟ್ರಾಫಿಕ್ ಪೊಲೀಸ್ ಕೆಲಸವನ್ನೂ ಮಾಡ್ತಾರೆ.

ಜಿಲ್ಲೆಯ ಕಾವೂರಿನ ಗಾಂಧಿನಗರ ನಿವಾಸಿ ರಮೇಶ್ ನಮ್ಮ ಪಬ್ಲಿಕ್ ಹೀರೋ. ಮಂಗಳೂರು ಅಂದಾಕ್ಷಣ ಥಟ್ಟನೆ ನೆನಪಾಗೋದು ಹಸಿರುವನ, ಸಮುದ್ರ ತೀರ, ಪ್ರಶಾಂತ ವಾತಾವರಣ. ಆದ್ರೆ ಅದೇ ಮಂಗಳೂರಿನ ನಗರಭಾಗಕ್ಕೆ ಹೋದ್ರೆ ಅಲ್ಲಿ ಬೆಂಗಳೂರಿಗಿಂತಲೂ ಹೆಚ್ಚು ಟ್ರಾಫಿಕ್. ಇತ್ತೀಚೆಗಂತೂ ಮಂಗಳೂರಿನ ಸಂಚಾರ ದಟ್ಟಣೆ ಮಿತಿಮೀರಿ ಹೋಗ್ತಿದ್ದು ಪೊಲೀಸರಿಗೂ ತಲೆನೋವಾಗಿದೆ.

ರಮೇಶ್ ಪ್ರತಿದಿನ ಮಧ್ಯಾಹ್ನ 12.30 ರಿಂದ 2.30ರವರೆಗೆ ಟ್ರಾಫಿಕ್ ನಿರ್ವಹಣೆ ಮಾಡ್ತಾರೆ. ಶಾಲಾ ಕಾಲೇಜುಗಳು ಹೆಚ್ಚಾಗಿರುವ ಎಂ.ಜಿ.ರಸ್ತೆಯ ಬೆಸೆಂಟ್ ಸರ್ಕಲ್‍ನಲ್ಲಿ ಸಂಚಾರ ನಿರ್ವಹಣೆ ಮಾಡ್ತಾರೆ. ಮೊದಮೊದಲು ಆಟೋ ಡ್ರೈವರ್ ಅಂತ ವಾಹನ ಸವಾರರು ಇವರನ್ನು ಕ್ಯಾರೇ ಅಂತಿರ್ಲಿಲ್ಲ. ಅದಕ್ಕೆ ಪೊಲೀಸ್ ಇಲಾಖೆಯನ್ನು ಸಂಪರ್ಕಿಸಿ ತಾನೂ ಸಂಚಾರ ನಿರ್ವಹಣೆ ಮಾಡುತ್ತೇನೆ ಎಂದು ಅನುಮತಿ ಪಡೆದುಕೊಂಡ್ರು. ಪೊಲೀಸರು ಕೂಡ ರಮೇಶ್ ಸಮಾಜಸೇವೆಗೆ ಯಾರಾದ್ರೂ ಸಮಸ್ಯೆ ಮಾಡಿದ್ರೆ ಅಂಥವ್ರ ವಿರುದ್ಧ ಕ್ರಮಕೈಗೊಳ್ಳುತ್ತಾರೆ.

ರಮೇಶ್ ಪ್ರತಿದಿನ 8 ರಿಂದ 10 ಗಂಟೆ ಆಟೋ ಓಡಿಸಿ ಪತ್ನಿ ಹಾಗೂ ಇಬ್ಬರು ಮಕ್ಕಳನ್ನು ಸಾಕುತ್ತಿದ್ದಾರೆ. ರಮೇಶ್ ಅವರ ಸಂಚಾರ ನಿರ್ವಹಣೆ ಕೆಲಸವನ್ನ ಗೌರವಿಸಿ ಸನ್ಮಾನಿಸಿದವರೂ ಉಂಟು. ಇವನಿಗ್ಯಾಕೆ ಈ ಕೆಲಸ ಎಂದು ಬೊಬ್ಬೆ ಹಾಕಿದವರೂ ಉಂಟು. ಆದ್ರೂ ಯಾವ ಲಾಭದ ಆಸೆಯೂ ಇಲ್ಲದೇ ಜನ ಸೇವೆ ಮಾಡುವ ಇವರು ನಮ್ಮ ನಿಮ್ಮ ಮಧ್ಯೆ ಇರುವ ನಿಜವಾದ ಪಬ್ಲಿಕ್ ಹೀರೋ.

Leave a Reply

Your email address will not be published. Required fields are marked *