Connect with us

Karnataka

ಬರಗಾಲದಿಂದ ಕಂಗಾಲಾದ ಬಡ ರೈತರಿಗೆ ಅನ್ನದಾತರಾದ್ರು- ಗೋಶಾಲೆಯಲ್ಲಿ ನಿತ್ಯ 400 ರೈತರಿಗೆ ಅನ್ನ ದಾಸೋಹ

Published

on

ತುಮಕೂರು: ಅನ್ನದಾತರಿಗೆ ಅನ್ನದಾನ ಮಾಡುವ ಮಹಾನುಭಾವರು. ಬರಗಾಲದಿಂದ ಕಂಗಾಲಾದ ಬಡ ರೈತರ ಹೊಟ್ಟೆ ತಣಿಸಿದ್ದಾರೆ. ತೂಮಕೂರಿನ ರಕ್ಷಿತ್ ಜೈ ಗಿರೀಶ್, ಗೋ ಶಾಲೆಯಲ್ಲಿ ಪ್ರತಿದಿನ 400ಕ್ಕೂ ಹೆಚ್ಚು ರೈತರಿಗೆ ಉಚಿತವಾಗಿ ಅನ್ನದಾಸೋಹ ಮಾಡುತ್ತಿದ್ದಾರೆ.

ಹೌದು, ಈ ಮಹಾನುಭಾವರಿಗೆ ರೈತರೆಂದರೆ ಎಲ್ಲಿಲ್ಲದ ಕರುಣೆ. ಬರಗಾಲದಿಂದ ಬೇಸತ್ತ ರೈತರು ಗೋ ಶಾಲೆಗಳಲ್ಲಿ ತಮ್ಮ ಜಾನುವಾರುಗಳೊಂದಿಗೆ ಹಸಿವಿನಿಂದ ಮಲಗುತ್ತಿದ್ದುದನ್ನ ಕಂಡು ಇವರ ಕರುಳು ಚುರ್ರ್ ಎನ್ನುತಿತ್ತು. ನಮಗೆ ಅನ್ನ ನೀಡೋ ಅನ್ನದಾತರು ಖಾಲಿ ಹೊಟ್ಟೆಯಲ್ಲಿ ಮಲಗಬಾರದು ಎಂದು ಸಂಕಲ್ಪಿಸಿದ್ದರು. ಹಾಗಾಗಿ ಪ್ರತಿದಿನ ಸುಮಾರು 400 ಕ್ಕೂ ಹೆಚ್ಚು ರೈತರಿಗೆ ಇವರು ಉಚಿತವಾಗಿ ಅನ್ನದಾಸೋಹ ಮಾಡುತಿದ್ದಾರೆ.

ಕಲ್ಪತರು ನಾಡು ತುಮಕೂರು ಜಿಲ್ಲೆ ಕಳೆದ ನಾಲ್ಕೈದು ವರ್ಷಗಳಿಂದ ನಿರಂತರ ಬರಗಾಲಕ್ಕೆ ತುತ್ತಾಗಿದೆ. ಮಳೆ ಇಲ್ಲದೆ ಬೆಳೆಗಳು ಕೈ ಕೊಟ್ಟು ರೈತರನ್ನು ಸಂಕಷ್ಟಕ್ಕೆ ನೂಕಿವೆ. ಅತ್ತ ಜಾನುವಾರುಗಳಿಗೂ ಮೇವಿಲ್ಲದೆ ದನ-ಕರುಗಳು ಸಾಯುವಂತಾಗಿದೆ. ಅದಕ್ಕಾಗಿಯೇ ಜಿಲ್ಲಾಡಳಿತದಿಂದ ಗೋ ಶಾಲೆಗಳನ್ನು ತೆರೆಯಲಾಗಿತ್ತು. ಈ ಗೋ ಶಾಲೆಗಳಲ್ಲಿ ಜಾನುವಾರುಗಳಿಗೇನೋ ಮೇವು- ನೀರು ಸಿಗುತಿತ್ತು. ಆದ್ರೆ ತಮ್ಮ ಹಸುಗಳೊಂದಿಗೆ ಬಂದ ನೂರಾರು ರೈತರು ಹಸಿವಿನಿಂದಲೇ ದಿನ ದೂಡುತಿದ್ದರು. ಮಧ್ಯಾಹ್ನ ಊಟ ಮಾಡಿದ್ದರೂ ರಾತ್ರಿಹೊತ್ತು ಉಪವಾಸ ಮಲಗುವುದು ಖಚಿತವಾಗಿತ್ತು. ರೈತರ ಈ ಸ್ಥಿತಿ ಕಂಡು ನಿವೃತ್ತ ಬ್ಯಾಂಕ್ ಉದ್ಯೋಗಿ ರಕ್ಷಿತ್ ಜೈ ಗಿರೀಶ್ ರ ಕರುಳು ಚುರ್ರ್ ಅಂದಿತ್ತು.

ನಮಗೆ ಅನ್ನ ನೀಡೋ ಅನ್ನದಾತರೇ ಉಪವಾಸ ಮಲಗೋದನ್ನು ನೋಡಿ ರಕ್ಷಿತ್ ಜೈ ಗಿರೀಶ್‍ರ ಮನಸ್ಸು ಮರುಗಿತ್ತು. ಆ ಕ್ಷಣದಿಂದಲೇ ರೈತರಿಗೆ ತಮ್ಮಿಂದಾದ ಅಳಿಲು ಸೇವೆ ಮಾಡೋಣ ಎಂದು ಸಂಕಲ್ಪಿಸಿದ್ದರು. ಅದರ ಪರಿಣಾಮವಾಗಿ ಎರಡು ಗೋ ಶಾಲೆಗಳನ್ನು ಅವರು ಆಯ್ಕೆ ಮಾಡಿಕೊಂಡು ರಾತ್ರಿ ಹೊತ್ತು ರೈತರಿಗೆ ಉಚಿತವಾಗಿ ಊಟ ನೀಡುತ್ತಿದ್ದಾರೆ.

ಶಿರಾ ತಾಲೂಕಿನ ಗಂಡಿಹಳ್ಳಿ ಹಾಗೂ ಉಲ್ಲಾಸಿನ ತೋಪು ಎಂಬ ಎರಡು ಗೋ ಶಾಲೆಗಳನ್ನು ಇವರು ಆಯ್ಕೆ ಮಾಡಿಕೊಂಡಿದ್ದಾರೆ. ಪ್ರತಿದಿನ ರಾತ್ರಿ ಹೊತ್ತು ಈ ಗೋಶಾಲೆಯಲ್ಲಿದ್ದ 400 ಕ್ಕೂ ಹೆಚ್ಚು ರೈತರಿಗೆ ಅನ್ನದಾಸೋಹ ನಡೆಸುತಿದ್ದಾರೆ.

ಕಳೆದ ಜನವರಿಯಿಂದ ನಿರಂತರವಾಗಿ ರಕ್ಷಿತ್ ಜೈ ಗಿರೀಶ್ ಈ ಸೇವೆ ಮಾಡಿಕೊಂಡು ಬಂದಿದ್ದಾರೆ. ಗಂಡಿಹಳ್ಳಿ ಹಾಗೂ ಉಲ್ಲಾಸಿನ ತೋಪಿನಲ್ಲಿರುವ ಗೋ ಶಾಲೆಗಳು ಪಟ್ಟಣದಿಂದ ದೂರ ಇದೆ. ಬಸ್ ವ್ಯವಸ್ಥೆ ಕೂಡಾ ಇಲ್ಲಿ ಇರೋದಿಲ್ಲ. ಹಾಗಾಗಿ ರೈತರು ಹೊಟೇಲ್‍ನಿಂದ ಪಾರ್ಸೆಲ್ ತಂದು ಊಟ ಮಾಡೋಕಾಗಲ್ಲ. ಪರಿಣಾಮ ಈ ಭಾಗದಲ್ಲಿ ಹೆಚ್ಚಿನ ರೈತರು ಉಪವಾಸ ಮಲಗುತಿದ್ದರು.

ಹಾಗಾಗಿ ರಕ್ಷಿತ್ ಜೈ ಗಿರೀಶ್ ಇಲ್ಲಿಯ ರೈತರಿಗೆ ಉಚಿತವಾಗಿ ರಾತ್ರಿ ಊಟದ ವ್ಯವಸ್ಥೆ ಮಾಡಿದ್ದಾರೆ. ಅನ್ನದೊಂದಿಗೆ ದಿನಕ್ಕೊಂದು ರೀತಿಯ ಸಾಂಬಾರ್, ಪಲ್ಯ, ಕೊಟ್ಟು ರುಚಿ ರುಚಿಯಾದ ಊಟ ಬಡಿಸುತ್ತಿದ್ದಾರೆ. ರಕ್ಷಿತ್ ಜೈ ಗಿರೀಶ್ ತುಮಕೂರಿನವರಾದ್ರೂ ಬೆಂಗಳೂರಲ್ಲಿ ಸೆಟಲ್ ಆಗಿದ್ದಾರೆ. ಐಎನ್‍ಜಿ ವೈಶ್ಯ ಬ್ಯಾಂಕ್‍ನಲ್ಲಿ ಉದ್ಯೋಗಿಯಾಗಿದ್ದ ಇವರು ಸ್ವಯಂ ನಿವೃತ್ತಿ ಪಡೆದಿದ್ದಾರೆ. ಸಮಾಜ ಸೇವೆ ಮಾಡುವ ಮನೋಭಾವದಿಂದ ಕೃಷ್ಣ ಗ್ಲೋಬಲ್ ಫೌಂಡೇಷನ್ ಎಂಬ ಸಂಸ್ಥೆ ಕಟ್ಟಿಕೊಂಡು ಸೇವೆಯಲ್ಲಿ ತೊಡಗಿಕೊಂಡಿದ್ದಾರೆ.

ರಕ್ಷಿತ್ ಜೈ ಗಿರೀಶ್ ಯಾವ ಪ್ರತಿಫಲಾಪೇಕ್ಷೆ ಇಲ್ಲದೆ ರೈತರಿಗಾಗಿ ನಿಸ್ವಾರ್ಥ ಸೇವೆ ಮಾಡುತ್ತಿದ್ದಾರೆ. ಬಡ ರೈತ ಸಮುದಾಯ ಕೂಡಾ ಇವರ ಸೇವೆಗೆ ಋಣಿಯಾಗಿದೆ.

https://youtu.be/aL9eHc85M8g

Click to comment

Leave a Reply

Your email address will not be published. Required fields are marked *