ವಿಜಯಪುರ: ಅಲ್ಪನಿಗೆ ಐಶ್ವರ್ಯ ಸಿಕ್ಕರೆ ಮಧ್ಯರಾತ್ರಿ ಕೊಡೆ ಹಿಡೀತಾನೆ ಅನ್ನೋ ಗಾದೆಯಿದೆ. ಆದರೆ, ವಿಜಯಪುರದ ಪಬ್ಲಿಕ್ ಹೀರೋ ರಾಧಾಬಾಯಿ ಅವರು ಇದಕ್ಕೆ ವಿರೋಧವಾಗಿದ್ದಾರೆ. ಪತಿಯ ಆಸೆಯಂತೆ ಸುಮಾರು 40 ವರ್ಷಗಳಿಂದ ಸರ್ಕಾರಿ ಆಸ್ಪತ್ರೆಯ ಗರ್ಭಿಣಿಯರಿಗೆ ಚಿಕ್ಕ ಸೇವೆ ಮಾಡುತ್ತಿದ್ದಾರೆ.
ಹೌದು. ಜಿಲ್ಲೆಯ ಪ್ರತಿಷ್ಠಿತ ಹತ್ತಿ ಉದ್ಯಮಿಯಾಗಿರುವ 80 ವರ್ಷದ ರಾಧಾಬಾಯಿ ಅವರ ಮೊಮ್ಮಕ್ಕಳು ಕೂತು ತಿಂದರೂ ಖಾಲಿ ಆಗದಷ್ಟು ಆಸ್ತಿ ಇದೆ. ಆದರೆ ಜನಸಾಮಾನ್ಯರಿಗೆ ಸಹಾಯ ಹಸ್ತ ಚಾಚಿದ್ದಾರೆ. ಪತಿ ಕಿಶನ್‍ಲಾಲ ಅವರು 1980ರಲ್ಲಿ ವಿಜಯಪುರದ ಸರ್ಕಾರಿ ಆಸ್ಪತ್ರೆಗೆ ಬರುವ ಗರ್ಭಿಣಿಯರಿಗೆ ಖುದ್ದು ತಾವೇ ತೆರಳಿ 2 ಗ್ಲಾಸ್ ಅಕ್ಕಿ, 5 ರೂ. ನೀಡಿ ಸಹಾಯ ಮಾಡುತ್ತಿದ್ದರು. ಸರ್ಕಾರಿ ಆಸ್ಪತ್ರೆಯಲ್ಲಿ ಅದೆಷ್ಟೇ ಗರ್ಭಿಣಿಯರು ದಾಖಲಾಗಿದ್ದರೂ ಅವರಿಗೆಲ್ಲ 15 ದಿನಕ್ಕೊಮ್ಮೆ ಈ ರೀತಿ ಸಹಾಯ ಮಾಡುತ್ತಿದ್ದರು. 1985ರಲ್ಲಿ ಅವರು ನಿಧನರಾದ ಮೇಲೆ ಈ ಕಾಯಕವನ್ನ ಪತ್ನಿ ರಾಧಾಬಾಯಿ ಮುಂದುವರಿಸಿದ್ದಾರೆ.
ಯಾರೊಬ್ಬರ ಆಸರೆ ಇಲ್ಲದೆ ನಡೆಯಲು ಬರಲ್ಲ. ಆದರೂ, ಮಗ ಅಥವಾ ವಾಹನ ಚಾಲಕರ ಸಹಾಯ ಪಡೆದು 15 ದಿನಕ್ಕೊಮ್ಮೆ ಆಸ್ಪತ್ರೆಗೆ ಭೇಟಿ ನೀಡಿ ಪತಿಯ ಮಹದಾಸೆಯನ್ನು ಪೂರೈಸುತ್ತಿದ್ದಾರೆ. ಈ ಇಳಿವಯಸ್ಸಿನಲ್ಲಿ ಅಕ್ಕಿ ಹೊತ್ತು ತಂದು ಕೊಡಲಾಗದ ಕಾರಣ, ಗರ್ಭಣಿಯರಿಗೆ 20 ರೂ. ಹಾಗೂ 2 ಬಿಸ್ಕೆಟ್ ಪ್ಯಾಕ್ ಕೊಡುತ್ತಿದ್ದಾರೆ ಎಂದು ಗರ್ಭಿಣಿ ಶೋಭಾ ಹೇಳಿದ್ದಾರೆ.
ಒಟ್ಟಿನಲ್ಲಿ ಪತಿಯ ಆಸೆಯನ್ನು 40 ವರ್ಷಗಳಿಂದ ಮುಂದುವರಿಸಿಕೊಂಡು ಬಂದಿರೋ ರಾಧಾಬಾಯಿ ಅವರು ಗರ್ಭಿಣಿಯರಿಗೆ ಸಹಾಯ ಹಸ್ತ ಚಾಚುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ.