Connect with us

ಊರೂರು ತಿರುಗಿ ಚಂದಾ ಎತ್ತಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ರು ಈ ಪಿ ಟಿ ಮೇಷ್ಟ್ರು

ಊರೂರು ತಿರುಗಿ ಚಂದಾ ಎತ್ತಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಿದ್ರು ಈ ಪಿ ಟಿ ಮೇಷ್ಟ್ರು

ಮಡಿಕೇರಿ: ನಮ್ಮ ಅಕ್ಕಪಕ್ಕದಲ್ಲಿರುವ ಪ್ರತಿಭೆಗಳನ್ನು ಗುರುತಿಸಿ ಜನತೆಗೆ ಪರಿಚಯಿಸಬೇಕಾದ್ದು ನಮ್ಮೆಲ್ಲರ ಕರ್ತವ್ಯ. ಅದರಲ್ಲೂ ಸರ್ಕಾರ ಹಾಗೂ ಜನಪ್ರತಿನಿಧಿಗಳ ಪಾಲು ದೊಡ್ಡದಾಗಿರಬೇಕು. ಆದರೆ ಜನನಾಯಕರು ಹಾಗೂ ಸರ್ಕಾರಿ ಬಾಬುಗಳೇ ಮರೆತಾಗ ಪ್ರತಿಭೆಗಳನ್ನೇ ಅರಳುವ ಮುನ್ನ ಚಿವುಟಿದಂತಾಗುತ್ತದೆ. ಆದರೆ ಇಂಥ ಪ್ರತಿಭೆಗಳನ್ನು ಗುರುತಿಸಿ ದೇಶದ ಮಟ್ಟದಲ್ಲಿ ಫುಟ್ಬಾಲ್‍ನಲ್ಲಿ ಕರ್ನಾಟಕದ ಕೀರ್ತಿ ಪತಾಕೆ ಹಾರಿಸಲು ಈ ಪಿ ಟಿ ಮೇಷ್ಟ್ರು ಸಜ್ಜಾಗಿದ್ದಾರೆ.

ದಶಕಗಳಿಂದ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲ್ಲೂಕಿನ ಸುಂಟಿಕೊಪ್ಪ ಸರಕಾರಿ ಮಾದರಿ ಪ್ರಾಥಮಿಕ ಶಾಲೆಯ ದೈಹಿಕ ಶಿಕ್ಷಕ ನಂದ ಅವರು ಎಲ್ಲರಿಗಿಂತ ಭಿನ್ನ. ಈ ಶಾಲೆಗೆ ಸೇರುವ ಮಕ್ಕಳಲ್ಲಿ ಆಡಗಿರುವ ಸೂಕ್ತ ಪ್ರತಿಭೆಗಳನ್ನು ಗುರುತಿಸುತ್ತಾ ಅವರಿಗೆ ಸತತ ಪರಿಶ್ರಮದಿಂದ ವಿದ್ಯಾರ್ಥಿಗಳನ್ನು ತಿದ್ದಿತೀಡಿ ಅವರ ಪ್ರತಿಭೆಯನ್ನು ಹೊರಹೊಮ್ಮಿಸಲು ಸಾಕಷ್ಟು ಪ್ರಯತ್ನಿಸಿ ಅವರು ಸಫಲರಾಗಿದ್ದಾರೆ.

ಆಟವಾಡಲು ಶೂ ಇಲ್ಲದೆ ಬರಿಗಾಲಿನಲ್ಲಿ ಆಡಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಅಷ್ಟು ಸುಲಭದ ಕೆಲಸವಲ್ಲ. ಫುಟ್ಬಾಲ್ ನಲ್ಲಿ ಭಾಗವಹಿಸುವ ಬಾಲಕರಿಗೆ ಬೆಳಿಗ್ಗೆ ಸಾಯಕಾಲ ವಿಶೇಷ ತರಬೇತಿಯನ್ನು ನೀಡಿ ಇವರು ಮಾರ್ಗದರ್ಶನ ನೀಡುತ್ತಾರೆ.

ಈ ಶಾಲೆಯಲ್ಲಿ ಓದುತ್ತಿರುವ ಪೈಕಿ ತೋಟದಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರ ಮಕ್ಕಳು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಈ ಬಡ ವಿದ್ಯಾರ್ಥಿಗಳಿಗೆ ಉತ್ತಮ ಪೌಷ್ಠಿಕ ಆಹಾರವನ್ನು ನೀಡಬೇಕಾಗುತ್ತದೆ. ಸರ್ಕಾರ ಹಾಗೂ ಶಿಕ್ಷಣ ಇಲಾಖೆಯಲ್ಲಿ ಇದಕ್ಕಾಗಿ ಯಾವುದೇ ಅನುದಾನ ನೀಡುವುದಿಲ್ಲ.

ಆಟಗಾರರಿಗೆ ಜರ್ಸಿ(ಸಮವಸ್ತ್ರ) ಕಾಲಿಗೆ ಶೂ ಅಗತ್ಯವಿದೆ. ಇದಕ್ಕಾಗಿ ಅಂದಾಜು 60 ಸಾವಿರ ಖರ್ಚಾಗುತ್ತದೆ. ಈ ಹಣಕ್ಕಾಗಿ ವಿದ್ಯಾರ್ಥಿಗಳ ಪ್ರತಿಭೆಯನ್ನು ಪ್ರೋತ್ಸಾಹಿಸಲು ದಾನಿಗಳ ಬಳಿ ಹೋಗಿ ಬಡ ಮಕ್ಕಳಿಗೆ ಸಹಾಯ ಮಾಡುವಂತೆ ಕೇಳಿಕೊಂಡು ಬರುತ್ತಾರೆ, ಬಂದ ಹಣದಲ್ಲಿ ಬಡ ಮಕ್ಕಳಿಗೆ ಬೇಕಾದ ಅಗತ್ಯ ವಸ್ತುಗಳನ್ನು ನೀಡುತ್ತಾರೆ.

ಒಟ್ಟಿನಲ್ಲಿ ತಮಗೆ ಸಂಬಳ, ಸವಲತ್ತು ಹೆಚ್ಚು ಬೇಕು ಎನ್ನುವವರೇ ಮಧ್ಯೆ ಇವರು ವಿಭಿನ್ನವಾಗಿ ಗುರುತಿಸಿಕೊಂಡು ಶಿಕ್ಷಕರಿಗೆ ಮಾದರಿಯಾಗಿದ್ದಾರೆ.

https://www.youtube.com/watch?v=inJg34TyDj8