ಗದಗ: ನೂರು ಪದ ಹೇಳೋದನ್ನ ಒಂದು ಫೋಟೋ ಹೇಳುತ್ತೆ ಅಂತ ಪತ್ರಿಕೋದ್ಯಮದಲ್ಲಿ ಮಾತಿದೆ. ಅದರಂತೆಯೇ ಗದಗ ಜಿಲ್ಲೆಯ ಛಾಯಾಗ್ರಾಹಕ ಮುತ್ತಣ್ಣ ಹಾಳಕೇರಿ ತಮ್ಮ ಛಾಯಾಗ್ರಹಣದ ಮೂಲಕ ತಮ್ಮ ಬದುಕು ಮಾತ್ರವಲ್ಲದೇ ಬಡವರ ಬದುಕನ್ನೂ ಹಸನು ಮಾಡುತ್ತಾ ಪಬ್ಲಿಕ್ ಹೀರೋ ಆಗಿದ್ದಾರೆ.
ಜಿಲ್ಲೆಯ ಮುಂಡರಗಿ ಪಟ್ಟಣದ ಮುತ್ತಣ್ಣ ಹಾಳಕೇರಿ ವೃತ್ತಿಯಲ್ಲಿ ಫೋಟೋಗ್ರಾಫರ್. ಆದ್ರೆ ಪ್ರವೃತ್ತಿಯಲ್ಲಿ ಇವರು ಜನಪರ ಹೋರಾಟಗಾರ. ಮಾನವೀಯತೆಗೆ, ಬಡವರಿಗೆ ಸದಾ ಇವರ ಮನ ಮಿಡಿಯುತ್ತೆ.
ಮುಂಡರಗಿ ಪಟ್ಟಣದಲ್ಲಿ ಪುಟ್ಟ ಡಿಜಿಟಲ್ ಸ್ಟುಡಿಯೋ ಇಟ್ಟುಕೊಂಡು 30 ವರ್ಷಗಳಿಂದ ಫೋಟೋ ಕ್ಲಿಕ್ಕಿಸೋದೇ ಇವರ ಕಾಯಕ. ಇವರು ಕ್ಯಾಮೆರಾ ಕಣ್ಣಲ್ಲಿ ಅದ್ಭುತ ಪ್ರಪಂಚವನ್ನು ಸೃಷ್ಟಿಸುವ ಮೋಡಿಗಾರ. ಅದೇ ರೀತಿ ಬಡವರ ಪಾಲಿನ ದೈವ ಎಂದರೆ ತಪ್ಪಾಗಲಾರದು. ಕಡುಬಡವರು, ಶ್ರಮಿಕರು, ಹಿಂದುಳಿದ ವರ್ಗಗಳ ಮಕ್ಕಳ ಶಿಕ್ಷಣಕ್ಕಾಗಿ ಮುತ್ತಣ್ಣ ಅವರು ತಮ್ಮ ದುಡಿಮೆಯಲ್ಲಿ ವಾರ್ಷಿಕ ಅಂದಾಜು 40-ರಿಂದ 50 ಸಾವಿರ ರೂ. ಖರ್ಚು ಮಾಡುತ್ತಿದ್ದಾರೆ.
ಸಾಮಾನ್ಯವಾಗಿ ಫೋಟೋ ಸ್ಟುಡಿಯೋಗಳಲ್ಲಿ ನಟರು, ಕ್ರಿಕೆಟಿಗರ ಫೋಟೋಗಳನ್ನು ಹಾಕಿರುತ್ತಾರೆ. ಆದ್ರೆ, ಮುತ್ತಣ್ಣ ತಮ್ಮ ಸ್ಟುಡಿಯೋದಲ್ಲಿ ಚಿಂತಕರು, ಹೋರಾಟಗಾರರು, ಪ್ರಗತಿಪರರು, ಸಂಶೋಧಕರ ಚಿತ್ರಗಳನ್ನ ಹಾಕಿದ್ದಾರೆ. ಫೋಟೋಗ್ರಾಫಿ, ಸಮಾಜಸೇವೆ ಜೊತೆಗೆ ಹೋರಾಟಗಾರರೂ ಆಗಿರುವ ಮುತ್ತಣ್ಣ, ಪೊಸ್ಕೋ, ಸಿಂಗಟಾಲೂರು ಏತ ನೀರಾವರಿ, ಕಪ್ಪತ್ತಗುಡ್ಡ ಸಂರಕ್ಷಣೆ ಸೇರಿದಂತೆ ಹಲವಾರು ಸಾಮಾಜಿಕ ಹೋರಾಟದಲ್ಲೂ ಭಾಗಿಯಾಗಿದ್ದಾರೆ.
ಅಷ್ಟೇ ಅಲ್ಲದೆ ಮುತ್ತಣ್ಣ ಅವರ ಫೋಟೋಗಳು ರಾಜ್ಯದ ಅನೇಕ ಜಿಲ್ಲೆಗಳಲ್ಲಿ ಪ್ರದರ್ಶನ ಕಂಡು ಜನ ಮೆಚ್ಚುಗೆಗೆ ಪಾತ್ರವಾಗಿವೆ. ಹಾಗೆಯೇ ಇವರ ಪ್ರತಿಭೆಗೆ ಅನೇಕ ರಾಜ್ಯ, ರಾಷ್ಟ್ರಪ್ರಶಸ್ತಿಗಳು ಕೂಡ ಬಂದಿವೆ. ಮುತ್ತಣ್ಣ ಅವರ ಸ್ಟುಡಿಯೋ ಅಂದ್ರೆ ಅದೊಂದು ಚಿಂತಕರ ಕೂಟ. ನಿಸ್ವಾರ್ಥತೆಯ ಇವರ ಹೋರಾಟದ ಬದುಕಿನಿಂದ ತಮ್ಮ ಖಾಸಗಿ ಬದುಕಿನಲ್ಲಿ ಮದುವೆಯಾಗೋದನ್ನು ಮರೆತಿದ್ದಾರೆ. ಒಬ್ಬ ಛಾಯಾಗ್ರಾಹಕನಾಗಿ ಸಾಮಾಜಿಕ ನ್ಯಾಯ ಒದಗಿಸುವ ಇವರ ಹಂಬಲ ನಿಜಕ್ಕೂ ಶ್ಲಾಘನೀಯ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv