ಬಳ್ಳಾರಿ: ಇವರು ಹಣದಲ್ಲಿ ಶ್ರೀಮಂತರಲ್ಲ. ಆದ್ರೆ ಗುಣದಲ್ಲಿ ಶ್ರೀಮಂತರು. ತಾವೇ ಕಷ್ಟದಲ್ಲಿ ಜೀವನ ಸಾಗಿಸುತ್ತಿದ್ದರೂ ಇನ್ನೊಬ್ಬರ ಕಷ್ಟಕ್ಕೆ ಬೆಳಕಾಗಿದ್ದಾರೆ. ಅನಾಥರು, ಮಾನಸಿಕ ಅಸ್ವಸ್ಥರು, ವೃದ್ಧರಿಗಾಗಿ ಅನಾಥಾಶ್ರಮ ನಡೆಸುತ್ತಿದ್ದಾರೆ. ಬಳ್ಳಾರಿಯ ಆ ಅಪರೂಪದ ಸಮಾಜ ಸೇವಕಿಯೇ ನಮ್ಮ ಪಬ್ಲಿಕ್ ಹೀರೋ.
Advertisement
ಇವತ್ತಿನ ನಮ್ಮ ಪಬ್ಲಿಕ್ ಹೀರೋ ಪರಿಶುದ್ಧ ರಾಣಿ. ಮೂಲತಃ ಆಂಧ್ರದವರಾದ ಇವರು 20 ವರ್ಷಗಳ ಹಿಂದೆ ಬಳ್ಳಾರಿ ಜಿಲ್ಲೆ ಹೊಸಪೇಟೆ ತಾಲೂಕಿನ ಕಂಪ್ಲಿ ಪಟ್ಟಣಕ್ಕೆ ಬಂದು ನೆಲೆಸಿದ್ದಾರೆ. ಇವರ ಪತಿ ಸುರೇಶ್ ಕಾರ್ಪೆಂಟರ್ ಕೆಲಸ ಮಾಡ್ತಾರೆ. ಮೂವರು ಮಕ್ಕಳ ತುಂಬು ಸಂಸಾರ. ಇವರಿಗೆ ಜೀವನವೇ ಕಷ್ಟ. ಪರಿಶುದ್ಧ ರಾಣಿ ತಮ್ಮ ಹೆಸರಿನಷ್ಟೇ ಪರಿಶುದ್ಧ ಮನಸ್ಸಿನಿಂದ ಅನಾಥಾಶ್ರಮ ನಡೆಸುತ್ತಿದ್ದಾರೆ. ಅನಾಥರು, ಮಾನಸಿಕ ಅಸ್ವಸ್ಥರು, ವೃದ್ಧರು ಹೀಗೆ 15ಕ್ಕೂ ಹೆಚ್ಚು ಜನರಿಗೆ ಬೆಳಕಾಗಿದ್ದಾರೆ. ಒಮ್ಮೆ ಜೀಸಸ್ ಕನಸಿನಲ್ಲಿ ಬಂದು ಬಡಬಗ್ಗರ ಸೇವೆ ಮಾಡು ಎಂದಿದ್ದೇ ಪರಿಶುದ್ಧ ರಾಣಿಯವರ ಈ ಸಮಾಜಸೇವೆಗೆ ಕಾರಣವಾಗಿದೆಯಂತೆ.
Advertisement
Advertisement
ಗಂಡ ತಿಂಗಳಿಗೆ ಕೊಡುವ 15 ಸಾವಿರ ರೂಪಾಯಿಗೆ ತಮ್ಮ ಮನೆ ಪಕ್ಕದಲ್ಲೇ ಒಂದು ಪುಟ್ಟ ಮನೆ ಬಾಡಿಗೆ ಪಡೆದು ಆಶ್ರಮ ನಡೆಸುತ್ತಿದ್ದಾರೆ. ತಮ್ಮ ಮನೆಯಿಂದಲೇ ಅಡುಗೆ ಮಾಡಿಕೊಂಡು ಹೋಗಿ ಊಟ ಮಾಡಿಸ್ತಾರೆ. ಮಕ್ಕಳು ರಜೆ ಇದ್ದಾಗ ಬಂದು ಅಮ್ಮನ ಜೊತೆ ಸೇವೆ ಮಾಡ್ತಾರೆ. ಚರ್ಚ್‍ಗಳ ಕೆಲ ಅನುಯಾಯಿಗಳು ಸ್ವಲ್ಪ ಸಹಾಯ ಮಾಡ್ತಾರೆ. ಸ್ಥಳೀಯರು ಆಗಾಗ ಅಕ್ಕಿ ಹಾಗೂ ಧಾನ್ಯ ನೀಡುತ್ತಾರೆ.
Advertisement
ಇಷ್ಟೆಲ್ಲಾ ಸೇವೆಗೆ ಮೂಲ ಕಾರಣವಾಗಿರೋ ಪತಿ ಮಾತ್ರ ಪ್ರಚಾರ ಬೇಡ ಎಂದಿದ್ದಾರೆ. ಕಡೇ ಪಕ್ಷ ನಿಮ್ಮ ಗಂಡನನ್ನು ಜನರಿಗೆ ತೋರಿಸುತ್ತೇವೆ ಎಂದ್ರೂ ಪಬ್ಲಿಕ್ ಟಿವಿಗೆ ಪರಿಶುದ್ಧ ರಾಣಿ ಗಂಡನ ಫೋಟೋ ಕೂಡಾ ಕೊಟ್ಟಿಲ್ಲ. ದಾನ, ಧರ್ಮ, ಸೇವೆ ಮಾಡೋದು ಪ್ರಚಾರಕ್ಕಲ್ಲ ಅನ್ನೋದನ್ನ ನಿಜಕ್ಕೂ ಈ ಇವರನ್ನು ನೋಡಿ ಕಲಿಯಬೇಕಿದೆ.