ಆಂಧ್ರದ ಗಡಿಭಾಗದಲ್ಲಿ ಆಳಿವಿನಂಚಿನಲ್ಲಿದ್ದ ಶಾಲೆಯಲ್ಲಿ ಕನ್ನಡದ ಕಹಳೆ ಮೊಳಗಿಸಿದ ಶಿಕ್ಷಕ

Public TV
3 Min Read
CKB PUBLIC HERO PKG 12

ಚಿಕ್ಕಬಳ್ಳಾಪುರ: ನಾನಾ ಕಾರಣಗಳನ್ನು ನೀಡಿ ಸ್ವತಃ ಸರ್ಕಾರವೇ ಸರ್ಕಾರಿ ಶಾಲೆಗಳನ್ನು ಮುಚ್ಚುತ್ತಾ ಸಾಗುತ್ತಿದೆ. ಆದರೆ ಆಂಧ್ರದ ಗಡಿಭಾಗದಲ್ಲಿ ತೆಲುಗು ಭಾಷೆಯ ಪ್ರಭಾವದಿಂದ ಮುಚ್ಚಿಹೋಗಬೇಕಿದ್ದ ಸರ್ಕಾರಿ ಶಾಲೆ ಮಾದರಿ ಶಾಲೆಯಾಗಿ ತಲೆ ಎತ್ತಿ ನಿಂತಿದೆ.

ಸಹೃದಯಿ ದಾನಿಗಳ ಸಹಕಾರ, ಸ್ನೇಹಿತರ ಸಾಥ್ ನಿಂದ ಸರ್ಕಾರಿ ಶಾಲೆಯನ್ನು ಖಾಸಗಿ ಶಾಲೆಗಳಿಗೂ ಸೆಡ್ಡು ಹೊಡೆಯವಂತೆ ಮಾಡಿದ್ದಾರೆ ಈ ಶಾಲೆಯ ಶಿಕ್ಷಕ. ಇಡೀ ಗ್ರಾಮದಲ್ಲಿ ಕನ್ನಡದ ಕಂಪು ಸೂಸುವ ಮೂಲಕ ಕನ್ನಡ ಭಾಷೆ ಹಾಗೂ ಸರ್ಕಾರಿ ಶಾಲೆಯನ್ನು ಉಳಿಸಿ ಬೆಳೆಸುವ ಕಾಯಕ ಮಾಡಿದ ಅಪರೂಪದ ಶಿಕ್ಷಕ ಇವರು.

CKB PUBLIC HERO PKG 5

ಚಿಕ್ಕಬಳ್ಳಾಪುರ ಜಿಲ್ಲೆಯ ಗೌರಿಬಿದನೂರು ತಾಲೂಕಿನ ನಂಜಯ್ಯಗಾರಹಳ್ಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಶಿಕ್ಷಕರಾದ ಟಿಕೆ ನಾಗೇಶ್ ಅವರು ಈ ಕಾರ್ಯದಲ್ಲಿ ಯಶಸ್ವಿಯಾಗಿದ್ದಾರೆ. ಮೂಲತಃ ಹಾಸನದವರಾದ ನಾಗೇಶ್ ಕಳೆದ 11 ವರ್ಷಗಳಿಂದ ಈ ಶಾಲೆಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

CKB PUBLIC HERO PKG 3

ಕರ್ನಾಟಕದಲ್ಲೇ ಈ ಗ್ರಾಮವಿದ್ದರೂ ಇಲ್ಲಿನ ಜನರ ಆಡು ಭಾಷೆ ತೆಲುಗು. ಇಲ್ಲಿನ ಜನ ತಾವು ಆಂಧ್ರದವರೇ ಎನ್ನುವಷ್ಟು ಭಾವನೆಗಳಲ್ಲಿ ಬದುಕುತ್ತಿದ್ದರು. ಅಲ್ಲದೇ ಶಾಲೆಗೆ ಮೊದಲ ಬಾರಿ ಶಿಕ್ಷಕರಾಗಿ ನಾಗೇಶ್ ಬಂದಾಗ ಇಲ್ಲಿನ ಬಹುತೇಕ ಮಕ್ಕಳಿಗೆ ಕನ್ನಡ ಮಾತನಾಡಲು ಕೂಡ ಬರುತ್ತಿರಲಿಲ್ಲ. ಅಲ್ಲದೇ ಕನಿಷ್ಠ ಇಲ್ಲಿನ ಜನ ತಮ್ಮ ಮಕ್ಕಳನ್ನ ಶಾಲೆಗೆ ಕೂಡ ಕಳುಹಿಸುತ್ತಿರಲಿಲ್ಲ.

CKB PUBLIC HERO PKG 8

ಆದರೆ ಮನಸ್ಸಿದ್ದರೆ ಮಾರ್ಗ ಎಂಬಂತೆ ಶಿಕ್ಷಕ ನಾಗೇಶ್ ಗ್ರಾಮದಲ್ಲೇ ವಾಸ ಮಾಡುವ ಮೂಲಕ ಗ್ರಾಮದ ಮನೆ ಮನೆಗೆ ತೆರಳಿ ಶಿಕ್ಷಣದ ಮಹತ್ವವನ್ನ ತಿಳಿಸಿದ್ದಾರೆ. ಪೋಷಕರ ಮನವೊಲಿಸಿ ಎಲ್ಲಾ ಮಕ್ಕಳನ್ನು ಶಾಲೆಗೆ ಕರೆತಂದು ಉತ್ತಮ ಶಿಕ್ಷಣ ನೀಡುವ ಕಾಯಕಕ್ಕೆ ಮುಂದಾಗಿದ್ದಾರೆ. ಪ್ರತಿ ವರ್ಷ ಶಾಲೆಯಲ್ಲಿ ಕನ್ನಡದ ನುಡಿ ಹಬ್ಬ ಆಚರಿಸುವ ಮೂಲಕ ಗ್ರಾಮಸ್ಥರಲ್ಲಿ ಕನ್ನಡದ ಕಂಪು ಸೂಸುವ ಕೆಲಸ ಮಾಡಿದ್ದಾರೆ. ತೆಲುಗು ಭಾಷೆಯ ಪ್ರಭಾವದಿಂದ ಕನ್ನಡವೇ ಬಾರದ ಮಕ್ಕಳ ಬಾಯಲ್ಲಿ ಕನ್ನಡದ ಕಿಚ್ಚು ಹಚ್ಚಿದ್ದಾರೆ. ಹತ್ತು ವರ್ಷಗಳಿಂದ ಒಂದಲ್ಲ ಒಂದು ರೀತಿ ಭಿನ್ನ ವಿಭಿನ್ನ ಪ್ರಯತ್ನಗಳಿಂದ ಇಡೀ ಶಾಲೆಯನ್ನ ಮಾದರಿ ಶಾಲೆಯನ್ನಾಗಿ ಮಾಡಿದ್ದಾರೆ.

CKB PUBLIC HERO PKG 7

ಮೂಲಭೂತ ಸೌಲಭ್ಯಗಳಿಲ್ಲದೆ ಸೊರಗಿ ಹೋಗಿದ್ದ ಶಾಲೆಗೆ ಸಹೃದಯಿ ದಾನಿಗಳು ಹಾಗೂ ಸ್ನೇಹಿತರ ಬಳಗದಿಂದ ಸಕಲ ಸೌಲಭ್ಯಗಳನ್ನ ಪಡೆದುಕೊಳ್ಳುವಲ್ಲಿ ಶಿಕ್ಷಕ ನಾಗೇಶ್ ಯಶಸ್ವಿಯಾಗಿದ್ದಾರೆ. ದಾನಿಗಳ ನೆರವಿನಿಂದ ಪಡೆದ ಪ್ರೊಜೆಕ್ಟರ್ ಮೂಲಕ ಈ ಶಾಲೆಯಲ್ಲಿ ಸ್ಮಾರ್ಟ್ ಕ್ಲಾಸ್ ಕೂಡ ನಡೆಸುತ್ತಿದ್ದಾರೆ. ಕಂಪ್ಯೂಟರ್ ಕಾಣದ ಮಕ್ಕಳ ಕೈ ಹಿಡಿದು ಕಂಪ್ಯೂಟರ್ ಶಿಕ್ಷಣ ನೀಡುತ್ತಿದ್ದಾರೆ. ಕನಿಷ್ಠ ಕನ್ನಡವೂ ಬಾರದ ಮಕ್ಕಳ ಬಾಯಲ್ಲಿ ಇಂದು ಪಟಪಟನೆ ಇಂಗ್ಲಿಷ್ ಮಾತನಾಡುವಷ್ಟರ ಮಟ್ಟಿಗೆ ಬೆಳೆಸಿದ್ದಾರೆ.

CKB PUBLIC HERO PKG 10

ಈ ಹಿಂದೆ ವಿದ್ಯಾರ್ಥಿಗಳೇ ಇಲ್ಲದ ಈ ಶಾಲೆಯಲ್ಲಿ ಇಂದು 1 ರಿಂದ 7ನೇ ತರಗತಿಯವರೆಗೂ 114 ವಿದ್ಯಾರ್ಥಿಗಳು ವ್ಯಾಸಂಗ ಮಾಡುವಂತೆ ಮಾಡಿದ್ದಾರೆ. ಪ್ರತಿ ವರ್ಷ ತಮ್ಮ ಫೇಸ್‍ಬುಕ್ ಗೆಳೆಯರ ಬಳಗದಿಂದ ನೋಟ್ ಪುಸ್ತಕ, ಪೆನ್, ಪೆನ್ಸಿಲ್ ಸೇರಿದಂತೆ ಕಲಿಕಾ ಸಾಮಾಗ್ರಿಗಳನ್ನು ಸಹಾಯ ಪಡೆಯುವ ಮೂಲಕ ವರ್ಷ ಇಡೀ ಉಚಿತವಾಗಿ ನೀಡುತ್ತಾರೆ. ಬಿಸಿಯೂಟ ಆಡುಗೆಗೆ ಬೇಕಾದ ಗ್ರೈಂಡರ್, ತಟ್ಟೆ, ಲೋಟ, ವಾಟರ್ ಫಿಲ್ಟರ್ ಸೇರಿದಂತೆ ಶಾಲೆಗೆ ಬೇಕಾದ ಸಕಲ ಸೌಲಭ್ಯಗಳನ್ನ ದಾನ ಪಡೆದು ಶಾಲೆಯ ಸರ್ವಾಂಗೀಣ ಅಭಿವೃದ್ಧಿ ಮಾಡಿದ್ದಾರೆ.

CKB PUBLIC HERO PKG 11

ವಿಶೇಷವಾಗಿ ಶಿಕ್ಷಕರ ಕೊರತೆ ಕಾರಣ ಖಾಸಗಿ ಶಾಲೆಯ ಶಿಕ್ಷಕರಾಗಿದ್ದ ತಮ್ಮ ಪತ್ನಿಯನ್ನು ಖಾಸಗಿ ಶಾಲೆ ಬಿಡಿಸಿ, ತಮ್ಮ ಶಾಲೆಯಲ್ಲಿ ಉಚಿತವಾಗಿ ಪಾಠ ಮಾಡಿಸುತ್ತಿದ್ದಾರೆ. ಪತಿಯ ಸಮಾಜಮುಖಿ ಕಾರ್ಯಕ್ಕೆ ಪತ್ನಿ ಶೈಲಜಾ ಕೂಡ ಸಾಥ್ ಕೊಟ್ಟಿದ್ದಾರೆ.

CKB PUBLIC HERO PKG 1

ಆಂಧ್ರದ ಗಡಿಭಾಗ, ತೆಲುಗು ಭಾಷೆಯ ಪ್ರಭಾವ, ಪೋಷಕರ ಇಂಗ್ಲಿಷ್ ವ್ಯಾಮೋಹ ಸೇರಿದಂತೆ ಹಲವು ಕಾರಣಗಳಿಂದ ನಂಜಯ್ಯಗಾರಿಹಳ್ಳಿಯ ಸುತ್ತಮುತ್ತಲ ಐದು ಸರ್ಕಾರಿ ಶಾಲೆಗಳಿಗೆ ಸರ್ಕಾರ ಈಗಾಗಲೇ ಬೀಗ ಜಡಿದಿದೆ.

CKB PUBLIC HERO PKG 6

ಆದರೆ ಶಿಕ್ಷಕ ನಾಗೇಶ್ ಅವರ ಸ್ವಂತ ಪರಿಶ್ರಮದಿಂದ ನಂಜಯ್ಯಗಾರಹಳ್ಳಿಯ ಈಗ ಸರ್ಕಾರಿ ಶಾಲೆ ವಿದ್ಯಾರ್ಥಿಗಳಿಂದ ತುಂಬಿ ತುಳುಕುತ್ತಿದೆ. ಇದಲ್ಲದೆ 4 ವರ್ಷದ ತಮ್ಮ ಮಗನನ್ನ ಕೂಡ ತಮ್ಮದೇ ಸರ್ಕಾರಿ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡಿಸಲು ಮುಂದಾಗಿದ್ದಾರೆ ಈ ದಂಪತಿ.

https://www.youtube.com/watch?v=UPD9JzGXBd0

Share This Article
Leave a Comment

Leave a Reply

Your email address will not be published. Required fields are marked *