ಚಿತ್ರದುರ್ಗ: ಮಳೆಕೊಯ್ಲಿನ ಬಗ್ಗೆ ಸರ್ಕಾರ, ಸಂಘ ಸಂಸ್ಥೆಗಳು ಎಷ್ಟೇ ಜಾಗೃತಿ ಮೂಡಿಸಿದ್ರೂ ಅದನ್ನ ಅಳವಡಿಕೆ ಮಾಡಿಕೊಂಡಿರೋದು ಬೆರಳೆಣಿಕೆಯಷ್ಟು ಮಂದಿ. ಹೀಗೆ, ನೀರಿನ ಮಹತ್ವ ತಿಳಿದು ಮಳೆಕೊಯ್ಲು ಪದ್ಧತಿ ಜೊತೆಗೆ ಮನೆಯಲ್ಲಿ ಬಳಸಿದ ನೀರನ್ನೂ ಸದ್ಬಳಕೆ ಮಾಡಿಕೊಳ್ತಿದ್ದಾರೆ ಚಿತ್ರದುರ್ಗದ ಪಬ್ಲಿಕ್ ಹೀರೋ ನಾಗರಾಜ್.
ಹೌದು. ಚಿತ್ರದುರ್ಗ ಜಿಲ್ಲೆ ಹೊಳಲ್ಕೆರೆ ತಾಲ್ಲೂಕಿನ ಮಲ್ಲಾಡಿಹಳ್ಳಿಯ ನಾಗರಾಜ್ ಓರ್ವ ಉದ್ಯಮಿ ಕೂಡ. ಇವರು ನೀರಿನ ಮರುಬಳಕೆ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ. ಗ್ರಾಮದ ಹೊರವಲಯದಲ್ಲಿ ಇರುವ ಮನೆ, ಪೆಟ್ರೋಲ್ ಬಂಕ್ ಮತ್ತು ಕಾರ್ಮಿಕರ ತರಬೇತಿ ಕೇಂದ್ರಗಳ ಆವರಣದಲ್ಲಿ ಬೀಳುವ ಮಳೆ ನೀರನ್ನ 1.8 ಲಕ್ಷ ಲೀಟರ್ ಸಾಮಥ್ರ್ಯದ ದೊಡ್ಡ ಸಂಪಿನಲ್ಲಿ ಸಂಗ್ರಹಿಸ್ತಿದ್ದಾರೆ.
ಮಳೆ ನೀರಿನ ಶುದ್ಧೀಕರಣಕ್ಕೆ ತೊಟ್ಟಿಯಲ್ಲಿ ಕಲ್ಲಿದ್ದಲು, ಉಪ್ಪು, ಜಲ್ಲಿಯ ಪದರಗಳನ್ನ ನಿರ್ಮಿಸಿ ನೀರು ತಂತಾನೇ ಶುದ್ಧೀಕರಣಗೊಳ್ಳುವಂತೆ ಮಾಡಿದ್ದಾರೆ. ಇದೇ ನೀರನ್ನ ಕುಡಿಯೋಕೆ, ಮನೆ ಬಳಕೆಗೆ ಬಳಸ್ತಿದ್ದಾರೆ. ಮಳೆಗಾಲದಲ್ಲಿ ಹೆಚ್ಚಾದ ನೀರು ಇಂಗುಗುಂಡಿ ಮೂಲಕ ಬೋರ್‍ವೆಲ್ ಸೇರುವಂತೆ ಮಾಡಿದ್ದಾರೆ.
ಮನೆಯಲ್ಲಿ ಪಾತ್ರೆ, ಬಟ್ಟೆ ತೊಳೆದ ನೀರು, ಸ್ನಾನಕ್ಕೆ ಬಳಸಿದ ನೀರನ್ನೂ ಸಹ ಇದೇ ರೀತಿ ಸಂಗ್ರಹಿಸಿ, ಶುದ್ಧೀಕರಿಸಿ ಹನಿ ಹಾಗೂ ತುಂತುರು ನೀರಾವರಿ ಮೂಲಕ ತಮ್ಮ ಉದ್ಯಾನಕ್ಕೆ ಬಳಸ್ತಿದ್ದಾರೆ. ನೂರಾರು ಜಾತಿಯ ವಿವಿಧ ಬಗೆಯ ಅಲಂಕಾರಿಕ, ಹಣ್ಣು-ಹಂಪಲಿನ ಸಸ್ಯ ಬೆಳೆದಿದ್ದಾರೆ. ಇವರಿಗೆ ಪತ್ನಿ ಪದ್ಮಾವತಿ ಸಾಥ್ ಕೊಟ್ಟಿದ್ದು, ಸಾವಯವ ಪದ್ಧತಿ ಮೂಲಕ ಮನೆಗೆ ಬೇಕಾದ ತರಕಾರಿ ಬೆಳೆದುಕೊಳ್ತಿದ್ದಾರೆ.
ನಾಗರಾಜ್ ಅವರ ಮಳೆ ನೀರು ಸಂಗ್ರಹ ಪುನರ್ ಬಳಕೆ ಕೇವಲ ಮನೆಗೆ ಸೀಮಿತವಾಗಿಲ್ಲ. ಗ್ರಾಮದ ಹೊರವಲಯದಲ್ಲಿ 3 ಎಕರೆ ವಿಸ್ತೀರ್ಣದಲ್ಲಿರೋ ಕಾರ್ಖಾನೆಯೊಂದರಲ್ಲಿ ಮಳೆ ನೀರು ಸಂಗ್ರಹಿಸ್ತಿದ್ದಾರೆ. ಇದಕ್ಕಾಗಿ 4 ಲಕ್ಷ ಲೀಟರ್ ಸಾಮರ್ಥ್ಯದ ತೊಟ್ಟಿ ನಿರ್ಮಿಸಿದ್ದಾರೆ.