-ಸೇನಾ ಆಕಾಂಕ್ಷಿಗಳಿಗೆ ತರಬೇತಿ
ರಾಯಚೂರು: ಸರ್ಕಾರಿ ನೌಕರಿಯಿಂದ ನಿವೃತ್ತಿಯಾದರೆ ಸಾಕು ಮನೆ ಮಕ್ಕಳು ಮೊಮ್ಮಕ್ಕಳು ಅಂತ ಆರಾಮಾಗಿದ್ದು ಬಿಡೋಣ ಅಂದುಕೊಳ್ಳುವವರೇ ಜಾಸ್ತಿ. ರಾಯಚೂರಿನ ಮಾಜಿ ಸೈನಿಕ ಮೊಹಮದ್ ಸಲೀಂ ಮಾತ್ರ ನಿವೃತ್ತಿ ಬಳಿಕವೂ ದೇಶಸೇವೆಯನ್ನ ಮುಂದುವರಿಸಿದ್ದಾರೆ. ಸೇನೆ ಸೇರಲು ಆಸಕ್ತಿಯಿರುವ ಯುವಕರಿಗೆ ಮಾರ್ಗದರ್ಶಕರಾಗಿ ಉಚಿತವಾಗಿ ತರಬೇತಿ ನೀಡುವ ಮೂಲಕ ಆದರ್ಶವಾಗಿದ್ದಾರೆ.
Advertisement
ಮೊಹಮದ್ ಸಲೀಂ ರಾಯಚೂರಿನ ಲಿಂಗಸುಗೂರು ತಾಲೂಕಿನ ಗುರಗುಂಟಾ ಗ್ರಾಮದ ಮಾಜಿ ಸೈನಿಕ. ಹವಾಲ್ದಾರ್ ಮೇಜರ್ ಆಗಿದ್ದ ಸಲೀಂ ಸೇನಾ ನಿವೃತ್ತಿ ಬಳಿಕ 2017 ರಿಂದ ಹಟ್ಟಿ ಪಟ್ಟಣದ ಸಿಂಡಿಕೇಟ್ ಬ್ಯಾಂಕ್‍ನಲ್ಲಿ ಸೆಕ್ಯೂರಿಟಿ ಗಾರ್ಡ್ ಆಗಿ ಕೆಲಸ ಮಾಡುತ್ತಿದ್ದಾರೆ. ಇಷ್ಟೆ ಆಗಿದ್ರೆ ಅಂತಾ ವಿಶೇಷ ಏನ್ ಇರಲಿಲ್ಲ ಬಿಡಿ. ರಾಯಚೂರು ಸೇರಿದಂತೆ ಕಲ್ಯಾಣ ಕರ್ನಾಟಕ ಭಾಗದಿಂದ ಸೇನೆಯಲ್ಲಿ ಸೇವೆ ಸಲ್ಲಿಸುವವರ ಸಂಖ್ಯೆ ಕಡಿಮೆಯಿದ್ದು, ಅದನ್ನ ಹೆಚ್ಚಿಸಬೇಕು ಅಂತ ಎರಡು ವರ್ಷಗಳಿಂದ ಉಚಿತ ಸೇನಾ ತರಬೇತಿ ನೀಡುತ್ತಿದ್ದಾರೆ.
Advertisement
ಗುರುಗುಂಟಾ ಗ್ರಾಮದಲ್ಲಿ ತರಬೇತಿಗೆ ಸೌಲಭ್ಯಗಳು ಇಲ್ಲದಿದ್ದರೂ ಗ್ರಾಮದ ಹೊರವಲಯದ ಪ್ರದೇಶವೊಂದರಲ್ಲಿ ಸೇನಾರ್ಥಿಗಳಿಗೆ ಅಗತ್ಯ ತರಬೇತಿ ನೀಡುತ್ತಿದ್ದಾರೆ. ಕೇವಲ ಗುರಗುಂಟಾ ಮಾತ್ರವಲ್ಲದೆ ಸುತ್ತಮುತ್ತಲ ಗ್ರಾಮಗಳಾದ ಗೌಡೂರು, ಯಲಗಟ್ಟ, ಮಾಚನೂರು, ಕೋಠಾ, ಹಟ್ಟಿ, ರಾಯದುರ್ಗ, ಅಮರೇಶ್ವರ ಕ್ರಾಸ್ ನಿಂದಲೂ ಯುವಕರು ತರಬೇತಿಗೆ ಬರುತ್ತಿದ್ದಾರೆ. ಅಲ್ಲದೆ ಬೀದರ್ ,ಗೋಕಾಕ್ ನಿಂದಲೂ ಆರು ಯುವಕರು ತರಬೇತಿಗೆ ಬಂದಿದ್ದು, ಅವರಿಗೆಲ್ಲಾ ಸಲೀಂ ಸ್ವಂತ ಖರ್ಚಿನಲ್ಲೇ ಊಟ, ವಸತಿ ವ್ಯವಸ್ಥೆ ಮಾಡಿದ್ದಾರೆ. ಒಟ್ಟು 45 ಜನ ತರಬೇತಿ ಪಡೆಯುತ್ತಿದ್ದಾರೆ.
Advertisement
Advertisement
ಬೆಳಗ್ಗೆ ಐದು ಗಂಟೆಗೆಲ್ಲಾ ತರಬೇತಿ ಆರಂಭಿಸುವ ಸಲೀಂ ಯುವಕರಿಗೆ ಸೇನೆಗೆ ಆಯ್ಕೆಯಾಗಲು ಬೇಕಾಗುವ ಕಠಿಣ ದೈಹಿಕ ತರಬೇತಿಯನ್ನ ನೀಡುತ್ತಿದ್ದಾರೆ. ರನ್ನಿಂಗ್, ಲಾಂಗ್ ಜಂಪ್, ಹೈಜಂಪ್ ಶಾಟ್ ಪುಟ್ ನಿಂದ ಹಿಡಿದು ಪ್ರತಿಯೊಂದಕ್ಕೂ ಅಣಿಗೊಳಿಸುತ್ತಿದ್ದಾರೆ. ಇವರಲ್ಲಿ ತರಬೇತಿ ಪಡೆದ ಯುವಕ ರವಿಕುಮಾರ್ ಈಗಾಗಲೇ ಸೇನೆಗೆ ಆಯ್ಕೆಯಾಗಿದ್ದಾರೆ. ಮೂರು ಜನ ಯುವಕರು ಸ್ಟಾಫ್ ಸೆಲೆಕ್ಷನ್ ಕಮಿಷನ್ ಗೆ ಆಯ್ಕೆಯಾಗಿದ್ದಾರೆ. 26 ವರ್ಷಗಳ ಕಾಲ ಸೇನೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿಯಾದ ಎಂ.ಡಿ.ಸಲಿಂ ತಾವು ಕೆಲಸ ಮಾಡುವ ಬ್ಯಾಂಕ್ ನಲ್ಲೂ ಒಳ್ಳೆಯ ಕೆಲಸಗಾರ ಅನ್ನೋ ಹೆಸರನ್ನ ಪಡೆದಿದ್ದು, ಬಡ ಯುವಕರನ್ನ ದೇಶಕಾಯಲು ಸಜ್ಜುಗೊಳಿಸುತ್ತಿದ್ದಾರೆ.
ಪತ್ನಿ ಹಾಗೂ ಇಬ್ಬರು ಮಕ್ಕಳಿರುವ ಸಲೀಂ ಕೆಲಸಕ್ಕೆ ಅವರ ಕುಟುಂಬ ಹಾಗೂ ಗ್ರಾಮಸ್ಥರು ಮೆಚ್ಚುಗೆ ವ್ಯಕ್ತಪಡಿಸುತ್ತಾರೆ. ಯುವಕರು ಹೆಚ್ಚು ಹೆಚ್ಚು ಸಂಖ್ಯೆಯಲ್ಲಿ ಸೇನೆ ಸೇರಬೇಕು. ಆದ್ರೆ ಅವರಿಗೆ ತರಬೇತಿ ತುಂಬಾ ದುಬಾರಿ ಆಗಿರುವುದರಿಂದ ಉಚಿತವಾಗಿ ತರಬೇತಿ ನೀಡುತ್ತಿದ್ದೇನೆ ಅಂತ ಸಲೀಂ ಹೇಳುತ್ತಾರೆ. ಬ್ಯಾನರ್, ವಾಟ್ಸಪ್ ಮೂಲಕ ಪ್ರಚಾರ ಮಾಡಿ ಯುವಕರನ್ನ ತರಬೇತಿಗೆ ಆಹ್ವಾನಿಸುತ್ತಿದ್ದಾರೆ. ಮೊದಲೆಲ್ಲಾ ಕೇವಲ ಬೆರಳೆಣಿಕೆಯಷ್ಟು ಯುವಕರಿಂದ ಆರಂಭವಾದ ತರಬೇತಿಗೆ ಈಗ 45 ಯುವಕರು ಬರುತ್ತಿದ್ದಾರೆ.
ಮೈದಾನ, ವಸತಿ ಹಾಗೂ ತರಬೇತಿ ಸಾಮಗ್ರಿಗಳ ಕೊರತೆಯ ಮಧ್ಯೆಯೂ ಮೊಹಮದ್ ಸಲೀಂ ತಮ್ಮ ಕೈಲಾದ ಮಟ್ಟಿಗೆ ಸ್ವಂತ ಖರ್ಚಿನಲ್ಲೆ ಉಚಿತ ಸೇನಾ ತರಬೇತಿಯನ್ನ ನೀಡುತ್ತಿದ್ದಾರೆ. ನವೆಂಬರ್ 5 ರಿಂದ 16ರ ವರೆಗೆ ಕೊಪ್ಪಳದಲ್ಲಿ ನಡೆಯಲಿರುವ ಸೇನಾ ಭರ್ತಿ ರ್ಯಾಲಿಗೆ ಭರ್ಜರಿ ತಯಾರಿ ನಡೆಸಿದ್ದು ಹೆಚ್ಚಿನ ಸಂಖ್ಯೆಯಲ್ಲಿ ತಮ್ಮ ಯುವಕರು ಆಯ್ಕೆಯಾಗುವ ನಿರೀಕ್ಷೆಯಲ್ಲಿ ಸಲೀಂ ಇದ್ದಾರೆ. ಸಲೀಂ ಹಾಗೂ ಅವರಲ್ಲಿ ತರಬೇತಿ ಪಡೆಯುತ್ತಿರುವ ಯುವಕರಿಗೆ ಆಲ್ ದಿ ಬೆಸ್ಟ್ ಹೇಳೋಣ.