ಬೀದರ್: ಮರಾಠಿ, ಉರ್ದು, ತೆಲುಗು, ಹಿಂದಿ ಭಾಷೆಗಳು ಅಟ್ಟಹಾಸ ಮೆರೆಯುತ್ತಿರುವಾಗ ಗಡಿ ಜಿಲ್ಲೆಯಲ್ಲಿ “ಖ್ಯಾತಿ” ಎಂಬ ಕನ್ನಡದ ಮೊದಲ ವಾರ ಪತ್ರಿಕೆ ಪ್ರಾರಂಭ ಮಾಡಿ, ಕನ್ನಡವನ್ನು ಉಳಿಸಿದ ಕೀರ್ತಿ ನಮ್ಮ ಪಬ್ಲಿಕ್ ಹೀರೋ ಹಿರಿಯ ಸಾಹಿತಿ ಎಂ.ಜಿ ದೇಶಪಾಂಡೆ ಅವರಿಗೆ ಸಲ್ಲುತ್ತದೆ.
ಮೂಲತಃ ಆಂಧ್ರ ಪ್ರದೇಶದವರಾದ ಎಂ.ಜಿ ದೇಶಪಾಂಡೆ ಅವರು ವೃತಿಯಲ್ಲಿ ಬ್ಯಾಂಕ್ ಉದ್ಯೋಗಿಯಾಗಿದ್ದಾರೆ. ಆದರೆ ಹೊರರಾಜ್ಯದಿಂದ ಕರ್ನಾಟಕ್ಕೆ ಬಂದ ಮೇಲೆ ಕನ್ನಡಕ್ಕಾಗಿ ತಮ್ಮ ಜೀವನವನ್ನು ಮುಡುಪಾಗಿ ಇಟ್ಟಿದ್ದಾರೆ. ಸುಮಾರು 50 ವರ್ಷ ಸುದೀರ್ಘವಾಗಿ ಕನ್ನಡ ಸಾಹಿತ್ಯಕ್ಕಾಗಿ ತಮ್ಮ ಸೇವೆ ಸಲ್ಲಿಸಿ, ಗಡಿ ಜಿಲ್ಲೆಯಲ್ಲಿ ಹಲವಾರ ಸಾಹಿತಿಗಳನ್ನು ಮುಖ್ಯವಾಹಿನಿಗೆ ತಂದ ಕಿರ್ತಿ ಇವರದ್ದಾಗಿದೆ. ಗಡಿ ಭಾಗದ ಕನ್ನಡದ ಕಂದ ‘ಖ್ಯಾತಿ ಕವಿ’ ಎಂದು ಎಂ.ಜಿ ದೇಶಪಾಂಡೆ ಹೆಸರುಗಳಿಸಿದ್ದಾರೆ. ಕನ್ನಡದ ವಾರ ಪತ್ರಿಕೆ ‘ಖ್ಯಾತಿ’ಯನ್ನು ಹೊರ ತಂದಾಗ ಅನ್ಯಭಾಷಿಕರು ಗಲಾಟೆ ಮಾಡಿ, ಹಲ್ಲೆ ನಡೆಸಿದ್ದರು. ಈ ಪ್ರತಿಕೆ ಮುದ್ರಣವಾಗಬಾರದು ಎಂದು ವಿರೋಧಿಸಿದ್ದರು. ಆ ಸಂದರ್ಭದಲ್ಲಿ ದೇಶಪಾಂಡೆ ಅವರು ಕನ್ನಡಕ್ಕಾಗಿ ಟೊಂಕ ಕಟ್ಟಿ ನಿಂತು, ಕನ್ನಡ ವಾರ ಪತ್ರಿಕೆಯನ್ನು ಮುದ್ರಿಸಿ ಹೊರತಂದು ಕನ್ನಡದ ಕಂದನಾದರು.
Advertisement
Advertisement
70ರ ದಶಕದಲ್ಲಿ ಮರಾಠಿ, ತೆಲುಗು, ಉರ್ದು ಹಾಗೂ ಹಿಂದೆ ಭಾಷೆಗಳ ಪ್ರಭಾವದಿಂದ ಗಡಿ ಜಿಲ್ಲೆ ಬೀದರ್ ತತ್ತರಿಸಿ ಹೋಗಿತ್ತು. ಕನ್ನಡದ ಕಾರ್ಯಕ್ರಮಗಳನ್ನು ಮಾಡುವುದು, ಕನ್ನಡದ ಸಂಘಗಳನ್ನು ಕಟ್ಟುವುದು, ಕನ್ನಡ ಪತ್ರಿಕೆಗಳನ್ನು ಮುದ್ರಣ ಮಾಡುವ ಕೆಲಸವನ್ನು ಅನ್ಯಭಾಷಿಕರು ಸಹಿಸುತ್ತಿರಲಿಲ್ಲ. ಕನ್ನಡಕ್ಕಾಗಿ ದುಡಿಯುವ ವ್ಯಕ್ತಿಗಳ ಮೇಲೆ ಹಲ್ಲೆ ಮಾಡಿ, ಕನ್ನಡಿಗರ ಮೇಲೆ ದಬ್ಬಾಳಿಕೆ ಮಾಡುತ್ತಿದ್ದರು. ಆ ಸಮಯದಲ್ಲಿ ಆಂಧ್ರ ಪ್ರದೇಶದಿಂದ ಬಂದು ಬ್ಯಾಂಕ್ ಉದ್ಯೋಗದಲ್ಲಿ ತೊಡಗಿಕೊಂಡಿದ್ದ ದೇಶಪಾಂಡೆ ಅವರು ಹಿರಿಯ ಸಾಹಿತಿಯಾಗಿ, ಕನ್ನಡಕ್ಕಾಗಿ ಟೊಂಕ ಕಟ್ಟಿನಿಂತರು. ಅನ್ಯಭಾಷೆಗಳ ಪತ್ರಿಕೆಗಳು ಮುದ್ರಣವಾಗುತ್ತಿದ್ದಾಗ ‘ಖ್ಯಾತಿ’ ಕನ್ನಡದ ಮೊದಲ ವಾರ ಪತ್ರಿಕೆಯನ್ನು ಕೈಬರಹದಲ್ಲಿ ಬರೆದು ಕಲ್ಲಚ್ಚಿನಲ್ಲಿ ಮುದ್ರಣ ಮಾಡಿದರು.
Advertisement
ಮೊದಲ ಕನ್ನಡ ಪತ್ರಿಕೆಯನ್ನು ಮುದ್ರಣ ಮಾಡಿದ್ದರಿಂದ ಅನ್ಯಭಾಷಿಕರು ದೇಶಪಾಂಡೆ ಅವರ ಮೇಲೆ ಹಲ್ಲೆ, ಗಲಾಟೆ ಕೂಡ ನಡೆಸಿದ್ದರು. ಆದರೆ ಯಾವ ದಬ್ಬಾಳಿಕೆಗೂ ಅಂಜದೆ ಕನ್ನಡಕ್ಕಾಗಿ ಶ್ರಮಿಸಿ ಜಿಲ್ಲೆಯಲ್ಲಿ ಕನ್ನಡ ಉಳಿಸಿದ ಕೀರ್ತಿ ದೇಶಪಾಂಡೆ ಅವರಿಗೆ ಸಲ್ಲುತ್ತದೆ. ಬೀದರ್ ನಗರದ ರಾಂಪೂರೆ ಕಾಲೋನಿ ನಿವಾಸಿಯಾಗಿರುವ ದೇಶಪಾಂಡೆಯವರು 7ಂರ ದಶಕದಲ್ಲಿ ಕನ್ನಡಕ್ಕಾಗಿ ತಮ್ಮ ಜೀವವನ್ನೆ ಪಣಕ್ಕಿಟ್ಟಿದ್ದರು. ಬ್ಯಾಂಕ್ ವೃತಿಯಲ್ಲಿ ಇದ್ದುಕೊಂಡೆ ಸಾಹಿತ್ಯದ ಒಲವು ಬೆಳಸಿಕೊಂಡ ದೇಶಪಾಂಡೆಯವರು ಕಥೆ, ಕಾದಂಬರಿ, ಕಾವ್ಯ, ಅನುವಾದ, ನಾಕಟ, ಇತಿಹಾಸ, ಲೇಖನ, ಚರಿತ್ರೆ, ವಚನ ಸಾಹಿತ್ಯ, ಸಂಪಾದನೆ ಸೇರಿದಂತೆ ಒಟ್ಟು 60ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಣೆ ಮಾಡಿ ಸೈ ಎನಿಸಿಕೊಂಡಿದ್ದಾರೆ.
Advertisement
ಕನ್ನಡ ಸಾಹಿತ್ಯ ಪರಿಷತ್, ಧರಿನಾಡು, ಚುಟುಕು ಪರಿಷತ್, ಬಿ ಕಲ್ಯಾಣ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ 5 ಸಾಹಿತ್ಯ ಸಮ್ಮೇಳನಗಳ ಸರ್ವಾಧ್ಯಕ್ಷರಾದ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. 70ನೇ ದಶಕದಲ್ಲಿ ಗಡಿ ಭಾಗದಲ್ಲಿ ಅನ್ಯಭಾಷಿಕರ ಅಟ್ಟಹಾಸ ಹೇಗಿತ್ತು ಎಂಬುದನ್ನು ಹಾಗೂ ಕನ್ನಡ ಉಳಿಯುವಿಗಾಗಿ ತಾವು ಅನುಭವಿಸಿದ ಸಂಕಷ್ಟದ ಬಗ್ಗೆ ದೇಸಪಾಂಡೆ ಅವರು ತಿಳಿಸಿದ್ದಾರೆ.
ಇವರ ಕೃತಿಗಳ ಮೇಲೆ ಕೆಲವು ಯುವ ಸಾಹಿತಿಗಳು ಪಿಎಚ್‍ಡಿ ಮಾಡಿದ್ದು, 900 ಪುಟಗಳ ಅಭಿನಂದನಾ ಗ್ರಂಥವನ್ನು ಕೂಡಾ ಹೊರತಂದಿದ್ದಾರೆ. ದೇಶಪಾಂಡೆಯವರ ‘ಮೀರಾಭಾಯಿ’ ಕವನ ಸಂಕಲನ ಮಹಾರಾಷ್ಟ್ರ ವಿವಿಯಲ್ಲಿ ಪಠ್ಯವಾಗಿದೆ. ಕನ್ನಡ ಭಾಷೆಯ 5ನೇಯ ತರಗತಿಯ ವಿದ್ಯಾರ್ಥಿಗಳು ಇವರ ಕವಿತೆಗಳನ್ನು ಓದುತ್ತಿದ್ದಾರೆ. ಕಲಬುರಗಿ ಹಾಗೂ ವಿಜಯಪುರ ಮಹಿಳಾ ವಿವಿಯ ಪಠ್ಯದಲ್ಲಿ ಇವರ ಕವಿತೆಗಳನ್ನು ಸೇರಿಸಲಾಗಿದೆ. ರಾಜ್ಯ ಮಟ್ಟದ “ಕನ್ನಡ ರತ್ನ” ಸೇರಿದಂತೆ, ಜಿಲ್ಲಾ, ಹಾಗೂ ತಾಲೂಕು ಮಟ್ಟದ ಅನೇಕ ಪ್ರಶಸ್ತಿಗಳು ಹಾಗೂ ಸನ್ಮಾನಗಳು ಇವರಿಗೆ ಸಂದಿವೆ.
ಜಿಲ್ಲಾ ಹಾಗೂ ತಾಲೂಕು ಮಟ್ಟದ ಎಲೆಮರೆಕಾಯಿಯಂತಿರುವ 1,000 ಸಾಧಕರನ್ನು ಗುರಿತಿಸಿ ದೇಶಪಾಂಡೆ ಅವರು ಪ್ರೋತ್ಸಾಹ ನೀಡಿದ್ದಾರೆ. ಅನ್ಯಭಾಷಗಳ ಪ್ರಭಾವ ಹೆಚ್ಚಿರುವ ಜಿಲ್ಲೆಯಲ್ಲಿ ಕನ್ನಡ ಉಳಿವಿಗಾಗಿ 5 ಕನ್ನಡ ಸಾಹಿತ್ಯ ಸಂಘಟನೆಗಳನ್ನು ಕೂಡ ದೇಶಪಾಂಡೆ ಅವರು ಸಂಸ್ಥಾಪನೆ ಮಾಡಿದ್ದಾರೆ. ಈ ಹಿರಿಯ ಸಾಹಿತಿ ಬಗ್ಗೆ ಹೇಳುತ್ತಾ ಹೊರಟರೆ ಪದಗಳೇ ಸಾಕಾಗುವುದಿಲ್ಲಾ, ಅಷ್ಟರ ಮಟ್ಟಿಗೆ ಅವರು ಗಡಿ ಜಿಲ್ಲೆಯಲ್ಲಿ ಕನ್ನಡವನ್ನು ಉಳಿಸಿ ಬೆಳೆಸಿದ್ದಾರೆ.
ಹೀಗಾಗಿ ಜಿಲ್ಲೆಯಲ್ಲಿ “ಖ್ಯಾತಿ ಕವಿ” ಎಂದೇ ಸುಪ್ರಸಿದ್ದಿ ಪಡೆದುಕೊಂಡಿರುವ ದೇಶಪಾಂಡೆ ಅವರು ಕನ್ನಡಕ್ಕಾಗಿ ಯಾವಾಗಲು ಟೊಂಕ ಕಟ್ಟಿ ನಿಲ್ಲುತ್ತಾರೆ. ಇವರ ಈ ಬಹುಮುಖ ಪ್ರತಿಭೆ ಬಗ್ಗೆ ಮೊತ್ತೋರ್ವ ಹಿರಿಯ ಸಾಹಿತಿಗಳು ಹಾಡಿ ಹೊಗಳಿದ್ದಾರೆ.