-ಕಲಬುರಗಿಯ ಲಿಂಗರಾಜಪ್ಪ ನಮ್ಮ ಪಬ್ಲಿಕ್ ಹೀರೋ
ಕಲಬುರಗಿ: ಶರಣಬಸವೇಶ್ವರ ಸಂಸ್ಥಾನ ಅಂದ್ರೆ ಸಾಕು ಈ ಭಾಗದ ಜನ ಅತ್ಯಂತ ಪೂಜನೀಯ ಭಾವನೆಯಿಂದ ನೋಡುತ್ತಾರೆ. ಇದಕ್ಕೆ ತಕ್ಕಂತೆ ಈ ವಂಶಸ್ಥರಾದ ಲಿಂಗರಾಜಪ್ಪನವರು ತಮ್ಮ ಜಮೀನಿಂದಲೇ ಜಲಕ್ರಾಂತಿ ಮಾಡಲು ಮುಂದಾಗಿದ್ದಾರೆ. ಅವರೇ ಇಂದಿನ ನಮ್ಮ ಪಬ್ಲಿಕ್ ಹೀರೋ.
ಲಿಂಗರಾಜಪ್ಪನವರು ಶರಣ ಸಿರಸಗಿ ಗ್ರಾಮದ ತಮ್ಮ ಸ್ವಂತ ಜಮೀನಿನಲ್ಲಿ ಒಟ್ಟು 4 ಎಕರೆ ಪ್ರದೇಶದಲ್ಲಿ ಸರ್ಕಾರದ ನಯಾಪೈಸೆ ಪಡೆಯದೇ, ತಮ್ಮ ಸ್ವಂತ ಹಣದಿಂದ 35 ಲಕ್ಷ ರೂ.ಗೂ ಅಧಿಕ ಹಣ ಖರ್ಚು ಮಾಡಿ ಒಟ್ಟು 2 ಕೆರೆಗಳನ್ನು ನಿರ್ಮಿಸಿದ್ದಾರೆ. ಲಿಂಗರಾಜಪ್ಪನವರು ಹೀಗೆ ಕೆರೆ ನಿರ್ಮಿಸುವದರ ಹಿಂದೆ ಸಾಮಾಜಿಕ ಕಳಕಳಿಯಿದೆ. ಮಳೆಗಾಲದ ಕೆಲ ದಿನಗಳು ಬಿಟ್ಟರೆ ಈ ಭಾಗದಲ್ಲಿ ಹೆಚ್ಚಿನ ಮಳೆ ಬರಲ್ಲ. ಬಂದರೂ ಸಹ ಆ ನೀರು ಕೆರೆ ಕಟ್ಟೆಗಳಲ್ಲಿ ಹೋಗಿ ಸಂಗ್ರಹವಾಗುವುದಿಲ್ಲ. ಇದರ ಪರಿಣಾಮ ಅಂತರ್ಜಲ ಕುಸಿದು ಬೋರ್‍ವೆಲ್ ಹಾಗೂ ಬಾವಿಗಳು ಬೇಗನೆ ಬತ್ತಿ ಹೋಗುತ್ತಿದ್ದವು. ಇದನ್ನು ಅರಿತ ಲಿಂಗರಾಜಪ್ಪ ಕೆರೆ ನಿರ್ಮಿಸಿ ಅಂತರ್ಜಲ ಮಟ್ಟ ಹೆಚ್ಚಿಸಿದ್ದಾರೆ. ಈ ಮೂಲಕ ಕಲ್ಯಾಣ ಕರ್ನಾಟಕ ಭಾಗದಲ್ಲಿ ಶರಣರು ನುಡಿದಂತೆ ಲಿಂಗರಾಜಪ್ಪ ಜಲಕ್ರಾಂತಿ ಮಾಡಲು ಮುಂದಾಗಿದ್ದಾರೆ.
Advertisement
Advertisement
ಈ ಕೆರೆಗಳನ್ನು ನೋಡಿದ ಲಿಂಗರಾಜಪ್ಪನವರ ಸ್ನೇಹಿತರು ತಾಡಪತ್ರೆ ಅಥವಾ ಸಿಮೆಂಟ್ ಕಾಂಕ್ರೆಟ್ ಹಾಕಿದ್ರೆ ವರ್ಷವಿಡಿ ನೀರು ಇರೋದಾಗಿ ಹೇಳಿದ್ದರು. ಆದರೆ ಹೀಗೆ ಮಾಡಿದ್ರೆ ಕೇವಲ ನಮ್ಮ ಜಮೀನಿಗೇ ನೀರು ಸಿಗುತ್ತೆ ವಿನಃ ಬೇರೆ ರೈತರಿಗೆ ಅನೂಕುಲ ಆಗಲ್ಲ ಅಂತಾ ಲಿಂಗರಾಜಪ್ಪನವರು ಅವರ ಸಲಹೆಯನ್ನು ನಯವಾಗಿಯೇ ನಿರಾಕರಿಸಿದ್ದರು. ಇವರ ಈ ಸಮಾಜ ಕಳಕಳಿಯ ಮನೋಭಾವನೆ ಮತ್ತು ರೈತರ ಕುರಿತು ಹೊಂದಿರುವ ಕಾಳಜಿ ಹಿನ್ನೆಲೆ ಇಂದು ಶರಣ ಸಿರಸಗಿ ಗ್ರಾಮದ ಸುತ್ತಮುತ್ತಲಿನ ರೈತರ ಜಮೀನಿನಲ್ಲಿರುವ ಬೋರ್ ಮತ್ತು ಬಾವಿಗಳು ಬತ್ತದೆ ಅಪಾರ ಪ್ರಮಾಣದ ನೀರು ಸಂಗ್ರಹವಾಗಿದೆ. ಹೀಗಾಗಿ ಇಲ್ಲಿನ ರೈತರು ಬೇಸಿಗೆ ಕಾಲ ಬಂದರೂ ಜಾನುವಾರು ಮತ್ತು ಅವರ ತೋಟಗಾರಿಕಾ ಬೆಳೆಗಳಿಗೆ ಬರಪೂರ ನೀರು ಸಿಗುತ್ತಿದೆ. ಅಷ್ಟೇ ಅಲ್ಲದೇ ಲಿಂಗರಾಜಪ್ಪ ನವರ ಜಮೀನಿನ ಪಕ್ಕದಲ್ಲಿ 200 ಎಕರೆಗೂ ಅಧಿಕ ಇರುವ ಅರಣ್ಯದಲ್ಲಿರುವ ಪ್ರಾಣಿಗಳಿಗೂ ನೀರು ಸಿಗುತ್ತಿದೆ.
Advertisement
Advertisement
ಶರಣರ ವಚನಕ್ಕೆ ತಕ್ಕಂತೆ ಲಿಂಗರಾಜಪ್ಪನವರು ಕಲಬುರಗಿಯಲ್ಲಿ ತಮ್ಮ ಕೈಲಾದಷ್ಟು ಸಮಾಜ ಸೇವೆ ಮಾಡುತ್ತಿದ್ದಾರೆ. ಈ ಮೂಲಕ ಚುನಾವಣೆ ಸಮಯದಲ್ಲಿ ನೂರಾರು ಕೆರೆಗಳ ನಿರ್ಮಿಸುವದ್ದಾಗಿ ಹೇಳಿ ವಂಚಿಸುವ ರಾಜಕಾರಣಿಗಳಿಗೆ ಮಾದರಿಯಾಗಿದ್ದಾರೆ.