ಯಾದಗಿರಿ: ಗದಗ್‍ನ ನೀಲರಾಯನಗಡ್ಡೆ ಬಗ್ಗೆ ಪ್ರತಿ ಪ್ರವಾಹದ ವೇಳೆಯೂ ನೀವು ಕೇಳಿಯೇ ಇರುತ್ತೀರಿ. ಕೃಷ್ಣಾ ನದಿ ಆರ್ಭಟಕ್ಕೆ ಅಲ್ಲಿನ ಸಾಗರದಂತಹ ನೀರಿಗೆ ಭೀತಿ ವ್ಯಕ್ತಪಡಿಸಿರುತ್ತೀರಿ. ಆದರೆ ಅಂತಹ ನೀರಿನಲ್ಲೂ ಈಜಿ ತನ್ನ ಗ್ರಾಮದ ಆಪ್ತರಕ್ಷನಾಗಿರುವ ಮೂಲಕ ಲಕ್ಷ್ಮಣ ಅವರು ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.
ಯಾದಗಿರಿ ಸುರಪುರ ತಾಲೂಕಿನ ನೀಲಕಂಠರಾಯನ ಗಡ್ಡಿ ಕೃಷ್ಣಾ ನದಿ ಪ್ರವಾಹಕ್ಕೆ ಸದಾ ತತ್ತರಿಸುವ ನಡುಗಡ್ಡೆ ಗ್ರಾಮ. 400 ನಿವಾಸಿಗಳಿರೋ ಗ್ರಾಮಕ್ಕೆ ನದಿಯಲ್ಲಿ ನೀರು ಇಲ್ಲದಿದ್ದರೂ ಹೋಗುವುದು ಕಷ್ಟವೇ. ಅಂಥದ್ದರಲ್ಲಿ ಬಸವಸಾಗರ ಜಲಾಶಯದಿಂದ ನೀರು ಬಿಟ್ಟರೆ ಸಾಕು ಈ ಗ್ರಾಮಕ್ಕೆ ಜಲದಿಗ್ಬಂಧನವಾಗುತ್ತದೆ. ಇಂತಹ ಸಮಯದಲ್ಲಿ ಲಕ್ಷ್ಮಣ ಅವರು ಆಪತ್ಬಾಂಧವನಂತೆ ಬರುತ್ತಾರೆ.
Advertisement
Advertisement
ನದಿಯ ಹರಿವು ಹೆಚ್ಚಾದಾಗ ಅಧಿಕಾರಿಗಳು, ಅಗ್ನಿಶಾಮಕ ಸಿಬ್ಬಂದಿ ಬೋಟ್‍ನಲ್ಲಿ ಬಂದರೂ ಲಕ್ಷ್ಮಣ ಅವರೇ ಗೈಡ್. ನದಿಯಲ್ಲಿ ಸುಮಾರು 7 ಲಕ್ಷ ಕ್ಯೂಸೆಕ್ ನೀರು ಅಬ್ಬರಿಸುತ್ತಿದ್ದರೂ ಪ್ರಾಣವನ್ನು ಲೆಕ್ಕಿಸದೇ ನದಿಯಲ್ಲಿ ಈಜಿ ಗರ್ಭಿಣಿಯರು, ಚಿಕ್ಕ ಮಕ್ಕಳು, ವಯಸ್ಸಾದವರನ್ನು ದಡಕ್ಕೆ ಸೇರಿಸಿ ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ನೀಡಿಸುತ್ತಾರೆ.
Advertisement
ಅಕ್ಷರ ಜ್ಞಾನ ಇಲ್ಲದಿದ್ದರೂ ಹಿರಿಯರಿಂದ ಕಲಿತ ಈಜಿನಿಂದ ಗ್ರಾಮಸ್ಥರನ್ನು ಕಾಪಾಡುತ್ತಿದ್ದಾರೆ ಈ ಲಕ್ಷ್ಮಣ. ಹಲವಾರು ವರ್ಷಗಳಿಂದ ನೀಲಕಂಠರಾಯನ ಗಡ್ಡಿಯಲ್ಲಿ ಜೀವನ ನಡೆಸುತ್ತಿರುವ ಈ ಲಕ್ಷ್ಮಣ ಅವರದ್ದು ನಾಲ್ಕು ಜನ ಇರುವ ಚಿಕ್ಕ ಕುಟುಂಬ. ಆದರೆ ಗ್ರಾಮಸ್ಥರೆಲ್ಲರೂ ನನ್ನವರೇ ಅನ್ನೋವಂತೆ ಕಾಪಾಡುತ್ತಾರೆ ಎಂದು ಸಾಮಾಜಿಕ ಹೋರಾಟಗಾರ ಬಸವರಾಜ್ ಹೇಳುತ್ತಾರೆ.
Advertisement
ತಾನು ಮಾಡುತ್ತಿರುವ ಈ ಕಾರ್ಯ ಎಂತಹ ಮಹತ್ವದ್ದು ಎಂಬುದು ಈ ಅಮಾಯಕ ಲಕ್ಷ್ಮಣನಿಗೆ ಗೊತ್ತೇ ಇಲ್ಲ. ನನ್ನ ಹೆಸರು ಬರೋದು ಬೇಡ. ಬದಲಿಗೆ ನಮ್ಮೂರಿನ ಕಷ್ಟ ನಿವಾರಣೆಯಾದ್ರೆ ಸಾಕು ಅನ್ನುತ್ತೆ ಈ ನಿಸ್ವಾರ್ಥ ಜೀವಿ.