-ಜೇನುಪೆಟ್ಟಿಗೆ ಜೊತೆ ಬದುಕು ಕಟ್ಟಿಕೊಂಡ ಸಾಧಕ
ಕೋಲಾರ: ಒಂದು ಕಾಲದಲ್ಲಿ ಪೈಸೆ ಪೈಸೆಗೂ ಪರದಾಡುತ್ತಿದ್ದ ಯುವಕ ಇಂದು ಲಕ್ಷಾಧಿಪತಿಯಾಗಿದ್ದಾರೆ. ನಿರುದ್ಯೋಗಿಯಾಗಿದ್ದ ಯುವಕ ಜೇನುಗೂಡು ಸಾಕಾಣಿಕೆ ಮೂಲಕ ಹಲವರಿಗೆ ಉದ್ಯೋಗದಾತರಾಗಿ ಬದಲಾಗಿದ್ದಾರೆ. ಕೋಲಾರ ತಾಲೂಕಿನ ತೊಂಡಾಲ ಗ್ರಾಮದ ನಿವಾಸಿ ವಿನಯ್ ಇವತ್ತಿನ ನಮ್ಮ ಪಬ್ಲಿಕ್ ಹೀರೋ.
ಕೃಷಿಯನ್ನೆ ಕಡೆಗಾಣಿಸುತ್ತಿರುವ ಇವತ್ತಿನ ದಿನಗಳಲ್ಲಿ ಯುವ ರೈತ ವಿನಯ್ ಜೇನು ಕೃಷಿಯಲ್ಲಿ ಜೀವನ ಕಟ್ಟಿಕೊಂಡಿದ್ದಾರೆ. ನೈಸರ್ಗಿಕ ಜೇನಿಗೆ ಮಾರುಕಟ್ಟೆಯಲ್ಲಿ ಬೆಲೆ ಹಾಗೂ ಬೇಡಿಕೆ ಹೆಚ್ಚಿದೆ. ಇದನ್ನು ಮನಗಂಡ ವಿನಯ್ ಸ್ಥಳೀಯ ರೈತರ ಸಹಾಯದೊಂದಿಗೆ ಕೃಷಿ ವಿಜ್ಞಾನಿಗಳ ಸಲಹೆ ಪಡೆದು 20ಕ್ಕೂ ಹೆಚ್ಚು ಜೇನು ಪಟ್ಟಿಗೆಗಳನ್ನು ಅಳವಡಿಸಿದ್ದಾರೆ. ಈ ಮೂಲಕ 50ಕ್ಕೂ ಹೆಚ್ಚು ಜೇನು ಕುಟುಂಬಗಳನ್ನ ಪೋಷಣೆ ಮಾಡುತ್ತಿದ್ದಾರೆ.
ಐಟಿಐ ಮುಗಿಸಿ ಕೆಲಸಕ್ಕೆ ಅಲೆದು ಸುಸ್ತಾದ ವಿನಯ್, ಕಳೆದ 8 ವರ್ಷಗಳಿಂದ ಜೇನು ಕೃಷಿಯಲ್ಲಿ ತೊಡಗಿದ್ದಾರೆ. ಕಾಡಿನಿಂದ ಜೇನು ಸಂಗ್ರಹಿಸಿ ನಂತರ ಬಾಕ್ಸ್ ಗಳ ಮೂಲಕ ಸಾಕಾಣಿಕೆ ಮಾಡುತ್ತಾ ಕೆಜಿಗಟ್ಟಲೆ ಜೇನು ಉತ್ಪಾದಿಸುತ್ತಿದ್ದಾರೆ. ಹುತ್ತ ಜೇನು, ತುಡುವೆ, ಮಿಸೆರಿ, ಕೊಲ್ಜೇನು ಸಾಕಾಣಿಕೆ ಮಾಡಿ ವಾರ್ಷಿಕ 6 ರಿಂದ 7 ಲಕ್ಷ ಆದಾಯ ಗಳಿಸುವಲ್ಲಿ ವಿನಯ್ ಯಶಸ್ವಿಯಾಗಿದ್ದಾರೆ.
ಮಳೆಗಾಲದಲ್ಲಿ ಜೇನು ಸಂಗ್ರಹವಾಗುವುದು ಕಡಿಮೆ. ಅದರಲ್ಲೂ ಜೇನು ಕೃಷಿಗೂ ಮುನ್ನ ಅದಕ್ಕೆ ಬೇಕಾದ ವಾತಾವರಣ ಸೃಷ್ಠಿ ಮಾಡಬೇಕು. ಸುತ್ತಮುತ್ತ ಹೂಗಳು ಬಿಡುವ ಮರಗಳು, ಜೇನು ಹುಳು ಮಕರಂಧ ಇರುವಂತಹ ಬೆಳೆಗಳಿದ್ದರೆ ಜೇನು ಸಂಗ್ರಹಿಸುವುದು ಸುಲಭ. ಮಾಲಿನ್ಯ ರಹಿತ ಗಾಳಿ, ಮಳೆ ಬಿಸಿಲಿನಿಂದ ರಕ್ಷಣೆಯ ಜೊತೆಗೆ ಜೇನು ಹೀರುವ ಕೀಟಗಳಿಂದಲೂ ರಕ್ಷಣೆ ಮಾಡಬೇಕು ಹಾಗಾಗಿ ವಾರಕ್ಕೊಮ್ಮೆ ಪರೀಕ್ಷೆ ಮಾಡುತ್ತಿರಬೇಕು ಎಂದು ವಿನಯ್ ಹೇಳುತ್ತಾರೆ.
ವಿನಯ್ ಜೇನು ಕೃಷಿಗೆ ಮನಸೋತ ಸಾಕಷ್ಟು ಜನ ಪ್ರಗತಿಪರ ರೈತರು, ಆಸಕ್ತರು ಜೇನು ಕೃಷಿ ವೀಕ್ಷಣೆ ಮಾಡುತ್ತಿದ್ದಾರೆ. ಜೇನು ತುಪ್ಪಕ್ಕೆ ಮಾತ್ರವಲ್ಲ, ಹುಳಕ್ಕೂ ಬೇಡಿಕೆಯಿದ್ದು, ಜೇನು ಕುಟುಂಬಕ್ಕಿಷ್ಟು ಎಂದು ಮಾರಾಟ ಮಾಡಲಾಗುತ್ತದೆ. ಇದೊಂದು ಮಾದರಿ ಪ್ರಯೋಗವಾಗಿದ್ದು, ಇದನ್ನ ಇತರೆ ರೈತರು ಕೂಡ ಅಳವಡಿಸಿಕೊಂಡರೆ ಹೆಚ್ಚೆಚ್ಚು ಲಾಭ ಪಡೆಯಬಹುದು ಎಂಬುದು ಸ್ಥಳೀಯ ಪ್ರಗತಿಪರ ರೈತ ಚಂದ್ರಶೇಖರ್ ಸಲಹೆ ನೀಡುತ್ತಾರೆ.
ಯಾರ ನೆರವಿಲ್ಲದೆ, ಕೃಷಿ ತೋಟಗಾರಿಕಾ ಇಲಾಖೆಗಳು ಕೂಡ ನಾಚುವಂತೆ ಜೇನು ಕೃಷಿ ಮಾಡುವ ಮೂಲಕ ವಿನಯ್ ಮಾದರಿಯಾಗಿದ್ದಾರೆ. ಆಧುನಿಕ ಯುಗದಲ್ಲಿ ಜೇನು ಸಾಕಾಣಿಕೆ ಅನ್ನೋದು ಒಂದು ಕೃಷಿಯೇತರ ಚಟುವಟಿಕೆ ಆಗಿದ್ದು, ಕೃಷಿಯ ಜೊತೆಗೆ ಜೇನು ರೈತನ ಖುಷಿ ಜೀವನಕ್ಕೆ ದಾರಿಯಾಗಿರುವುದು ವಿಶೇಷ.