ರಾಯಚೂರು: ಏನಾದರೂ ಸಾಧಿಸಲೇಬೇಕು ಅನ್ನೋ ಛಲ ಇರೋರು ಒಂದಲ್ಲ ಒಂದು ದಿನ ಎಂತಾ ಕಷ್ಟ ಇದ್ರೂ ಸಾಧಿಸಿ ತೋರಿಸುತ್ತಾರೆ. ಅದಕ್ಕೆ ನಮ್ಮ ರಾಯಚೂರಿನ ಪಬ್ಲಿಕ್ ಹೀರೋ ಸಾಕ್ಷಿ. ಬರಡು ಭೂಮಿಯಲ್ಲೇ ಮನೆ ಕಟ್ಟಿಕೊಂಡು ಇಡೀ ಭೂಮಿಯನ್ನೇ ಬಂಗಾರ ಮಾಡಿ, ಬೆಳೆ ಬೆಳೆಯುತ್ತಿದ್ದಾರೆ.
ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿನ ಕವಿತಾಳ ಗ್ರಾಮದ ನಿವಾಸಿ ಕವಿತಾ ಮಿಶ್ರಾ, ಕೃಷಿ ಕ್ಷೇತ್ರದಲ್ಲಿ ಸಾಧನೆಗೆ ಹಠ ಹಿಡಿದು ತಮ್ಮ 8 ಎಕರೆ ಬರಡು ಭೂಮಿಯಲ್ಲಿ ಸಾವಯವ ಕೃಷಿ ಹಾಗೂ ಹನಿ ನೀರಾವರಿ ಮೂಲಕ ಬಂಗಾರದಂತ ಬೆಳೆ ಬೆಳೀತಿದ್ದಾರೆ. ಕಂಪ್ಯೂಟರ್ ಸೈನ್ಸ್ ಡಿಪ್ಲೋಮಾ ಜೊತೆಗೆ ಎಂಎ ಸೈಕಾಲಜಿ ಓದಿರೋ ಕವಿತಾ ಅವರು ಕಳೆದ 7 ವರ್ಷಗಳಲ್ಲಿ ಪ್ರಗತಿಪರ ರೈತ ಮಹಿಳೆಯಾಗಿದ್ದಾರೆ.
ಅತೀ ಸಾಂದ್ರಿಕೃತ ಬೇಸಾಯ ಪದ್ಧತಿ ಅಳವಡಿಸಿಕೊಂಡು ಮಾವು, ಸೀತಾಫಲ, ದಾಳಿಂಬೆ, ಮೂಸಂಬಿ, ನಿಂಬು, ಸಪೋಟ, ಬಾರೇಹಣ್ಣು, ಮತ್ತಿ, ಶ್ರೀಗಂಧ, ರಕ್ತಚಂದನ ಸೇರಿದಂತೆ ನಾನಾ ಬಗೆಯ ಗಿಡಗಳನ್ನ ಬೆಳೆದಿದ್ದಾರೆ. ಶ್ರೀಗಂಧ ಹಾಗೂ ರಕ್ತಚಂದನದ ಮರಗಳ ಮಾರಾಟಕ್ಕೆ ಕೆಎಸ್‍ಡಿಎಲ್ ಜೊತೆ ಒಪ್ಪಂದ ಮಾಡಿಕೊಂಡಿದ್ದಾರೆ.
ಇಷ್ಟೇ ಅಲ್ಲದೇ ಕವಿತಾ ಅವರು ತೋಟದಲ್ಲೇ ಮನೆ ಮಾಡಿಕೊಂಡು ಹಸು, ಕುರಿ, ಕೋಳಿ ಸಾಕಾಣಿಕೆ ಮಾಡಿದ್ದಾರೆ. ವರ್ಷಕ್ಕೆ 25 ಲಕ್ಷ ರೂಪಾಯಿಗೂ ಅಧಿಕ ಆದಾಯ ಗಳಿಸ್ತಿದ್ದಾರೆ. ಇಂಗ್ಲಿಷ್, ಹಿಂದಿ, ಕನ್ನಡ ಸೇರಿದಂತೆ ಐದು ಭಾಷೆಗಳನ್ನ ಸುಲಲಿತವಾಗಿ ಮಾತನಾಡಬಲ್ಲ ಕವಿತಾರನ್ನ ವಿವಿಧ ಕೃಷಿ ವಿವಿಗಳ ಸಂಪನ್ಮೂಲ ವ್ಯಕ್ತಿಗಳು ಕೃಷಿ ಪದ್ಧತಿ ಬಗ್ಗೆ ಮಾಹಿತಿ ಪಡೆದು ಜನರಿಗೆ ತಲುಪಿಸ್ತಿದ್ದಾರೆ.