ಬಳ್ಳಾರಿ: ಸಮಾಜಕ್ಕೆ ಏನನ್ನಾದರೂ ಕೊಡುಗೆ ಕೊಡಬೇಕು ಎನ್ನುವ ಮನಸ್ಸು ಇದ್ದರೆ ಸಾಲದು, ಅದನ್ನು ಮಾಡಲೇಬೇಕು ಎನ್ನುವ ಛಲ ಇರಬೇಕು. ನಾನು ನನ್ನ ಮನೆ, ನನ್ನ ಕೆಲಸ ಎನ್ನುವ ಈ ಸಮಾಜದಲ್ಲಿ ಇದಕ್ಕೆ ಅಪವಾದ ಎಂಬಂತೆ ಇಲ್ಲೊಬ್ಬರು ಸಹ ಪ್ರಾಧ್ಯಾಪಕರಿದ್ದಾರೆ. ಸರ್ಕಾರ ಮಾಡಬೇಕಾದ ಕೆಲಸ ತಮ್ಮ ಮನೆಯ ಕೆಲಸ ಎಂಬಂತೆ ಟೊಂಕ ಕಟ್ಟಿ ಕೆಲಸ ಮಾಡುವ ಮೂಲಕ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.
Advertisement
ಬಳ್ಳಾರಿಯ ರಾವ್ ಬಹುದ್ದೂರ್ ಎಂಜಿನಿಯರಿಂಗ್ ಕಾಲೇಜಿನ ಸಹ ಪ್ರಾಧ್ಯಾಪಕ ಜಗದೀಶ್.ಜಿ.ಎಂ ಕೊಟ್ಟೂರು ಅವರ ವೇತನ ತಿಂಗಳಿಗೆ 40 ಸಾವಿರ ರೂಪಾಯಿ. ಶ್ರೀಮಂತರು, ಗಣಿ ಉದ್ಯಮಿಗಳು ಮಾಡದ ಕೆಲಸವನ್ನು ಜಗದೀಶ್ ಮಾಡಿದ್ದಾರೆ. ಗಣಿಬಾಧಿತ ಚಾಣೆಕುಂಟೆ ಎಂಬ ಗ್ರಾಮವನ್ನು ದತ್ತು ತೆಗೆದುಕೊಂಡಿದ್ದಾರೆ. ಗ್ರಾಮಕ್ಕೆ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸುತ್ತಿದ್ದಾರೆ. ಆರಂಭಿಕ ಹಂತದಲ್ಲಿ, ಸ್ನೇಹಿತರು ಮತ್ತು ದಾನಿಗಳ ನೆರವಿನಿಂದ 4 ಲಕ್ಷ ರೂ. ವೆಚ್ಚದಲ್ಲಿ ಅಂಗನವಾಡಿ, ಶೌಚಾಲಯ ಕಟ್ಟಿಸಿದ್ದಾರೆ. ಕೈಗೆ ಬರುವ ವೇತನದಲ್ಲಿ ಅರ್ಧಪಾಲನ್ನು ಇದಕ್ಕೆ ವ್ಯಯಿಸುತ್ತಿದ್ದಾರೆ.
Advertisement
Advertisement
ಕಾಲೇಜಿನ ವಿದ್ಯಾರ್ಥಿಗಳನ್ನು ಸೇರಿಸಿಕೊಂಡು ಗ್ರಾಮದ ಅಭಿವೃದ್ಧಿಗೆ ಪಣ ತೊಟ್ಟಿರುವ ಜಗದೀಶ್, ಸಮಯ ಸಿಕ್ಕಾಗಲೆಲ್ಲಾ ಚಾಣೆಕುಂಟೆಗೆ ತೆರಳುತ್ತಾರೆ. ಗ್ರಾಮಸ್ಥರಿಗೆ ಶಿಕ್ಷಣ, ಡಿಜಿಟಲ್ ತಂತ್ರಜ್ಞಾನದ ಬಗ್ಗೆ ಅರಿವು ಮೂಡಿಸುತ್ತಾರೆ. ಮುಂದೆ ಶಾಲೆಗೆ ಕಾಯಕಲ್ಪ, ಶುದ್ಧ ನೀರು ಸೇರಿ ಇತರೆ ಮೂಲ ಸೌಲಭ್ಯ ಕಲ್ಪಿಸಲು ತೀರ್ಮಾನಿಸಿದ್ದಾರೆ. ಜಗದೀಶ್ ಸಾಮಾಜಿಕ ಕಾರ್ಯಕ್ಕೆ ಕಾಲೇಜ್ ಆಡಳಿತ ಮಂಡಳಿಯ ಸಂಪೂರ್ಣ ಸಹಕಾರ ಇದೆ.
Advertisement
ಒಟ್ಟಿನಲ್ಲಿ ಆಫೀಸ್ ಕೆಲಸ ಮುಗಿಸಿ ಮನೆ ಸೇರಿದರೆ ಸಾಕು ಎನ್ನುವ ಅದೆಷ್ಟೋ ಜನರಿಗೆ ಜಗದೀಶ್ ಕೆಲಸ ಮಾದರಿಯಾಗಿದೆ.