ಕೊಪ್ಪಳ: ರಾಜ್ಯ ಸರ್ಕಾರ ಘೋಷಿಸಿದ 2023ನೇ ಸಾಲಿನ ಕರ್ನಾಟಕ ರಾಜ್ಯೋತ್ಸವ ( Rajyotsava Award) ಪ್ರಶಸ್ತಿ ಪುರಸ್ಕೃತರ ಪಟ್ಟಿಯಲ್ಲಿ ಪಬ್ಲಿಕ್ ಹೀರೋ (PUBLiC Hero) ಸೇರಿದಂತೆ ಕೊಪ್ಪಳ ಜಿಲ್ಲೆಯ ಮೂವರು ಸಾಧಕರು ಸ್ಥಾನ ಪಡೆದಿದ್ದಾರೆ.
ಯಕ್ಷಗಾನ/ಬಯಲಾಟ ವಿಭಾಗದಲ್ಲಿ ಕೊಪ್ಪಳ (Koppala) ತಾಲೂಕಿನ ಮೋರನಾಳ ಗ್ರಾಮದ ತೊಗಲು ಬೊಂಬೆ ಆಟದ ಕಲಾವಿದ ಕೇಶಪ್ಪ ಶಿಳ್ಳಿಕ್ಯಾತರ್, ಜಾನಪದ ವಿಭಾಗದಲ್ಲಿ ಕಾರಟಗಿ ತಾಲೂಕು ಸಿದ್ದಾಪೂರ ಗ್ರಾಮದ ಹಗಲುವೇಷ ಕಲಾವಿದ ವಿಭೂತಿ ಗುಂಡಪ್ಪ ಹಾಗೂ ಸಮಾಜ ಸೇವೆ ವಿಭಾಗದಲ್ಲಿ ಕೊಪ್ಪಳ ತಾಲೂಕಿನ ಕುಣಿಕೇರಿ ಗ್ರಾಮದ ಮಹಾದಾನಿ ಹುಚ್ಚಮ್ಮ ಬಸಪ್ಪ ಚೌದರಿ (Hucchamma Basappa Chowdry) ಅವರ ಹೆಸರು ಪ್ರಕಟಿಸಿದೆ.
Advertisement
ಪ್ರಶಸ್ತಿಗಾಗಿ ಅರ್ಜಿ ಸಲ್ಲಿಸಿರದ ಹುಚ್ಚಮ್ಮ ಅವರನ್ನು ಸರ್ಕಾರ ಪ್ರಶಸ್ತಿಗೆ ಆಯ್ಕೆ ಮಾಡಿರುವುದು ವಿಶೇಷವಾಗಿದೆ. ತಮ್ಮ ಬದುಕಿಗೆ ಇದ್ದ ಒಟ್ಟು 2 ಎರಡು ಎಕರೆ ಭೂಮಿಯನ್ನು ಹುಚ್ಚಮ್ಮ ತಮ್ಮೂರಿನ ಸರಕಾರಿ ಶಾಲಾ ಕಟ್ಟಡ ನಿರ್ಮಾಣಕ್ಕೆ ದಾನ ನೀಡಿದ್ದರು. ಮಕ್ಕಳಿಲ್ಲದ ಹುಚ್ಚಮ್ಮ ತಮ್ಮ 60ನೇ ವಯಸ್ಸಿನ ವರೆಗೆ ಶಾಲೆಯಲ್ಲಿ ಬಿಸಿಯೂಟ ಮಾಡಿಕೊಂಡು, ಶಾಲೆ ಮಕ್ಕಳಲ್ಲೇ ತಮ್ಮ ಮಕ್ಕಳನ್ನು ಕಂಡಿದ್ದರು. ಇಂಥ ಮಹಾ ದಾನಿಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಬೇಕು ಎಂಬ ಒತ್ತಾಯ ಕೊಪ್ಪಳ ಜಿಲ್ಲಾದ್ಯಂತ ಕೇಳಿ ಬಂದಿತ್ತು. ಯುವಕರು ಮತ್ತು ಪ್ರಜ್ಞಾವಂತರು ಸಾಮಾಜಿಕ ಜಾಲತಾಣದಲ್ಲಿ ಅಜ್ಜಿಗೆ ಪ್ರಶಸ್ತಿ ನೀಡಲು ಅಭಿಯಾನ ಮಾಡಿದ್ದರು.
Advertisement
Advertisement
ಈ ಹಿಂದೆ ಪಬ್ಲಿಕ್ ಟಿವಿಯಲ್ಲಿ ಹುಚ್ಚಮ್ಮನನ್ನು ಪಬ್ಲಿಕ್ ಹೀರೋ ಮೂಲಕ ರಾಜ್ಯದ ಜನತೆಗೆ ದಾನಿಯ ಬಗ್ಗೆ ಮಾಹಿತಿ ನೀಡಿತ್ತು. ಕುಣಿಕೇರಿ ಗ್ರಾಮದಲ್ಲಿ ಜಮೀನಿಗೆ ಚಿನ್ನದ ಬೆಲೆ ಬೆಲೆ ಇದ್ದರೂ ದಾನ ಮಾಡಿ ಹುಚ್ಚಮ್ಮ ಚೌದ್ರಿ, ಪತಿಯ ಸಾವಿನ ಬಳಿಕ ಶಾಲೆಯ ಮಕ್ಕಳನ್ನೇ ತಮ್ಮ ಮಕ್ಕಳಂತೆ ಕಂಡಿದ್ದ ಹುಚ್ಚಮ್ಮರ ಹೆಸರು ಆಯ್ಕೆ ಮಾಡಿರುವ ಸರ್ಕಾರದ ಕ್ರಮಕ್ಕೆ ಜಿಲ್ಲೆಯಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ. ಇದನ್ನೂ ಓದಿ: ಪಬ್ಲಿಕ್ ಹೀರೋ ಬಾದಾಮಿಯ ಶಿವ ರೆಡ್ಡಿ ವಾಸನ್‌ಗೆ ರಾಜ್ಯೋತ್ಸವ ಪ್ರಶಸ್ತಿ
Advertisement
ತೊಗಲುಗೊಂಬೆ: ಯಕ್ಷಗಾನ/ ಬಯಲಾಟ ವಿಭಾಗದಲ್ಲಿ ಪ್ರಶಸ್ತಿ ಗಿಟ್ಟಿಸಿಕೊಂಡಿರೋ ಕೇಶಪ್ಪ ಶಿಳ್ಳೆಕ್ಯಾತರ ಅಂತರಾಷ್ಟ್ರೀಯ ತೊಗಲುಗೊಂಬೆ ಕಲಾವಿದ. ಎಸ್ಸಿ ವರ್ಗದ ಅಲೆಮಾರಿ ಬುಡಕಟ್ಟು ಜನಾಂಗಕ್ಕೆ ಸೇರಿದ್ದಾರೆ. ಇವರು ಅಮೆರಿಕ, ಪ್ಯಾರಿಸ್, ಇಟಲಿ, ಸ್ವಿಜರ್ಲ್ಯಾಂಡ್ ಸೇರಿದಂತೆ ವಿವಿಧ ವಿದೇಶ ಮತ್ತು ದೇಶದ ಪ್ರಸಿದ್ಧ ವೇದಿಕೆಯಲ್ಲಿ ತೊಗಲುಗೊಂಬೆ ಆಟ ಪ್ರದರ್ಶನ ಮಾಡಿದ್ದಾರೆ. ಈ ಮೂಲಕ ಜಾನಪದ ಕಲೆ ಮತ್ತು ಸಂಸ್ಕೃತಿಗೆ ತಮ್ಮದೇ ಕೊಡುಗೆ ನೀಡಿದ್ದಾರೆ.
ಈ ಮೊದಲು ಕೇಶಪ್ಪ ಅವರು ಟೆರನ್ ಇಂಟರ್ನ್ಯಾಷನಲ್ ಪ್ರಶಸ್ತಿ, ಜಾನಪದ ಅಕಾಡೆಮಿ ಗೊಂಬೆ ಪರಂಪರೆ ಪ್ರಶಸ್ತಿ, ರಂಗ ಕಲೆ ಅಧ್ಯಯನ, ಹೊರನಾಡು ಉತ್ಸವ, ಧಾರವಾಡ ಉಸ್ತವ, ವಿಶ್ವ ಸಮ್ಮೇಳನ ಪ್ರಶಸ್ತಿ, ಹಂಪಿ ಉತ್ಸವ ಪ್ರಶಸ್ತಿ, ವಿಕ್ರಮಾದಿತ್ಯ ಸೇರಿ ವಿವಿಧ ಪ್ರಶಸ್ತಿ ಪಡೆದಿದ್ದಾರೆ.
ತಮ್ಮ 9ನೇ ವಯಸ್ಸಿನಿಂದ ಈವರೆಗೆ ಕುಲ ಕಸುಬು ತೊಗಲು ಗೊಂಬೆ ಆಟವನ್ನೇ ವೃತ್ತಿ ಮಾಡಿಕೊಂಡು ಜೀವನ ಮಾಡಿದ್ದಾರೆ. ರಾಮಾಯಣ, ಮಹಾ ಭಾರತದಂತ ಮಹಾಕಾವ್ಯ ಹಾಗೂ ಪ್ರಸ್ತುತ ವಿದ್ಯಮಾನಗಳನ್ನು ತೊಗಲು ಗೊಂಬೆ ಆಟದ ಮೂಲಕ ಪ್ರದರ್ಶನ ನೀಡಿದ ಹೆಗ್ಗಳಿಕೆ ಇವರದ್ದು.
ಹಗಲು ವೇಷ: ಜನಪದ ವಿಭಾಗದಲ್ಲಿ ಪ್ರಶಸ್ತಿ ತಮ್ಮದಾಗಿಸಿಕೊಂಡಿರುವ ಹಗಲು ವೇಷ ಕಲಾವಿದ ವಿಭೂತಿ ಗುಂಡಪ್ಪ 6 ದಶಕದಿಂದ ಕಲಾಸೇವೆಯಲ್ಲಿ ತೊಡಗಿದ್ದಾರೆ. ಎಸ್ಸಿ ವರ್ಗದ ಬುಡ್ಗ ಜಂಗಮ ಸಮಾಜಕ್ಕೆ ಇದೇ ಮೊದಲ ಬಾರಿಗೆ ರಾಜ್ಯೋತ್ಸವ ಪ್ರಶಸ್ತಿ ದೊರೆತಿದ್ದು ವಿಶೇಷ. ಕಾರಟಗಿ ತಾಲೂಕು ಸಿದ್ದಾಪೂರ ಗ್ರಾಮದ ವಿಭೂತಿ ಗುಂಡಪ್ಪ ಹಗಲು ವೇಷವನ್ನೇ ಕಾಯಕ ಮಾಡಿಕೊಂಡು ಜೀವನ ಮಾಡುತ್ತಿದ್ದಾರೆ. ತಮ್ಮ 7ನೇ ವರ್ಷದಿಂದ ಪಾತ್ರ ಮಾಡಿಕೊಂಡು ಬಂದಿದ್ದಾರೆ. ರಾಜ್ಯಾದ್ಯಂತ ಸುತ್ತಾಡಿ ಹಗಲು ವೇಷ ಪ್ರದರ್ಶನ ಮಾಡಿದ್ದಾರೆ.
ಹಗಲುವೇಷ ಕಲೆ ಜೊತೆಗೆ ಜನಪದ ಹಾಡು, ತತ್ವಪದ, ದಾಸರ ಪದ, ಭಕ್ತಿಗೀತೆ, ಭಾವಗೀತೆ ಹಾಗೂ ವಚನ ಗಾಯನದ ಮೂಲಕವೂ ಹೆಸರು ಮಾಡಿದ್ದಾರೆ. ಜೊತೆಗೆ ತಮ್ಮ ಪೂಷಕರಿಂದ ಕಲಿತ ಹಾರ್ಮೋನಿಯಂ, ತಬಲಾ, ದಮ್ಮಡಿ, ತಾಳ ವಾದ್ಯ ನುಡಿಸಿಗೂ ಗಮನ ಸೆಳೆದಿದ್ದಾರೆ. ರಾಜ್ಯ ಮಾತ್ರವಲ್ಲದೇ ಆಂಧ್ರಪ್ರದೇಶದ, ತಮಿಳುನಾಡು, ಮಹಾರಾಷ್ಟ್ರದಲ್ಲೂ ಗುಂಡಪ್ಪ ಕಲಾ ಪ್ರದರ್ಶನ ನೀಡಿದ್ದಾರೆ. ಅಲೆಮಾರಿ ಬುಡ್ಗ ಜಂಗಮ ಸಮಾಜಕ್ಕೆ ರಾಜ್ಯೋತ್ಸವ ಪ್ರಶಸ್ತಿ ಸಿಕ್ಕಿರುವುದು ಇದೇ ಮೊದಲ ಬಾರಿಗೆ. ಇದು ಇಡೀ ಸಮಾಜಕ್ಕೆ ಸಂದ ಗೌರವ ಎಂದು ಗುಂಡಪ್ಪ ಹೇಳಿದ್ದಾರೆ.
Web Stories