ಉಡುಪಿ: ಆಕೆ ಸಕ್ರೆಬೈಲಿನ ಚೆಲುವೆ. ಕೃಷ್ಣನ ಸೇವೆಗೆ ಕಾಡು ಬಿಟ್ಟು ನಾಡಿಗೆ ಬಂದಾಕೆ. ಇಷ್ಟು ವರ್ಷ ಹಾಗೋ ಹೀಗೋ ಸ್ವಚ್ಛಂದವಾಗಿ ಆಕೆ ರಥಬೀದಿಯಲ್ಲಿ ಓಡಾಡಿಕೊಂಡಿದ್ಲು. ಆದ್ರೆ ಇಷ್ಟು ವರ್ಷ ಇಲ್ಲದ ಬರ ಕರಾವಳಿಗೆ ಅಪ್ಪಳಿಸಿದೆ. ನೀರಿಲ್ಲದೆ, ಸ್ನಾನವಿಲ್ಲದೆ ಬಸವಳಿದು ಬೆಂಡಾದ ಆಕೆಯ ಸಹಾಯಕ್ಕೆ ನಮ್ಮ ಪಬ್ಲಿಕ್ ಹೀರೋ ಟೊಂಕಕಟ್ಟಿ ನಿಂತಿದ್ದಾರೆ.
“ಅಬ್ಬಬ್ಬಾ ಸೆಕೆ.., ಉಫ್.. ನೆತ್ತಿ ಸುಡುವ ಬಿಸಿಲು ತಡ್ಕೊಳ್ಳೊಕಾಗಲ್ಲ. ನೀರು ಕೊಡಿ.. ಜೂಸ್ ಕೊಡಿ ಪ್ಲೀಸ್” ಕರಾವಳಿಯಲ್ಲಿ ಸುಡುವ ಸೂರ್ಯನ ಕೆಳಗೆ ಓಡಾಡೋ ಮಂದಿ ಆಡೋ ಮಾತುಗಳಿವು. ಉಡುಪಿಯ ಈ ಬಾರಿಯ ಬೇಸಿಗೆ ಇದ್ದ ಬದ್ದ ನದಿಗಳನ್ನೆಲ್ಲಾ ಒಣಗಿಸಿದೆ. ಜನಕ್ಕೆ ಕುಡಿಯಲು ನೀರಿಲ್ಲ. ಇನ್ನು ಪ್ರಾಣಿಗಳಿಗೆ ಸ್ನಾನಕ್ಕೆ ನೀರಿರುತ್ತಾ? ಉಡುಪಿ ಕೃಷ್ಣಮಠದ ಆನೆ ಸುಭದ್ರೆಗೂ ಹೀಗೇ ಆಗಿದೆ. ಬಿರು ಬೇಸಿಗೆಯ ಬೇಗೆ ತಾಳಲಾರದೆ ಸುಭದ್ರೆ ಒದ್ದಾಡುತ್ತಿದ್ದಾಳೆ. ತಣ್ಣೀರಿನ ಸ್ನಾನ ಇಲ್ಲದೆ ಕಿರಿಕಿರಿಗೊಳಗಾಗಿದ್ದಳು.
Advertisement
Advertisement
ಇಂತಹ ಪರಿಸ್ಥಿತಿಯಲ್ಲಿ ಅಲ್ಲಿಗೆ ನಮ್ಮ ಪಬ್ಲಿಕ್ ಹೀರೋ ನಿತ್ಯಾನಂದ ಒಳಕಾಡು ಎಂಟ್ರಿಕೊಟ್ಟಿದ್ದಾರೆ. 5000 ಲೀಟರ್ ನೀರಿನ ಟ್ಯಾಂಕ್ ಟೆಂಪೋಗೇರಿಸಿ ಹೊರಟಿದ್ದಾರೆ. ಸ್ವತಃ ತಾವೇ ಆನೆ ಲಾಯದಲ್ಲಿ ಸುಭಧ್ರೆಗೆ ಸ್ನಾನ ಮಾಡಿಸಿದ್ದಾರೆ. ತಣ್ಣೀರಿನ ಸ್ನಾನಕ್ಕೆ ಮೈಯ್ಯೊಡ್ಡಿ ಮಲಗಿದ ಆನೆ ಕೆಲ ಹೊತ್ತು ಮೇಲೇಳಲೇ ಇಲ್ಲ. ಮಗುವಿನಂತೆ ವರ್ತಿಸಿದ ಸುಭದ್ರೆ ಮನಸ್ಸಿಗೆ ಖುಷಿಯಾಗುವ ತನಕ ನೀರಿಗೆ ಮೈ ಕೊಟ್ಟು ಖುಷಿ ಪಟ್ಟಿದ್ದಾಳೆ.
Advertisement
Advertisement
ಪಬ್ಲಿಕ್ ಟಿವಿ ಜೊತೆ ಮಾತನಾಡಿದ ನಿತ್ಯಾನಂದ ಒಳಕಾಡು, ಮನುಷ್ಯನತ್ರ ದುಡ್ಡಿರುತ್ತದೆ. ನೀರು ಸಿಕ್ಕಿಲ್ಲಾಂದ್ರೆ ಜ್ಯೂಸ್ ಕುಡಿದಾದ್ರೂ ದಾಹ ತೀರಿಸಿಕೊಳ್ಳುತ್ತಾನೆ. ಮಾತು ಬಾರದ ಪ್ರಾಣಿಗಳು ಏನು ಮಾಡಬೇಕು? ಲಕ್ಷಾಂತರ ದನಕರುಗಳು ಕುಡಿಯೋದಕ್ಕೆ ನೀರಿಲ್ಲದೆ ಇದ್ರೆ ಏನು ಮಾಡಬೇಕು? ಆನೆಗೆ ವಾರಕ್ಕೆರಡು ಬಾರಿಯಾದರೂ ತಣ್ಣೀರಿನ ಸ್ನಾನ ಆಗ್ಬೇಕು. ದಾಹ ತೀರಬೇಕಾದರೆ 300 ಲೀಟರ್ ನೀರು ಕುಡಿಯಲು ಬೇಕು. ಮನುಷ್ಯನ ಅತಿಯಾಸೆಗೆ ಕಾಡು ನಾಶ ಮಾಡಿ ನೀರು ನಿಲ್ಲುವ ಮೂಲವನ್ನೆಲ್ಲ ಮುಚ್ಚಿದ್ದರಿಂದ ಸಮಸ್ಯೆ ಈ ರೀತಿ ಮಾಡಲಾಗಿದೆ ಎಂದು ಅಸಹಾಯಕತೆ ತೋಡಿಕೊಂಡರು.
ತಣ್ಣೀರ ಸ್ನಾನ ಮಾಡಿದ ಮೇಲೆ ಆನೆಗೆ ಖುಷಿಯಾಗಿದೆ- ಅತ್ತಿಂದಿತ್ತ ನಲಿದಾಡಿದೆ. ರಾತ್ರಿ ನಿದ್ರೆ ಮಾಡಿದೆ. ಕಳೆದ ಒಂದು ತಿಂಗಳಿಂದ ಉಡುಪಿ ಕೃಷ್ಣಮಠದಲ್ಲಿ ನೀರಿನ ಅಭಾವ ಇರೋದ್ರಿಂದ ಸುಭದ್ರೆಯ ಸ್ನಾನಕ್ಕೆ- ಕುಡಿಯೋದಕ್ಕೆ ನೀರಿಗೆ ಕಷ್ಟವಾಗಿತ್ತು. ಇದನ್ನರಿತ ಸಮಾಜ ಸೇವಕ- ಪಬ್ಲಿಕ್ ಹೀರೋ ನಿತ್ಯಾನಂದ ಒಳಕಾಡು, ತಾರನಾಥ ಮೇಸ್ತ ಖುಷಿ ಖುಷಿಯಾಗಿ ಸ್ನಾನ ಮಾಡಿಸಿದ್ದಾರೆ. ಸ್ಥಳೀಯರು ಕೈಜೋಡಿಸಿದ್ದಾರೆ. ನಿತ್ಯಾನಂದ ಒಳಕಾಡು ಕಾರ್ಯ ಕೃಷ್ಣಮಠದ ಪರ್ಯಾಯ ಪಲಿಮಾರು ಮಠದವರಿಗೆ ಸಂತಸವಾಗಿದೆ. ಉಡುಪಿ ಜಿಲ್ಲಾ ನಾಗರೀಕ ಸಮಿತಿ ಮತ್ತು ಪಂಚರತ್ನ ಸೇವಾ ಟ್ರಸ್ಟ್ ಗೆ ಧನ್ಯವಾದ ಹೇಳಿದ್ದಾರೆ.
ಕರಾವಳಿಯಲ್ಲಿ ಹಿಂಗಾರು ಮಳೆ ಕೈಕೊಟ್ಟಿದ್ದರಿಂದ ಬೇಸಿಗೆಯ ಮಳೆಯೇ ಆಗದಿರುವುದರಿಂದ ನೀರಿಗೆ ಬರ ಬಂದಿದೆ. ಮಳೆಗಾಗಿ ದೇವರ ಮೊರೆ ಹೋದರೂ ದೇವರು ಕೃಪೆ ತೋರುತ್ತಿಲ್ಲ. ಮನುಷ್ಯನಿಂದಾದ ಕಾಡು ನಾಶ- ಕೃಷಿಯ ವಿನಾಶ ಇಷ್ಟೆಲ್ಲಾ ಅವಾಂತರಕ್ಕೆ ಕಾರಣ ಎಂಬೂದು ಎಲ್ಲರಿಗೂ ಗೊತ್ತು. ಈಗಲಾದರೂ ಎಚ್ಚೆತ್ತುಕೊಳ್ಳದಿದ್ದರೆ ಮುಂದೈತೆ ಮಾರಿಹಬ್ಬ ಅನ್ನೋದನ್ನು ಯಾರೂ ಕಡೆಗಣಿಸಬಾರದು.
https://www.youtube.com/watch?v=FUzwjukmN0U
https://www.youtube.com/watch?v=qC22PUUNwCQ
https://www.youtube.com/watch?v=FUzwjukmN0U