ಮಡಿಕೇರಿ: ಮಲೆನಾಡು ಜಿಲ್ಲೆಗಳಲ್ಲಿ ಆನೆಗಳ ಕಾಟ ನಿನ್ನೆ ಮೊನ್ನೆಯದಲ್ಲ. ಅದರಲ್ಲೂ ಇತ್ತೀಚೆಗೆ ಆನೆ ಮತ್ತು ಮಾನವ ಸಂಘರ್ಷ ಮಿತಿಮೀರಿದೆ. ನಿತ್ಯ ಆನೆಗಳು, ರೈತರ ಬೆಳೆಗಳನ್ನು ನಾಶ ಮಾಡುವುದು, ಹಲವು ಸಂದರ್ಭಗಳಲ್ಲಿ ಮಾನವನ ಜೀವ ಹಾನಿಯಾಗಿರುವ ಘಟನೆಗಳು ಸಾಕಷ್ಟಿವೆ. ಇಂತಹ ಘಟನೆಗಳಿಂದ ಪ್ರೇರೇಪಿತನಾದ ಬಾಲಕನೊಬ್ಬ ಆನೆಗಳಿಂದ ತಮ್ಮ ಬೆಳೆಗಳನ್ನು ರಕ್ಷಿಸಿಕೊಳ್ಳುವುದಕ್ಕೆ ಹೊಸ ತಂತ್ರಜ್ಞಾನವನ್ನು ಕಂಡುಹಿಡಿದಿರುವ ಮೂಲಕ ಪಬ್ಲಿಕ್ ಹೀರೋ ಆಗಿದ್ದಾನೆ.
Advertisement
ಹೌದು. ಕೊಡಗು ಜಿಲ್ಲೆ ಸೋಮವಾರ ಪೇಟೆ ತಾಲೂಕಿನ ಸಿದ್ದಲಿಂಗಪುರ ನಿವಾಸಿ ಹರ್ಷಿತ್(15) 9ನೇ ತರಗತಿ ವಿದ್ಯಾರ್ಥಿ. ತಮ್ಮ ಜಮೀನಲ್ಲಿ ಬೆಳೆದಿದ್ದ ಬೆಳೆಯೆಲ್ಲ ಆನೆ ಪಾಲಾಗುತ್ತಿತ್ತು. ಅಪ್ಪನ ಕಷ್ಟ ನೋಡಲಾಗದೆ ಹರ್ಷಿತ್, ಆನೆ ನಿಯಂತ್ರಣಕ್ಕೆ ಹೊಸ ಉಪಕರಣ ಕಂಡುಹಿಡಿದಿದ್ದಾನೆ. ಒಂದು ಖಾಲಿ ಡಬ್ಬದಲ್ಲಿ ಆಡ್ರಿನೋ ಬೋರ್ಡಿಗೆ ಬ್ಲೂಟೂತ್ ಡಿವೈಸ್ ಬಜರ್, ಸೆನ್ಸಾರ್ ಸೇರಿಸಿ ಅದಕ್ಕೆ ಕಂಪ್ಯೂಟರ್ ಪ್ರೋಗ್ರಾಮಿಂಗ್ ಮಾಡಿದ್ದಾನೆ. ಇದಕ್ಕೆ ಲೇಸರ್ ಲೈಟ್ ಅಳವಡಿಸಿದ್ದಾನೆ. ಇವೆರಡರ ಮಧ್ಯೆ ಯಾವುದೇ ಪ್ರಾಣಿ ಚಲಿಸಿದ್ರೆ ಲೇಸರ್ ಲೈಟ್ ಮತ್ತು ಸೆನ್ಸಾರ್‍ನಿಂದ ತಕ್ಷಣ ಬೀಪ್‍ಸೌಂಡ್ ಬರುತ್ತದೆ. ಜೊತೆಗೆ ಪ್ರಾಣಿ ಜಮೀನಿಗೆ ನುಗ್ಗಿರೋದು ರೈತರ ಫೋನ್‍ಗೆ ತಕ್ಷಣವೇ ಸಂದೇಶ ರವಾನಿಸುತ್ತದೆ.
Advertisement
Advertisement
ಇದು ತೀರಾ ಕಡಿಮೆ ವೆಚ್ಚದ್ದಾಗಿದ್ದು, 3-4 ಸಾವಿರ ರೂಪಾಯಿಗಳಲ್ಲಿ ಈ ಉಪಕರಣ ಸಿದ್ಧಗೊಳಿಸಿಕೊಳ್ಳಬಹುದು. ರಾತ್ರಿ ಸಮಯದಲ್ಲೇ ಆನೆಗಳು ತೋಟ, ಹೊಲಗದ್ದೆಗಳಿಗೆ ನುಗ್ಗುವುದರಿಂದ ರೈತರು ರಾತ್ರೀ ಇಡೀ ಜಮೀನುಗಳಲ್ಲಿ ಕುಳಿತುಕೊಳ್ಳಲು ಸಾಧ್ಯವಿಲ್ಲ. ಆದ್ದರಿಂದ ಇದು ರೈತರಿಗೆ ಅತ್ಯಂತ ಉಪಯುಕ್ತವಾಗಲಿದೆ. ಇದನ್ನು ಇನ್ನಷ್ಟು ಅಭಿವೃದ್ಧಿಗೊಳಿಸಲು ಮಗನಿಗೆ ಎಲ್ಲಾ ರೀತಿಯ ಬೆಂಬಲ ನೀಡಲು ತಂದೆ ಕಿರಣ್‍ಕುಮಾರ್ ತೀರ್ಮಾನಿಸಿದ್ದಾರೆ.
Advertisement
ಒಟ್ಟಿನಲ್ಲಿ ವಿದ್ಯಾರ್ಥಿಯ ಈ ಸಂಶೋಧನೆಯನ್ನು ಸಂಬಂಧಪಟ್ಟವರು ಸರಿಯಾಗಿ ಬಳಸಿಕೊಂಡರೆ ರೈತರಿಗೆ ಅನುಕೂಲವಾಗಬಹುದು.