ಮೈಸೂರು: ಒಳ್ಳೆ ಕೆಲಸಕ್ಕೆ ಯಾವುದರ ಅಡ್ಡಿಯಿರಲ್ಲ. ಮೈಸೂರಿನಿಂದ ಬಂದಿರೋ ಇವತ್ತಿನ ಪಬ್ಲಿಕ್ ಹೀರೋ ಸ್ಟೋರಿಯೂ ಹಾಗೆಯೇ. 11 ವರ್ಷದ ಬಾಲಕಿ ಪರಿಸರ ಸಂರಕ್ಷಣೆ ಮಾಡ್ತಿದ್ದು, ಎಳೆ ವಯಸ್ಸಿನಲ್ಲೇ ಆದರ್ಶಪ್ರಾಯವಾಗಿದ್ದಾಳೆ.
ಹೌದು. ಮೈಸೂರಿನ ಜೆಪಿ ನಗರದ ನಿವಾಸಿ ವರ್ಷಿಣಿ ಎಸ್. ಸ್ವಾಮಿ ಸೆಂಟ್ ಥಾಮಸ್ ಸ್ಕೂಲ್‍ನಲ್ಲಿ ಆರನೇ ತರಗತಿ ಓದುತ್ತಿದ್ದಾಳೆ. ಈಕೆಗೆ ಹಕ್ಕಿಗಳ ಮೇಲೆ ಎಲ್ಲಿಲ್ಲದ ಪ್ರೀತಿ. ಹೀಗಾಗಿ ಕ್ಲಾಸ್ ಬಿಟ್ಟ ಕೂಡಲೇ ಮತ್ತು ರಜಾ ದಿನಗಳಲ್ಲಿ ತನ್ನ ಸಮಯವನ್ನ ಹಕ್ಕಿಗಳಿಗೆ ಸಹಾಯ ಮಾಡುವ ಕೆಲಸಕ್ಕೆ ಮೀಸಲಿಟ್ಟಿದ್ದಾಳೆ.
Advertisement
ಮೈಸೂರಿನ ಚಾಮುಂಡಿ ಬೆಟ್ಟ ಸೇರಿದಂತೆ ತನ್ನ ಮನೆಯ ಸುತ್ತಮುತ್ತ ಪ್ಲಾಸ್ಟಿಕ್ ಬಾಟಲ್ ಸಂಗ್ರಹಿಸಿ ಹಕ್ಕಿಗಳಿಗೆ ನೀರು, ಕಾಳುಕಡಿ ಹಾಕಲು ಥರಹೇವಾರಿ ಬುಟ್ಟಿ ಮಾಡ್ತಾಳೆ. ರಸ್ತೆ ಮತ್ತು ತನ್ನ ಶಾಲೆಯಲ್ಲಿನ ಮರಗಳಿಗೆ ಇದುವರೆಗೂ 300ಕ್ಕೂ ಹೆಚ್ಚು ಬುಟ್ಟಿಗಳನ್ನು ಕಟ್ಟಿದ್ದಾಳೆ. ವಾರಕೊಮ್ಮೆ ಇದಕ್ಕೆ ದವಸ ಧಾನ್ಯ ತುಂಬಿಸುತ್ತಾಳೆ. ಅಲ್ಲದೆ ನೀರಿಗಾಗಿಯೇ ಮಾಡಿರುವ ಬುಟ್ಟಿಯಲ್ಲಿ ನೀರು ಹಾಕುತ್ತಾಳೆ.
Advertisement
ಮೂರನೇ ತರಗತಿಯಿಂದಲೂ ಪರಿಸರದ ಬಗ್ಗೆ ಅಪಾರ ಆಸಕ್ತಿ ಬೆಳೆಸಿಕೊಂಡಿರುವ ವರ್ಷಿಣಿ, ಪಕ್ಷಿ ವೀಕ್ಷಣೆ ಜೊತೆಗೆ ಅಧ್ಯಯನ ಮಾಡಿ ಪತ್ರಿಕೆಗಳಿಗೆ ಲೇಖನ ಕೂಡ ಬರೆಯುತ್ತಿದ್ದಾಳೆ. ಪರಿಸರ ಸಂರಕ್ಷಣೆ ಮತ್ತು ಪಕ್ಷಿ ಸಂಕುಲದ ರಕ್ಷಣೆ ಬಗ್ಗೆ ಜಾಗೃತಿ ಕೂಡ ಮೂಡಿಸುತ್ತಿದ್ದಾಳೆ.
Advertisement
ಸ್ಕೂಲ್ ಬಿಟ್ಟರೆ ಸಾಕು ಆಟವಾಡೋಣ, ರಜೆ ಸಿಕ್ಕರೆ ಸಾಕು ಕುಣಿದು ಕುಪ್ಪಳಿಸೋಣ ಅನ್ನೋ ವಯಸ್ಸಿನಲ್ಲಿ ವರ್ಷಿಣಿ ಎಲ್ಲರಿಗೂ ಮಾದರಿಯಾಗಿದ್ದಾಳೆ.