ಕೊಪ್ಪಳ: ಶಾಲೆಯಲ್ಲಿ ಪಾಠ ಮಾಡುವುದರ ಜೊತೆಗೆ ರೈತರಲ್ಲಿ ಆತ್ಮಸ್ಥೈರ್ಯ ತುಂಬುವ ಹಲವಾರು ಗೀತೆಗಳನ್ನ ರಚಿಸಿ ಕೊಪ್ಪಳದ ವ್ಯಕ್ತಿಯೊಬ್ಬರು ಅದಕ್ಕೆ ತಾವೇ ದನಿಯಾಗಿದ್ದಾರೆ.
ಕೆಲ ವರ್ಷ ಶಿಕ್ಷಕನಾಗಿ ಕೆಲಸ ಮಾಡಿ ಬಳಿಕ ಸಮೂಹ ಸಂಪನ್ಮೂಲ ವಿಭಾಗದ ನೌಕರನಾಗಿರುವ ಹನಮಂತಪ್ಪ ಕುರಿ ತನ್ನ ಸ್ವಂತ ಖರ್ಚಿನಲ್ಲಿ ಹಾಡು ತಯಾರಿಸಿ ಜನರಲ್ಲಿ, ಮಕ್ಕಳಲ್ಲಿ ಹಾಗೂ ವ್ಯವಸ್ಥೆಗೆ ತನ್ನದೆ ಹಾಡಿನ ಮೂಲಕ ಜಾಗೃತಿ ಮೂಡಿಸುತ್ತಿದ್ದಾರೆ.
Advertisement
Advertisement
ಮೂಲತಃ ಕೊಪ್ಪಳ ತಾಲೂಕಿನ ಬೋಚನಹಳ್ಳಿ ನಿವಾಸಿಯಾಗಿರುವ ಹನಮಮತಪ್ಪ ಕುರಿ ಅವರು ಜಿಲ್ಲೆಯ ಬಹದ್ದೂರ ಬಂಡಿ ಸಮೂಹ ಸಂಪನ್ಮೂಲ ವ್ಯಕ್ತಿಯಾಗಿ ಕೆಲಸ ಮಾಡುತ್ತಿದ್ದಾರೆ. ಸರ್ಕಾರಿ ನೌಕರಿ ಮಾತ್ರ ಮಾಡದೇ ಹನಮಂತಪ್ಪ ತಮ್ಮ ಹಾಡಿನ ಮೂಲಕ ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಬಿಡುವಿನ ಸಮಯದಲ್ಲಿ ತಾವೇ ಹಾಡು ರಚಿಸಿ ಅದಕ್ಕೆ ಧ್ವನಿಯಾಗಿದ್ದಾರೆ. ಮಕ್ಕಳಿಗಾಗಿ ಜನಗಣತಿ ಗೀತೆಗಳು, ಚುನಾವಣೆ ಜಾಗೃತಿ ಗೀತೆಗಳು, ರೈತರ ಆತ್ಮಹತ್ಯೆಯುನ್ನ ತಡೆಗಟ್ಟುವ ಹಾಡು ಹೀಗೆ ಸುಮಾರು 25 ಕ್ಕೂ ಹೆಚ್ಚು ಗೀತೆಗಳನ್ನು ರಚಿಸಿ ಹಾಡಿದ್ದಾರೆ. ಅದರಲ್ಲೂ ರೈತರ ಬಗ್ಗೆ ಹಾಡು ಬರೆದು ಅದನ್ನ ವಿಡಿಯೋ ಮಾಡಿ ಸಾಮಾಜಿಕ ಜಾಲ ತಾಣದಲ್ಲಿ ಹರಿಬಿಟ್ಟಾಗ ಹನಮಂತಪ್ಪ ಕುರಿ ಅವರ ಕೆಲಸ ಜನರ ಮನಗೆದ್ದಿದೆ.
Advertisement
Advertisement
ಹನಮಂತಪ್ಪ ಸುಮಾರು 12 ವರ್ಷಗಳಿಂದ ಶಿಕ್ಷಣ ಇಲಾಖೆಯಲ್ಲಿ ನೌಕರನಾಗಿ ಕೆಲಸ ಮಾಡುತ್ತಿದ್ದಾರೆ. ತಾಯಿ ಆಸೆಯ ಮೇರೆಗೆ ಹನಮಂತಪ್ಪ ಕುರಿ ಇಲಾಖೆಯ ತನ್ನ ಕರ್ತವ್ಯದ ಜೊತೆ ಜನಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ. ಮಕ್ಕಳ ದಾಖಲಾತಿ ಹೆಚ್ಚಳಕ್ಕೆ ಬರೆದ ಹನಮಂತಪ್ಪರ ಗೀತೆಗಳನ್ನ ರಾಜ್ಯದ ಬೇರೆ ಬೇರೆ ಶಾಲೆಗಳಲ್ಲಿ ಬಳಸಿಕೊಳ್ಳಲಾಗುತ್ತಿದೆ.
ತನಗೆ ಬರುವ ಸಂಬಳದಲ್ಲಿ ಸುಮಾರು 50 ಸಾವಿರ ಹಣವನ್ನು ಖರ್ಚು ಮಾಡಿ ಗೀತೆಗಳನ್ನ ರಚಿಸಿದ್ದಾರೆ. ಶಿಕ್ಷಕರಿಗೆ ಕಲಿಸಿದ ಗುರುವಿಗೆ ಹಾಡಿನ ಮೂಲಕ ಹನಮಂತಪ್ಪ ಕುರಿ ಗುರುನಮನ ಸಲ್ಲಸಿದ್ದಾರೆ. ಇದರ ಜೊತೆಗೆ ನೂತನ ಪಿಂಚಣಿ ಯೋಜನೆಯನ್ನು ರದ್ದು ಮಾಡುವಂತೆ ಆಗ್ರಹಿಸಿ ರಾಜ್ಯದ ಎಲ್ಲಾ ನೌಕರರ ಪರ ಹಾಡು ಬರೆದು ರಾಜ್ಯಾದ್ಯಂತ ಮೆಚ್ಚುಗೆ ಗಳಿಸಿದ್ದಾರೆ.
ಶಿಕ್ಷಕ ಹಾಗೂ ಹಾಡುಗಾರನಾಗಿ ಹನಮಂತಪ್ಪ ಮೋಡಿ ಮಾಡುತ್ತಿದ್ದಾರೆ. ಸ್ವತಃ ಹಾಡು ರಚಿಸಿ ಸಿಂದನೂರಿನ ಸ್ಟುಡಿಯೋ ಒಂದರಲ್ಲಿ ತಾವೇ ಧ್ವನಿ ನೀಡಿ ರೆಕಾರ್ಡ್ ಮಾಡಿದ್ದಾರೆ. ನೌಕರಿಯ ಜೊತೆಗೆ ಇಂತಹ ಸಾಮಾಜಿಕ ಕಳಕಳಿಯಲ್ಲಿ ತೊಡಗಿರೋ ಶಿಕ್ಷಕರನ್ನ ಸರ್ಕಾರ ಗುರುತಿಸಬೇಕು ಅನ್ನೋದು ಹನಮಂತಪ್ಪ ಅವರ ಸಹುದ್ಯೋಗಿಗಳ ಅಭಿಲಾಶೆಯಾಗಿದೆ.
ಶಿಕ್ಷಕರೆಂದರೆ ಮಕ್ಕಳಿಗೆ ಪಾಠ ಮಾಡಿ ಮನೆಗೆ ಹೋಗ್ತಾರೆ ಎನ್ನುವರ ಮಧ್ಯೆ ಹನಮಂತಪ್ಪ ಕುರಿ ಭಿನ್ನವಾಗಿದ್ದಾರೆ. ಕಡು ಬಡತನ ಕುಟಂಬದಲ್ಲಿ ಹುಟ್ಟಿ ತನ್ನ ಸಂಬಳದ ಹಣದಲ್ಲಿ ಜನರ ಜಾಗೃತಿಗಾಗಿ ಮೀಸಲಿಟ್ಟಿದ್ದು ನಿಜಕ್ಕೂ ಶ್ಲಾಘನೀಯ ಕೆಲಸವಾಗಿದೆ.
https://www.youtube.com/watch?v=zZjQiJ8his8
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv