ರಾಯಚೂರು: ಮನೆಯಲ್ಲಿನ ಚಿಕ್ಕಮಕ್ಕಳನ್ನ ಸುಧಾರಿಸುವುದರಲ್ಲೇ ಪೋಷಕರು ಸುಸ್ತಾಗಿ ಹೋಗುತ್ತಾರೆ. ಅಂತಹದರಲ್ಲಿ ಬುದ್ಧಿಮಾಂದ್ಯ ಮಕ್ಕಳಿದ್ದರೆ ಅವರನ್ನ ಸಾಕಲು ಪೋಷಕರು ಕಷ್ಟಪಡೋದು ಸಾಮಾನ್ಯ. ಇಂತಹವರಿಗಾಗಿಯೇ ರಾಯಚೂರಿನ ಶಿಕ್ಷಕರೊಬ್ರು ಬುದ್ಧಿಮಾಂದ್ಯ ಮಕ್ಕಳಿಗಾಗಿಯೇ ಉಚಿತ ಡೇ ಕೇರ್ ಸೆಂಟರ್ ತೆಗೆದಿದ್ದಾರೆ. ಬುದ್ಧಿಮಾಂದ್ಯ ಮಕ್ಕಳು ಯಾರ ಆಶ್ರಯ ಪಡೆಯದೆ ತಮ್ಮ ಕೆಲಸಗಳನ್ನ ತಾವೇ ಮಾಡಿಕೊಳ್ಳುವ ಹಾಗೇ ತರಬೇತಿಯನ್ನ ನೀಡುತ್ತಿದ್ದಾರೆ. ಇವರೇ ನಮ್ಮ ಇಂದಿನ ಪಬ್ಲಿಕ್ ಹೀರೋ.
ರಾಯಚೂರು ಜಿಲ್ಲೆಯ ಸಿಂಧನೂರಿನ ನಿವಾಸಿ ಹಾಲಯ್ಯ ಹಿರೇಮಠ್ ನಮ್ಮ ಪಬ್ಲಿಕ್ ಹೀರೋ. ಖಾಸಗಿ ಶಾಲೆಯಲ್ಲಿ ಮುಖ್ಯ ಶಿಕ್ಷಕರಾಗಿದ್ದ ಹಾಲಯ್ಯ ಹಿರೇಮಠ್ ತಮ್ಮ ಬುದ್ಧಿಮಾಂದ್ಯ ಮಗನನ್ನ ಸಾಕಲು ಕಷ್ಟಪಡುತ್ತಿದ್ದರು. ತನ್ನ ಹಾಗೇ ಸಾಕಷ್ಟು ಜನ ಪೋಷಕರು ಕಷ್ಟಪಡುವುದನ್ನ ನೋಡಿದ್ದರು. ಇಂತಹ ಮಕ್ಕಳು ಯಾರ ಆಶ್ರಯವಿಲ್ಲದೆ ದೈನಂದಿನ ಕೆಲಸಗಳನ್ನ ತಾವೇ ಮಾಡಿಕೊಳ್ಳುವಂತೆ ಮಾಡಬೇಕು ಅಂತ ನಿರ್ಧರಿಸಿ 2012ರಲ್ಲಿ ಕೆಲಸಕ್ಕೆ ರಾಜೀನಾಮೆ ಕೊಟ್ಟು, ಮಾತೃ ಆಸರೆ ಶಿಕ್ಷಣ ಸಮಾಜ ಸೇವಾ ಪ್ರತಿಷ್ಠಾನದ ಅಡಿಯಲ್ಲಿ ಬುದ್ಧಿಮಾಂದ್ಯ ಮಕ್ಕಳ ಡೇ ಕೇರ್ ಸ್ಥಾಪಿಸಿದರು.
2012 ರಲ್ಲಿ ಬಾಡಿಗೆ ಮನೆಯಲ್ಲಿ 8 ಮಕ್ಕಳೊಂದಿಗೆ ಆರಂಭವಾದ ಶಾಲೆಯಲ್ಲಿ ಈಗ 53 ವಿಕಲ ಚೇತನ ಮಕ್ಕಳಿವೆ. ಮಕ್ಕಳಿಗೆ ಉಚಿತವಾಗಿ ಫಿಸಿಯೋಥೆರಪಿ, ಮಾನಸಿಕ ವೈದ್ಯರಿಂದ ಚಿಕಿತ್ಸೆ, ಯೋಗ, ಸಂಗೀತ, ನಿತ್ಯ ಮಸಾಜ್ ಸೌಲಭ್ಯ ಕಲ್ಪಿಸಿದ್ದಾರೆ. ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ ಶಾಲೆ ನಡೆಸುತ್ತಾರೆ. ಬಸ್ ವ್ಯವಸ್ಥೆ ಮಾಡಿದ್ದು, ಇದಕ್ಕೆ ಮಾತ್ರ ಪ್ರತಿ ವಿದ್ಯಾರ್ಥಿಯಿಂದ ತಿಂಗಳಿಗೆ 500 ರೂಪಾಯಿ ಪಡೆಯುತ್ತಾರೆ.
ಮೊದಲ ಮೂರು ವರ್ಷ ಸಂಪೂರ್ಣವಾಗಿ ಕೈಯಿಂದಲೇ ಖರ್ಚುಮಾಡಿ ಹಾಲಯ್ಯ ಈ ಶಾಲೆ ನಡೆಸಿದ್ದರು. ಇದೀಗ ಹಾಲಯ್ಯರ ಕೆಲಸಕ್ಕೆ ದಾನಿಗಳ ನೆರವು ಸಿಕ್ಕಿದೆ. ನಗರಸಭೆ ಅನುದಾನದಲ್ಲಿ ಸ್ವಂತ ಶಾಲೆ ತಲೆ ಎತ್ತಿದೆ. ಆರು ಸಿಬ್ಬಂದಿ ಕೆಲಸ ಮಾಡುತ್ತಿದ್ದಾರೆ.
ಬುದ್ಧಿಮಾಂದ್ಯ ಮಕ್ಕಳು ಹುಟ್ಟಲು ಕಾರಣವೇನು..? ಅವರನ್ನ ಹೇಗೆ ನೋಡಿಕೊಳ್ಳಬೇಕು ಎನ್ನುವ ಬಗ್ಗೆ ಪ್ರತಿ ಶನಿವಾರ ಕಾಲೇಜು ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸ್ತಾರೆ. ಈ ಮೂಲಕ ಹಾಲಯ್ಯ ಹಿರೇಮಠ್ ನಿಸ್ವಾರ್ಥದಿಂದ ಬುದ್ಧಿಮಾಂದ್ಯ ಮಕ್ಕಳಿಗಾಗಿ ದುಡಿಯುತ್ತಿದ್ದಾರೆ.