ಬೆಳಗಾವಿ: ಎಂಇಎಸ್‍ನವರ ಪುಂಡಾಟದಿಂದ ಕರ್ನಾಟಕ ಮತ್ತು ಮಹಾರಾಷ್ಟ್ರ ಗಡಿಯಲ್ಲಿ ಕನ್ನಡ ಶಾಲೆಗಳನ್ನ ಹುಡುಕಾಡುವ ಪರಿಸ್ಥಿತಿ ನಿರ್ಮಾಣವಾಗಿದೆ. ಆದರೆ ಮರಾಠಿಗರ ಅಧಿಪತ್ಯದಲ್ಲಿ ಕನ್ನಡದ ಕಹಳೆಯನ್ನು ಮೊಳಗಿಸಲು, ಮಕ್ಕಳಿಗೆ ಕನ್ನಡ ಕಲಿಸಲು ಶಿಕ್ಷಕಿಯರು ಪಣತೊಟ್ಟು ನಿಂತಿದ್ದು, ಇವತ್ತಿನ ನಮ್ಮ ಪಬ್ಲಿಕ್ ಹೀರೋ ಆಗಿದ್ದಾರೆ.
ಕನ್ನಡ ಶಾಲೆಗೆ ಬರೋದಕ್ಕೆ ಹಿಂದೇಟು ಹಾಕುವ ಮಕ್ಕಳನ್ನು ಸ್ವಂತ ಖರ್ಚಿನಲ್ಲಿ ಆಟೋ ಮಾಡಿ ಕರೆದುಕೊಂಡು ಹೋಗುತ್ತಾರೆ. ವಾಪಸ್ ಮನೆಗೆ ಕರೆದುಕೊಂಡು ಬಂದು ಬಿಡುತ್ತಾರೆ. ಕನ್ನಡ ಶಾಲೆಯನ್ನು ಉಳಿಸಿ ಬೆಳೆಸುತ್ತಿದ್ದಾರೆ ನಮ್ಮ ಪಬ್ಲಿಕ್ ಹೀರೋ ಶಿಕ್ಷಕಿಯರು.
Advertisement
Advertisement
ಚಿಕ್ಕೋಡಿ ತಾಲೂಕಿನ ನಿಪ್ಪಾಣಿ ನಗರ ಸಂಪೂರ್ಣ ಮರಾಠಿಗರ ಹಿಡಿತದಲ್ಲಿದೆ. ಈ ಹಿಂದೆ ಇದೇ ನಗರದಲ್ಲಿದ್ದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಮತ್ತು ಕಿರಿಯ ಪ್ರಾಥಮಿಕ ಶಾಲೆಗಳನ್ನು ಮಕ್ಕಳಿಲ್ಲ ಎಂಬ ಕಾರಣಕ್ಕಾಗಿ ಸರ್ಕಾರ ಮುಚ್ಚಿತ್ತು. ಆದರೆ ಕೇವಲ 61 ದಾಖಲಾತಿ ಇರುವ ನಿಪ್ಪಾಣಿ ನಗರದ ಪ್ರಾಥಮಿಕ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ವಿಶೇಷ ಆಟೋ ಸೇವೆ ಒದಗಿಸಿ ಕನ್ನಡ ಶಾಲೆಗಳಿಗೆ ಮಕ್ಕಳನ್ನು ಕರೆತರುವ ಕೆಲಸವನ್ನು ಹೆಚ್.ಜಿ ಸೊಲ್ಲಾಪುರೆ ಅನ್ನೋ ಮಹಿಳಾ ಪ್ರಾಧ್ಯಾಪಕಿ ಮತ್ತು ಅವರ ತಂಡದವರು ಮಾಡುತ್ತಿದ್ದಾರೆ.
Advertisement
ನಾವು ಸ್ವಂತ ಖರ್ಚಿನಲ್ಲಿ ಮಕ್ಕಳನ್ನು ಕನ್ನಡ ಶಾಲೆಗೆ ಕರೆತರುವ ಕೆಲಸ ಮಾಡುತ್ತಿದ್ದೇವೆ. ನಮ್ಮ ತಂಡದ ನಾಲ್ವರು ಶಿಕ್ಷಕಿಯರು ಸೇರಿ ಪ್ರತಿ ತಿಂಗಳು ತಲಾ ಒಂದು ಸಾವಿರ ರೂಪಾಯಿಯಂತೆ ಹಣ ಹಾಕಿ ಮಕ್ಕಳನ್ನು ಶಾಲೆಗೆ ಕರೆದುಕೊಂಡು ಹೋಗುತ್ತೇವೆ. ಮತ್ತೆ ಮನೆಗೆ ವಾಪಸ್ ಕರೆದುಕೊಂಡು ಬಂದು ಬಿಡುತ್ತೇವೆ. ಇದರಿಂದ ಮಕ್ಕಳು ಒಳ್ಳೆಯ ಕನ್ನಡ ವಿದ್ಯಾಭ್ಯಾಸ ಪಡೆಯಬೇಕೆಂದು ಮಾಡುತ್ತಿದ್ದೇವೆ ಎಂದು ಕನ್ನಡ ಶಾಲೆಯ ಪ್ರಾಧ್ಯಾಪಕಿ ಹೆಚ್.ಜಿ ಸೋಲಾಪುರೆ ಹೇಳಿದ್ರು.
Advertisement
ಕನ್ನಡ ಶಾಲೆಗಳ ಉದ್ಧಾರಕ್ಕಾಗಿ ಮಕ್ಕಳ ದಾಖಲಾತಿ ಸಂಖ್ಯೆಯನ್ನು ಹೆಚ್ಚಿಸೋದಕ್ಕೆ ಸರ್ಕಾರ ಬಿಸಿಯೂಟ, ಸಮವಸ್ತ್ರ ಕೊಡುವಂಥಾ ಹಲವು ಯೋಜನೆಗಳನ್ನು ಜಾರಿಗೆ ತಂದಿದೆ. ಆದರೆ ಸರ್ಕಾರ ಇಷ್ಟೆಲ್ಲಾ ಮಾಡಿದರೂ ಎಂಇಎಸ್‍ನವರ ಆರ್ಭಟಕ್ಕೆ ನಲುಗಿ ಕನ್ನಡ ಶಾಲೆಗಳಿಗೆ ಮಕ್ಕಳು ಬರೋದನ್ನೇ ಬಿಟ್ಟಿದ್ದರು. ಇದನ್ನು ತಿಳಿದ ಶಿಕ್ಷಕಿಯರು ಸ್ವಂತ ಖರ್ಚಿನಲ್ಲಿ ಆಟೋ ಸೇವೆ ಒದಗಿಸ್ತಿದ್ದಾರೆ. ಇದಕ್ಕೆ ಸ್ಥಳೀಯ ಕನ್ನಡಪರ ಹೋರಾಟಗಾರರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಕನ್ನಡ ಶಾಲೆಯ ಉಳಿವಿಗಾಗಿ ಮಹಿಳಾ ಶಿಕ್ಷಕಿಯರು ಮಾಡುತ್ತಿರುವ ಈ ಕೆಲಸ ನಿಜಕ್ಕೂ ಶ್ಲಾಘನೀಯ.