ಚಿತ್ರದುರ್ಗ: ಗ್ರಾಮಪಂಚಾಯ್ತಿ ಅಧ್ಯಕ್ಷರಾಗಿದ್ದರು ಕೂಡ ಸ್ವಲ್ಪವೂ ಮುಜುಗರವಿಲ್ಲದೇ, ವಿದ್ಯುತ್ ಕಂಬ ಹತ್ತಿ ವಿದ್ಯುತ್ ಸರಿ ಮಾಡ್ತಾ, ಪಂಚಾಯ್ತಿ ವ್ಯಾಪ್ತಿಗೆ ಬರೋ ಎಲ್ಲಾ ಸಮಸ್ಯೆಗಳನ್ನ ಶೀಘ್ರವೇ ಸ್ವ-ಇಚ್ಛೆಯಿಂದ ಪರಿಹರಿಸುತ್ತಿರೋ ಸ್ವಯಂ ಸೇವಕ ಸುರೇಶ್ ಪಬ್ಲಿಕ್ ಹೀರೋ ಆಗಿದ್ದಾರೆ.
Advertisement
ಹೌದು, ಚಿತ್ರದುರ್ಗ ಜಿಲ್ಲೆಯ ಚಳ್ಳಕೆರೆ ತಾಲೂಕು ದೊಡ್ಡಚೆಲ್ಲೂರು ಗ್ರಾಮ ಪಂಚಾಯ್ತಿ ಅಧ್ಯಕ್ಷ ಸುರೇಶ್ ಎಲ್ಲರಂತಲ್ಲ. ಜನ ಸೇವೆಯೇ ಜನಾರ್ದನ ಸೇವೆ ಅಂದುಕೊಂಡು ಜನರಿಗಾಗಿ ಕೆಲಸ ಮಾಡ್ತಾರೆ. ಬರದ ನಾಡಲ್ಲಿ ಮಳೆ, ಬೆಳೆ ಇಲ್ಲದ ಹಿನ್ನೆಲೆಯಲ್ಲಿ ರೈತರಿಂದ ಕಂದಾಯ ವಸೂಲಿಯಾಗೋದೆ ಕಷ್ಟಕರ. ಹೀಗಾಗಿ ಗ್ರಾಮ ಪಂಚಾಯ್ತಿಯಲ್ಲಿ ಸಂಬಳ ನೀಡಲ್ಲ ಅಂತ ಭಾವಿಸಿರೋ ಡಿ. ದರ್ಜೆಯ ನೌಕರರು ಕೆಲಸಕ್ಕೆ ಬರಲ್ಲ. ಅಲ್ಲದೆ ಗ್ರಾಮದಲ್ಲಿ ವಿದ್ಯುತ್ ಸಮಸ್ಯೆ ಆದಾಗ ಪಂಚಾಯ್ತಿ ಕಛೇರಿಯಲ್ಲಿ ಗುತ್ತಿಗೆ ಆಧಾರದ ಮೇಲೆ ನೇಮಿಸಿಕೊಂಡ ಎಲೆಕ್ಟ್ರೀಷಿಯನ್ ಹಾಗು ಬೆಸ್ಕಾಂ ನೌಕರರು ಬರುವಷ್ಟರಲ್ಲಿ ಕಾಲ ಮಿಂಚಿ ಹೋಗುತ್ತದೆ.
Advertisement
Advertisement
ಹೀಗಾಗಿ ವಿದ್ಯಾರ್ಥಿಗಳು ಕತ್ತಲಲ್ಲಿ ಓದಿಕೊಳ್ಳಲು, ವಯೋವೃದ್ಧರಿಗೆ ಓಡಾಡಲು ಕಷ್ಟಕರವಾಗುತ್ತದೆ ಅಂತ ಗ್ರಾಮಸ್ಥರ ಸಂಕಷ್ಟ ಅರಿತ ಗ್ರಾಮಪಂಚಾಯ್ತಿ ಅಧ್ಯಕ್ಷ ಸುರೇಶ್ ತಮ್ಮ ಸ್ವಪ್ರತಿಷ್ಠೆ ಸಂಕೋಚ ಎಲ್ಲವನ್ನು ಬದಿಗೊತ್ತಿ ಗ್ರಾಮಗಳಲ್ಲಿ ಯಾವುದೇ ವಿದ್ಯುತ್ ಸಮಸ್ಯೆ ಆದಾಗ ಅವರೇ ಸ್ವಯಂ ಕಂಬ ಹತ್ತಿ ವಿದ್ಯುತ್ ರಿಪೇರಿ ಮಾಡಿ ಹಳ್ಳಿಯನ್ನು ಬೆಳಗುತ್ತಿದ್ದಾರೆ. ಒಂದು ವೇಳೆ ಬಲ್ಬು ಅಥವಾ ಸಣ್ಣಪುಟ್ಟ ಸಮಸ್ಯೆ ಇದ್ರೆ ತಮ್ಮ ಸ್ವಂತ ಜೇಬಿನಿಂದಲೇ ಹಣ ತೆಗೆದು ಖರ್ಚುಮಾಡಿ ಸಮಸ್ಯೆ ಪರಿಹರಿಸೋ ಸುರೇಶ್, ಅಭಿವೃದ್ಧಿ ಮಾಡಬೇಕೆನ್ನುವ ಜನಪ್ರತಿನಿಧಿಗಳಿಗೆ ಮಾದರಿ ಗ್ರಾಮಪಂಚಾಯ್ತಿ ಅಧ್ಯಕ್ಷ ಎನಿಸಿದ್ದಾರೆ.
Advertisement
ಒಂದು ಕಾಲದಲ್ಲಿ ಎಲೆಕ್ಟ್ರಿಷಿಯನ್ ಆಗಿದ್ದ ಸುರೇಶ್ ಅವರು ಆ ಕಾಯಕವನ್ನ ಈಗ ಸದುಪಯೋಗಪಡಿಸಿಕೊಂಡು ಸಮಾಜಸೇವೆ ಮಾಡುತ್ತಿದ್ದಾರೆ. ಮೂರು ವರ್ಷಗಳಿಂದಲೂ ಗ್ರಾಮಪಂಚಾಯ್ತಿ ಅಧ್ಯಕ್ಷರಾಗಿ, ಪ್ರಭಾವಿ ಜನಪ್ರತಿನಿಧಿ ಎನಿಸಿದ್ದರೂ ಸಹ ಸಾಮಾನ್ಯ ವ್ಯಕ್ತಿಯಂತೆ ಜನಸೇವೆ ಮಾಡುತ್ತಾ ಜನ ನಾಯಕರೆನಿಸಿದ್ದಾರೆ. ಅಭಿವೃದ್ಧಿಯ ಮಂತ್ರ ಜಪಿಸೋ ದೊಡ್ಡಚೆಲ್ಲೂರಿನ ಗ್ರಾಮಪಂಚಾಯ್ತಿ ಸದಸ್ಯರು ಕೂಡ ಸುರೇಶ್ ಅವರ ಸೇವೆಗೆ ಸಾಥ್ ನೀಡುತ್ತಿದ್ದಾರೆ. ಅಲ್ಲದೆ ಸರ್ಕಾರದಿಂದ ಬರೋ ಅಲ್ಪ ಅನುದಾನದಲ್ಲೇ ಗ್ರಾಮಪಂಚಾಯ್ತಿ ವ್ಯಾಪ್ತಿಯ ಎಲ್ಲಾ ಹಳ್ಳಿಗಳಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿ, ಅಂಗವಿಕಲರ ಕಲ್ಯಾಣ ಮಾಡ್ತಿದ್ದಾರೆ.
ಅದೇನೇಯಾದರೂ ಗ್ರಾಮ ಪಂಚಾಯ್ತಿ ಅಧ್ಯಕ್ಷರಾದ ಕ್ಷಣ ಬಿಳಿ ಬಟ್ಟೆ ಹಾಕ್ಕೊಂಡು, ಅಧಿಕಾರಿಗಳಿಗೆ ಕೇವಲ ತರಾಟೆ ತಗೋಳದ್ರಲ್ಲೇ ಕಾಲಾಹರಣ ಮಾಡುವ ಜನಪ್ರತಿನಿಧಿಗಳ ನಡುವೇ ದೊಡ್ಡಚೆಲ್ಲೂರಿನ ಗ್ರಾಮ ಪಂಚಾಯತ್ ಅಧ್ಯಕ್ಷ ಸುರೇಶ್ ಅಪರೂಪದ ವ್ಯಕ್ತಿ ಎನಿಸಿಕೊಂಡಿದ್ದಾರೆ. ಇವರ ಕಾರ್ಯವನ್ನು ಇತರೆ ಗ್ರಾಮಪಂಚಾಯ್ತಿಗಳ ಅಧ್ಯಕ್ಷರು ಸಹ ಮೈಗೂಡಿಸಿಕೊಂಡು ಸೇವೆ ಮಾಡಿದರೆ ಹಳ್ಳಿಗಳು ಅಭಿವೃದ್ಧಿ ಪಥದತ್ತ ಸಾಗುವುದರಲ್ಲಿ ಯಾವುದೇ ಅನುಮಾನವಿಲ್ಲ ಅನ್ನೋದು ಹಿರಿಯರ ಅಭಿಪ್ರಾಯವಾಗಿದೆ.
https://www.youtube.com/watch?v=fMDBY3xCMV4
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv