ಬಾಗಲಕೋಟೆ: ಇವತ್ತಿನ ದಿನಗಳಲ್ಲಿ ಬೀದಿ ಹಸು ಹಾಗೂ ನಾಯಿಗಳ ಕಾಟ ಜಾಸ್ತಿ ಆಯ್ತು ಅಂತಿದ್ದ ಹಾಗೆ ನಗರಸಭೆಯವರು ಅವುಗಳನ್ನ ಎತ್ತಾಕ್ಕೊಂಡು ಹೋಗಿ ಬಿಡುತ್ತಾರೆ. ಆದರೆ ಬಾಗಲಕೋಟೆಯಲ್ಲೊಬ್ಬ ವ್ಯಕ್ತಿ ಯಾರಿಗೂ ಬೇಡವಾದ ಬೀದಿ ಹಸು ಹಾಗೂ ನಾಯಿಗಳಿಗೆ ಬ್ರೆಡ್ಡು, ಹಾಲು, ರೋಟಿಗಳನ್ನ ಹಾಕಿ ಸಾಕಿ ಸಲುಹುತ್ತಿದ್ದಾರೆ. ಅಲ್ಲದೆ ಸಹಾಯ ಕೇಳಿ ಬಂದವರಿಗೆ ತಮ್ಮ ಕೈಲಾದಷ್ಟು ಸಹಾಯ ಮಾಡುವ ಸಾಮಾಜಿಕ ಕಳಕಳಿ ಇರುವ ವ್ಯಕ್ತಿಯಾಗಿದ್ದಾರೆ.
Advertisement
ಬಾಗಲ ಕೋಟೆಯ ನವನಗರ ನಿವಾಸಿ ಘನಶ್ಯಾಮ ಬಾಂಢಗೆ ಅವರು ನೋಡಲು ಮಾತ್ರ ವಿಕಲಚೇತನ ವ್ಯಕ್ತಿ. ಆದರೆ ಸದಾ ಚಲನಶೀಲ ವ್ಯಕ್ತಿತ್ವ. ಅಪ್ಪಟ ದೇಶಭಕ್ತ. ಪ್ರಾಣಿಪ್ರಿಯ ಕೂಡ. ಪ್ರತಿದಿನ ಹಸು ಹಾಗೂ ಬೀದಿನಾಯಿಗಳಿಗೆ ಪ್ರೀತಿಯಿಂದ ಬ್ರೆಡ್ಡು, ಹಾಲು, ರೊಟ್ಟಿ ಕೊಡುತ್ತಾರೆ. ಎಲ್ಲೇ ಹೋಗುತ್ತಿದ್ದರೂ ಪ್ರಾಣಿಗಳನ್ನು ಕಂಡ ಕೂಡಲೇ ವಾಹನ ನಿಲ್ಲಿಸಿ, ತಮ್ಮ ಬಳಿ ಇದ್ದುದನ್ನು ತಿನ್ನಿಸಿ ಮುಂದೆ ಸಾಗುತ್ತಾರೆ. ಹೀಗಾಗಿಯೇ ಘನಶ್ಯಾಮ ಬಾಂಢಗೆ ಇದ್ದಾರೆಂದರೆ ಅವರ ಸುತ್ತ ಪ್ರಾಣಿಗಳ ಹಿಂಡೇ ಇರುತ್ತದೆ.
Advertisement
Advertisement
ಅಷ್ಟೇ ಅಲ್ಲ, ಯಾವುದೇ ಬೀದಿನಾಯಿ ಅಥವಾ ಹಸುವಿಗೆ ಹುಷಾರಿಲ್ಲದಿದ್ದರೆ ತಕ್ಷಣ ವೈದ್ಯರನ್ನ ಕರೆಸಿ ಚಿಕಿತ್ಸೆ ಕೊಡಿಸುತ್ತಾರೆ. ಅವುಗಳ ಆರೈಕೆಯಲ್ಲೇ ತಮ್ಮ ನೋವು ಮರೆಯುತ್ತಾರೆ. ಅಂಬೇಡ್ಕರ್ ಕುರಿತಾದ “ಇಂಗಳೆ ಮಾರ್ಗ” ಅನ್ನೋ ಸಿನಿಮಾ ನಿರ್ಮಿಸಿ, ಉತ್ತರ ಕರ್ನಾಟಕದ ಕಲಾವಿದರಿಗೆ ಅಭಿನಯಿಸಲು ಅವಕಾಶ ನೀಡಿದ್ದರು. ಸಾಮಾಜಿಕ ಕಾರ್ಯಗಳ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾಗಿದ್ದಾರೆ ಎಂದು ಸ್ಥಳೀಯರಾದ ಶ್ರೀನಿವಾಸ್ ಗಡಾದ್ ತಿಳಿಸಿದ್ದಾರೆ.
Advertisement
ಒಟ್ಟಿನಲ್ಲಿ ಎರಡು ಕಾಲುಗಳಲ್ಲಿ ಸ್ವಾಧೀನ ಇಲ್ಲದಿದ್ದರೂ ಕುಗ್ಗದೆ ಜಗ್ಗದೇ, ಸಾಮಾಜಿಕ ಸೇವೆ ಬಾಳ ಬಂಡಿ ಎಳೆಯುತ್ತಿರುವ ಘನಶ್ಯಾಮ ಬಾಂಡಗೆ ಎಲ್ಲರಿಗೂ ಮಾದರಿಯಾಗಿದ್ದಾರೆ.