ಧಾರವಾಡ: ಜಿಲ್ಲೆಯಲ್ಲೊಬ್ಬರು ಅಪ್ಪಟ ಪರಿಸರಪ್ರೇಮಿ ಇದ್ದಾರೆ. ಮಕ್ಕಳಿಲ್ಲದ ಇವರಿಗೆ ಗಿಡ, ಮರ, ಔಷಧಿ ಸಸ್ಯಗಳೇ ಮಕ್ಕಳು. ಪರಿಸರದ ಮೇಲಿನ ಇವರ ಅತಿಯಾದ ಪ್ರೀತಿ ಸರ್ಕಾರಿ ಕೆಲಸಕ್ಕೆ ಗುಡ್ ಬೈ ಹೇಳುವಂತೆ ಮಾಡಿದೆ. ಇವರು ಮಾಡಿದ ಕೆಲಸವೊಂದು ಗಿನ್ನೀಸ್ ದಾಖಲೆ ಪುಟ ಸೇರಿದೆ. ಔಷಧಿ ಸಸ್ಯಗಳನ್ನು ತಮ್ಮ ಮಕ್ಕಳಿಗಿಂತ ಹೆಚ್ಚಾಗಿ ಪೋಷಣೆ ಮಾಡ್ತಿರೋ ಇವರೇ ನಮ್ಮ ಪಬ್ಲಿಕ್ ಹೀರೋ.
ಧಾರವಾಡದ ಸಾಧನಕೇರಿ ಬಳಿಯಿರುವ ಜಮುಖಂಡಿ ಫ್ಲಾಟ್‍ನ ನಿವಾಸಿ ಪಂಡಿತ ಮುಂಜಿ, ಕರ್ನಾಟಕ ಕೃಷಿ ನಿಗಮದಲ್ಲಿ ನೌಕರಿಯಲ್ಲಿದ್ದರು. ಇವರಿಗೆ ಇನ್ನೂ 10 ವರ್ಷ ಸರ್ವೀಸ್ ಇತ್ತು. ಆದರೆ ಇಷ್ಟರಲ್ಲೇ ಏನಾದ್ರೂ ಸಾಧಿಸಬೇಕೆಂಬ ಛಲ ಹುಟ್ಟಿಕೊಳ್ತು. ಈ ಕಾರಣದಿಂದ ಸ್ವಯಂ ನಿವೃತ್ತಿಯನ್ನೇ ಪಡೆದು ಪಾಪಸ್‍ಕಳ್ಳಿ, ಅಗ್ನಿಮಂಥನ, ಆಡು ಮುಟ್ಟದ ಬಳ್ಳಿ, ಗುಲಗಂಜಿ, ಮಧುನಾಶಿನಿ, ಇನ್ಸುಲಿನ್ ಸೇರಿದಂತೆ ಹಲವು ಬಗೆಯ ಔಷಧಿಯ ಸಸ್ಯಗಳನ್ನು ಬೆಳೆಸುವ ಕಾರ್ಯಕ್ಕೆ ಕೈ ಹಾಕಿದ್ರು. ಇದನ್ನೇ ವೃತ್ತಿ ಮಾಡಿಕೊಂಡು ತಳಿ ಕೂಡಾ ಅಭಿವೃದ್ದಿ ಮಾಡ್ತಿದ್ದಾರೆ.
Advertisement
1990ರಲ್ಲಿ ಪಂಡಿತ ಮುಂಜಿ 4 ಅಡಿ ಉದ್ದದ ಪಾಪಸ್ ಕಳ್ಳಿ ತಂದು ನೆಟ್ಟರು. ಅದು ಇಂದು 72 ಅಡಿ ಎತ್ತರಕ್ಕೆ ಬೆಳೆದು ಗಿನ್ನೀಸ್ ದಾಖಲೆ ಮಾಡಿದೆ. ಶಾಲಾ ಮಕ್ಕಳಿಗೆ, ದೊಡ್ಡವರಿಗೆ ಔಷಧೀಯ ಸಸ್ಯಗಳನ್ನು ಬೆಳೆಸುವ ಬಗ್ಗೆ ಮಾಹಿತಿ ನೀಡ್ತಿದ್ದಾರೆ. ಯಾರಾದ್ರೂ ಔಷಧೀಯ ಸಸ್ಯಗಳನ್ನ ಕೇಳಿದ್ರೆ ಅವರಿಗೆ ಉಚಿತವಾಗಿ ನೀಡ್ತಾರೆ.
Advertisement
ಇವರು ತಮ್ಮ ಫ್ಲಾಟ್ ಮುಂದೆ ಹಾಳು ಬಿದ್ದ ಪಾಲಿಕೆ ಜಾಗದಲ್ಲಿ ಗಾರ್ಡನ್ ನಿರ್ಮಾಣ ಮಾಡಿದ್ದಾರೆ. ಪ್ರತಿ ಭಾನುವಾರ ಈ ಬಡಾವಣೆ ಜನರನ್ನೆಲ್ಲಾ ಸೇರಿಸಿಕೊಂಡು ಇಲ್ಲಿ ಸ್ವಚ್ಛ ಮಾಡ್ತಾರೆ. ಗಾರ್ಡನ್‍ನಲ್ಲಿ ಹಕ್ಕಿ ಪಕ್ಷಿಗಳಿಗೆ ಕೃತಕ ಗೂಡುಗಳನ್ನೂ ನಿರ್ಮಾಣ ಮಾಡಿದ್ದಾರೆ. ಈ ಸುಂದರ ಪರಿಸರದಲ್ಲಿ ಮಕ್ಕಳು ಆಟವಾಡ್ತಾರೆ, ಹಿರಿಯರು ವಾಕ್ ಮಾಡಿ ಖುಷಿ ಪಡ್ತಾರೆ.
Advertisement
ಒಟ್ಟಿನಲ್ಲಿ ತಮಗೆ ಮಕ್ಕಳಿಲ್ಲ ಎಂಬ ಕೊರಗನ್ನು ಪಂಡಿತ ಸಾಹೇಬರು, ಈ ಔಷಧೀಯ ಸಸ್ಯಗಳನ್ನು ಬೆಳೆಸುವ ಮೂಲಕ ಮರೆಯುತ್ತಾರೆ.