– ಕೈ ತುಂಬಾ ಸಿಗ್ತಿದ್ದ ಸಂಬಳಕ್ಕೆ ಗುಡ್ ಬೈ
ಬೆಂಗಳೂರು: ಕೈ ತುಂಬ ಸಂಬಳ ಸಿಗುತ್ತಿದ್ದ ಉದ್ಯೋಗವನ್ನು ತೊರೆದು ಬಡ ರೋಗಿಗಳ ಪಾಲಿಗೆ ಮೊಬೈಲ್ ಡಾಕ್ಟರ್ ಆಗಿರುವ ಡಾ.ಸುನಿಲ್ ಕುಮಾರ್ ಹೆಬ್ಬಿ ಇವತ್ತಿನ ನಮ್ಮ ಪಬ್ಲಿಕ್ ಹೀರೋ.
ಬೆಂಗಳೂರು ಹೊರವಲಯ ಸರ್ಜಾಪುರದ ನಿವಾಸಿಯಾಗಿರುವ ಡಾ.ಸುನಿಲ್ ಕುಮಾರ್ ಮೂಲತ: ವಿಜಯಪುರ ಜಿಲ್ಲೆಯ ಹೆಬ್ಬಿ ಗ್ರಾಮದವರು. ಬಿಜಿಎಸ್ ಆಸ್ಪತ್ರೆಯಲ್ಲಿ ಕೈತುಂಬಾ ಬರೋ ಸಂಬಳ ಬಿಟ್ಟು ಬಡ ರೋಗಿಗಳನ್ನು ಹುಡುಕಿಕೊಂಡು ಹೋಗಿ ಉಚಿತವಾಗಿ ಚಿಕಿತ್ಸೆ ಕೊಡುತ್ತಿದ್ದಾರೆ. ಕಳೆದ 8 ವರ್ಷಗಳಿಂದ ಮೊಬೈಲ್ ಡಾಕ್ಟರ್ ಎಂದೇ ಫೇಮಸ್ ಆಗಿದ್ದಾರೆ.
Advertisement
Advertisement
ಡಾ ಸುನಿಲ್ ಮೊಬೈಲ್ ಡಾಕ್ಟರ್ ಆಗಲು ಕಾರಣವಿದೆ. ಒಂದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯಲು ದುಡ್ಡಿಲ್ಲದೇ ಕಣ್ಣೀರಿಡುತ್ತಿದ್ದ ಮಹಿಳೆ ಕಂಡು ಸುನಿಲ್ ಮರುಗಿದ್ದರು. ಮತ್ತೊಂದು ದಿನ ಅಪಘಾತದಲ್ಲಿ ಗಾಯಗೊಂಡು ನರಳ್ತಿದ್ದ ಯುವಕನನ್ನ ಅದೇ ದಾರಿಯಲ್ಲಿ ಹೋಗುತ್ತಿದ್ದ ಸುನಿಲ್ ರಕ್ಷಿಸಿದ್ದರು. ಪ್ರಾಥಮಿಕ ಚಿಕಿತ್ಸೆ ನೀಡಿ ಪ್ರಾಣ ಉಳಿಸಿದ್ದರು. ಅದೇ ದಿನ ಮೊಬೈಲ್ ಡಾಕ್ಟರ್ ಆಗಲು ತೀರ್ಮಾನಿಸಿ, ಕೆಲಸಕ್ಕೆ ರಾಜೀನಾಮೆ ಕೊಟ್ಟು ವೈದ್ಯ ಸೇವೆಯನ್ನು ಬಡವರಿಗೆ ಮೀಸಲಿಟ್ಟರು.
Advertisement
Advertisement
ಮಾತೃಸಿರಿ ಫೌಂಡೇಶನ್ ಎಂಬ ಎನ್‍ಜಿಓ ಹುಟ್ಟು ಹಾಕಿ, ಸ್ನೇಹಿತರ ನೆರವು ಪಡೆದು ತಮ್ಮ ಕಾರನ್ನ ಸುಸಜ್ಜಿತ ಕ್ಲಿನಿಕ್ ತರಹ ಮಾರ್ಪಾಡು ಮಾಡಿದ್ದಾರೆ. ಸಾವಿರಾರು ಜನರಿಗೆ ಉಚಿತ ಆರೋಗ್ಯ ಸೇವೆಯನ್ನ ನೀಡ್ತಿದ್ದಾರೆ. ಗೆಳೆಯ ವೈದ್ಯರ ನೆರವಿನಿಂದ 700ಕ್ಕೂ ಹೆಚ್ಚು ಅಧಿಕ ಮೆಡಿಕಲ್ ಕ್ಯಾಂಪ್ ಮಾಡಿದ್ದಾರೆ. ಹುಟ್ಟೂರಲ್ಲಿ ಪೋಷಕರು ಕೃಷಿ ಮಾಡ್ತಿದ್ದು, ಅಲ್ಲಿ ಬರೋ ಆದಾಯ, ತಾವು ನಡೆಸೋ ಮತ್ತೊಂದು ಕ್ಲಿನಿಕ್‍ನಿಂದ ಬರುವ ಆದಾಯವನ್ನು ಸುನಿಲ್ ಇಲ್ಲಿ ವಿನಿಯೋಗಿಸುತ್ತಿದ್ದಾರೆ.
ಬಡತನದಲ್ಲಿಯೇ ಬೆಳೆದು ಬಂದ ಸುನಿಲ್, ಬಡ ರೋಗಿಗಳ ಪಾಲಿಗೆ ಆಶಾಕಿರಣವಾಗಿದ್ದಾರೆ. ದುಡ್ಡಿಗಿಂತ ಮಾನವೀಯ ಮೌಲ್ಯಗಳೇ ದೊಡ್ಡದು ಎಂಬುದನ್ನು ಈ ಮೊಬೈಲ್ ಡಾಕ್ಟರ್ ನಿರೂಪಿಸಿದ್ದಾರೆ.