Connect with us

Bidar

ನಿವೃತ್ತಿಯಾದ್ರೂ ನಿಲ್ಲದ ಆರೋಗ್ಯ ಸೇವೆ!ರಾಜ್ಯಕ್ಕೆ ಮಾದರಿಯಾದ ಬೀದರ್ ಡಾಕ್ಟರ್

Published

on

ಬೀದರ್: ಸರ್ಕಾರಿ ಆಸ್ಪತ್ರೆ ಅಂದ್ರೆ ಮೂಗು ಮುರಿಯುವವರೇ ಜಾಸ್ತಿ. ಆದ್ರೆ. ಇದನ್ನು ಸುಳ್ಳು ಮಾಡಿದ್ದಾರೆ ನಮ್ಮ ಪಬ್ಲಿಕ್ ಹೀರೋ ಡಾಕ್ಟರ್. ಸ್ವಂತ ಖರ್ಚಿನಲ್ಲಿ ಆಸ್ಪತ್ರೆಯಲ್ಲಿ ಸಕಲ ಸೌಲಭ್ಯ ನೀಡಿದ್ದಾರೆ. ಅಷ್ಟೇ ಅಲ್ಲ, ನಿವೃತ್ತಿಯಾದರೂ ಜನರ ಒತ್ತಾಯಕ್ಕೆ ಮಣಿದು ಸೇವೆಯಲ್ಲಿ ಮುಂದುವರಿಯುತ್ತಿದ್ದಾರೆ.

ವೈದ್ಯರು ಮನಸ್ಸು ಮಾಡಿದರೆ ಯಾವ ರೀತಿ ಮಾದರಿ ಸೇವೆಯನ್ನು ನೀಡಬಹುದು ಎಂಬುದಕ್ಕೆ ಡಾ. ರಾಜೇಂದ್ರ ಕೇಶವ್‍ರಾವ್ ನಿಟ್ಟೂರ್‍ಕರ್ ಒಂದು ಉತ್ತಮ ಉದಾಹರಣೆ. ಬೀದರ್ ಜಿಲ್ಲೆಯ ಭಾಲ್ಕಿ ತಾಲೂಕಿನ ನಿಟ್ಟೂರು ಗ್ರಾಮದಲ್ಲಿರುವ ಸಮುದಾಯ ಅರೋಗ್ಯ ಕೇಂದ್ರದಲ್ಲಿ 20 ವರ್ಷಗಳಿಂದ ರೋಗಿಗಳ ಸೇವೆಯಲ್ಲಿ ತೊಡಗಿಕೊಂಡು ಮಾದರಿ ವೈದ್ಯರಾಗಿದ್ದಾರೆ.

ಭಿನ್ನ ಹೇಗೆ: 18 ಸಿಬ್ಬಂದಿ ಇರುವ ಈ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಸಿಬ್ಬಂದಿ ಕಾರ್ಯವೈಖರಿ ಗಮನಿಸಲು ವೈಯಕ್ತಿವಾಗಿ 70 ಸಾವಿರ ಖರ್ಚು ಮಾಡಿ 8 ಸಿಸಿ ಕ್ಯಾಮರಾ ಅಳವಡಿಸಿದ್ದಾರೆ. ಜೊತೆಗೆ ರೋಗಿಗಳ ಹಿತದೃಷ್ಟಿಯಿಂದ ಯಿಂದ ಸ್ಕ್ಯಾನಿಂಗ್ ಮಿಷನ್, ಎಕ್ಸ್ ರೇ ಮಿಷನ್, ಹೈಟೆಕ್ ಆಪರೇಷನ್ ಥಿಯೇಟರ್, ಹೈಟೆಕ್ ಹೆರಿಗೆ ರೂಂ, ಇಸಿಜಿ ಮೆಷಿನ್ ತಂದು ಗ್ರಾಮೀಣ ಪ್ರದೇಶ ಸಮುದಾಯ ಆರೋಗ್ಯ ಕೇಂದ್ರಕ್ಕೆ ಬರುವ ರೋಗಿಗಳ ಪಾಲಿನ ದೇವರಾಗಿದ್ದಾರೆ.

ಖಾಸಗಿ ಆಸ್ಪತ್ರೆಗಳಿಗೆ ಸೆಡ್ಡು: ನಿವೃತಿಯಾದರೂ ಸಾರ್ವಜನಿಕರ ಒತ್ತಾಯ ಮತ್ತು ಜಿಲ್ಲಾ ಆರೋಗ್ಯಾಧಿಕಾರಿಗಳ ಸೂಚನೆ ಮೇರೆಗೆ ಎನ್‍ಆರ್‍ಎಚ್‍ಎಂ ಅಡಿಯಲ್ಲಿ ಈ ರಾಜೇಂದ್ರ ಅವರು ಕಾರ್ಯ ನಿರ್ವಹಿಸುತ್ತಿದ್ದಾರೆ. ಪ್ರತಿದಿನ 20ಕ್ಕೂ ಹೆಚ್ಚು ಹಳ್ಳಿಗಳಿನಿಂದ 200ಕ್ಕೂ ಹೆಚ್ಚು ರೋಗಿಗಳು ಆಸ್ಪತ್ರೆಗೆ ಬರುತ್ತಿದ್ದು, ಚಿಕಿತ್ಸೆಯಲ್ಲಿ ಖಾಸಗಿ ಆಸ್ಪತ್ರೆಗೆ ಸೆಡ್ಡು ಹೊಡೆಯುತ್ತಿದ್ದಾರೆ. ರೋಗಿಗಳಿಗೆ ಚಿಕಿತ್ಸೆ ನೀಡಲು ಹೈಟೆಕ್ ಯಂತ್ರ ಮಾತ್ರ ಅಲ್ಲ ಕಾಯಿಲೆಯಿಂದ ಬರುವ ರೋಗಿಗಳಿಗೆ ಪಾಸಿಟಿವ್ ಯೋಚನೆಗಳು ಬರುವಂತೆ ಮೂಡಲು ಆಸ್ಪತ್ರೆಯಲ್ಲಿ ಸ್ವಚ್ಛವಾಗಿರುವ ಉದ್ಯಾನವನ ನಿರ್ಮಿಸಿದ್ದಾರೆ.

ಡಾ. ರಾಜೇಂದ್ರ ಅವರಿಂದಾಗಿ ಈ ಆಸ್ಪತ್ರೆ ಈಗ ಬಹಳ ಚೆನ್ನಾಗಿ ಕಾರ್ಯನಿರ್ವಹಿಸುತ್ತಿದ್ದು, ಈ ಸಮುದಾಯ ಆರೋಗ್ಯ ಕೇಂದ್ರ ರಾಜ್ಯಕ್ಕೆ ಮಾದರಿಯಾಗಿದೆ ಎಂದು ವೈದ್ಯರನ್ನು ಸ್ಥಳೀಯರಾದ ಸುನೀಲ್ ಪಾಟೀಲ್ ಹೊಗಳುತ್ತಾರೆ.

ಗ್ರಾಮೀಣ ಪ್ರದೇಶಕ್ಕೆ ಬಂದು ವೈದ್ಯರು ಕಾರ್ಯನಿರ್ವಹಿಸಲು ಹಿಂದೇಟು ಹಾಕುತ್ತಿರುವಾಗ ಈ ವೈದ್ಯರು ತಮ್ಮ ಕಾರ್ಯವೈಖರಿಯಿಂದ ರಾಜ್ಯಕ್ಕೆ ಮಾದರಿಯಾಗಿರುವುದು ಸಂತೋಷದ ಸಂಗತಿಯಾಗಿದೆ. ಸಮುದಾಯ ಆರೋಗ್ಯ ಕೇಂದ್ರವನ್ನು ಚಿಕಿತ್ಸೆಯಲ್ಲಿ ಖಾಸಗಿ ಆಸ್ಪತ್ರೆಗೆ ಸೆಡ್ಡುಹೊಡೆಯುವಂತೆ ಮಾಡಿದ ವೈದ್ಯರಿಗೆ ನಮ್ಮದೊಂದು ಸಲಾಂ.

https://www.youtube.com/watch?v=VNIxm3-CDK8

 

Click to comment

Leave a Reply

Your email address will not be published. Required fields are marked *

www.publictv.in