– ವೃದ್ಧಾಶ್ರಮ, ಗರ್ಭಿಣಿಯರಿಗೆ ವೈದ್ಯಕೀಯ ಸೇವೆ
ಚಿಕ್ಕಬಳ್ಳಾಪುರ: ಸರ್ಕಾರವೇ ಉಚಿತವಾಗಿ ಊಟ ಕೊಡುವುದಕ್ಕೆ ಆಗಲ್ಲ ಎಂದು 5 ರೂ., 10 ರೂ. ಪಡೆದು ಊಟ ಎಂದು ಬಂದ ಬಡವರಿಗೆ ಇಂದಿರಾ ಕ್ಯಾಂಟೀನ್ ನೀಡುತ್ತಿದೆ. ಆದರೆ, ಚಿಕ್ಕಬಳ್ಳಾಪುರದ ಮಧುಕರ್-ಸುಷ್ಮಾ ದಂಪತಿ ಉಚಿತವಾಗಿ ರೋಗಿಗಳಿಗೆ ಊಟ ಕೊಡುವ ಮೂಲಕ ಪಬ್ಲಿಕ್ ಹೀರೋ ಎನಿಸಿಕೊಂಡಿದ್ದಾರೆ.
ಚಿಕ್ಕಬಳ್ಳಾಪುರ ನಗರದ ಮಾನಸ ಖಾಸಗಿ ಆಸ್ಪತ್ರೆಯ ವೈದ್ಯರಾದ ಮಧುಕರ್-ಸುಷ್ಮಾ ಸಮಾಜ ಸೇವೆಗೆ ತುಡಿಯೋ ದಂಪತಿ. ಚಿಕ್ಕಬಳ್ಳಾಪುರದ ಸರ್ಕಾರಿ ಜಿಲ್ಲಾಸ್ಪತ್ರೆಗೆ ಬರೋ ರೋಗಿಗಳು, ಸಾರ್ವಜನಿಕರಿಗೆ ಪ್ರತಿದಿನ ಮಧ್ಯಾಹ್ನ ಉಚಿತ ಊಟ ಕೊಡುತ್ತಿದ್ದಾರೆ. ಜಿಲ್ಲಾಸ್ಪತ್ರೆಯ ಒಳರೋಗಿಗಳಿಗೆ ಸರ್ಕಾರ ಊಟ ಕೊಡುತ್ತದೆ. ಆದರೆ ಹೊರ ರೋಗಿಗಳು, ರೋಗಿಗಳ ಜೊತೆ ಬರುವ ಬಡವರಿಗೆ ಈ ವೈದ್ಯ ದಂಪತಿ ಕಳೆದ ಅಕ್ಷಯ ತೃತೀಯದಿಂದ `ಅನ್ನಪೂರ್ಣ’ ಅನ್ನೋ ಹೆಸರಿಟ್ಟು ಉಚಿತ ಊಟ ನೀಡುತ್ತಿದ್ದಾರೆ.
Advertisement
Advertisement
ಪ್ರತಿ ದಿನ ಮಧ್ಯಾಹ್ನ 1 ಗಂಟೆಗೆ ಅನ್ನಪೂರ್ಣ ಹೆಸರಿನ ಮಾರುತಿ ಓಮ್ನಿ ಕಾರು ಜಿಲ್ಲಾಸ್ಪತ್ರೆಯ ಎದುರು ಹಾಜರಾಗುತ್ತದೆ. ಊಟ, ನೀರು, ತಟ್ಟೆ, ಲೋಟ ಸೇರಿದಂತೆ ಡಸ್ಟ್ ಬಿನ್ ಸಮೇತ ಅದರಲ್ಲೇ ಇರುತ್ತದೆ. ಈ ಅನ್ನಪೂರ್ಣ ಕಾರ್ಯಕ್ಕಂತಲೇ ಐದಾರು ಮಂದಿ ಸಿಬ್ಬಂದಿ ಇದ್ದಾರೆ. 200 ರಿಂದ 300 ಮಂದಿ ಪ್ರತಿದಿನ ಅನ್ನಪೂರ್ಣ ಯೋಜನೆಯ ಅನ್ನ ತಿಂದು ಹಸಿವು ನೀಗಿಸಿಕೊಳ್ಳುತ್ತಿದ್ದಾರೆ. ಆದರೆ ಈ ಯೋಜನೆಗೆ ಆಸ್ಪತ್ರೆ ಒಳಗೆ ವೈದ್ಯಾಧಿಕಾರಿ ಜಾಗ ಕೊಟ್ಟಿಲ್ಲ ಎಂದು ಡಾ ಸುಷ್ಮಾ ಹೇಳಿದ್ದಾರೆ.
Advertisement
ಮಧುಕರ್-ಸುಷ್ಮಾ ದಂಪತಿ ವೃದ್ಧಾಶ್ರಮವನ್ನೂ ನಡೆಸುತ್ತಿದ್ದಾರೆ. ಚಿಕ್ಕಬಳ್ಳಾಪುರ ನಗರದ ಹೊರವಲಯದಲ್ಲಿ ಇರುವ ಈ ವೃದ್ಧಾಶ್ರಮದಲ್ಲಿ 20 ಮಂದಿ ವೃದ್ಧರು ಆಶ್ರಯ ಪಡೆದಿದ್ದಾರೆ. ಈ ವೃದ್ಧಾಶ್ರಮದಲ್ಲಿ ಅನ್ನಪೂರ್ಣ ಯೋಜನೆಗೆ ಊಟ ತಯಾರಿಯಾಗುತ್ತದೆ. ಜೊತೆಗೆ, ಆಗಾಗ್ಗೆ ಹಳ್ಳಿ ಹಳ್ಳಿಗೂ ತೆರಳಿ ಗರ್ಭಿಣಿಯರಿಗೆ ಉಚಿತ ವೈದ್ಯಕೀಯ ಸಲಹೆ ಕೊಡುವ ಮೂಲಕ ದಂಪತಿ ಇತರರಿಗೆ ಮಾದರಿಯಾಗಿದ್ದಾರೆ.