ದಾವಣಗೆರೆ: ವೈದ್ಯರು ಅಂದರೆ ಸಾಕು ಯಾವಾಗಲೂ ಆಸ್ಪತ್ರೆ, ಕ್ಲಿನಿಕ್, ರೋಗಿ ಅಂತನೇ ಇರುತ್ತಾರೆ. ಆದರೆ ದಾವಣಗೆರೆಯ ಈ ವೈದ್ಯರು ಎಲ್ಲಾ ವೈದ್ಯರಿಗಿಂತ ವಿಭಿನ್ನವಾಗಿದ್ದು, ರೋಗಿಗಳಿಗೆ ಚಿಕಿತ್ಸೆ ಕೊಡುವುದರ ಜೊತೆಗೆ ಗೋವುಗಳ ರಕ್ಷಣೆ ಮಾಡುತ್ತಿದ್ದಾರೆ.
ಹೊನ್ನಾಳಿ ತಾಲೂಕಿನ ಬಸವಪಟ್ಟಣದಲ್ಲಿ ನೆಲಸಿರುವ ವೈದ್ಯ ಬಸವನಗೌಡ ಕುಸನೂರು ಮತ್ತು ವಿಜಯಲಕ್ಷ್ಮಿ ದಂಪತಿ. ವೈದ್ಯಕೀಯ ವೃತ್ತಿ ಜೊತೆಗೆ ಗೋವುಗಳನ್ನು ತಮ್ಮ ಮಕ್ಕಳಂತೆ ನೋಡಿಕೊಳ್ಳುತ್ತಿದ್ದಾರೆ. ಮೂಲತಃ ರಾಣೆಬೆನ್ನೂರು ಮೂಲದವರಾದ ಈ ದಂಪತಿ ಹೊನ್ನಾಳಿಯಲ್ಲಿ ಸಾಕಷ್ಟು ವರ್ಷಗಳಿಂದ ನೆಲೆಸಿದ್ದು, ಇಲ್ಲಿಯೇ ಒಂದು ಕ್ಲಿನಿಕ್ ನಡೆಸುತ್ತಾ ಅತಿ ಕಡಿಮೆ ದರದಲ್ಲಿ ಉತ್ತಮ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ಜೊತೆಗೆ ಗೋ ರಕ್ಷಣೆ, ಗೋ ಸಾಕಣೆಯಲ್ಲಿ ನಿರತರಾಗಿದ್ದಾರೆ.
Advertisement
Advertisement
ಯಾರಾದರೂ ಹಸು, ಎತ್ತುಗಳನ್ನು ಕಸಾಯಿಖಾನೆಗೆ ಸಾಗಿಸುತ್ತಿದ್ದರೆ ಅವರಿಗೆ ಹೇಳಿ ತಂದು ತಮ್ಮ ಹೊಲದಲ್ಲಿ ಕಟ್ಟಿ ಸಾಕುತ್ತಿದ್ದಾರೆ. ಕೇವಲ ಸಾಕುವುದಷ್ಟೇ ಅಲ್ಲ, ರೈತರಿಗೆ ಭೂಮಿ ಉಳುಮೆ ಮಾಡಲು ಉಚಿತವಾಗಿ ರಾಸುಗಳನ್ನು ಕೊಡುತ್ತಾರೆ. ಇಲ್ಲಿಯವರೆಗೂ 20 ಜೊತೆ ಎತ್ತುಗಳನ್ನು ರೈತರಿಗೆ ಉಚಿತವಾಗಿ ನೀಡಿದ್ದಾರೆ. ಸದ್ಯ 50ಕ್ಕೂ ಹೆಚ್ಚು ಗೋವುಗಳ ಪಾಲನೆಯಲ್ಲಿ ನಿರತರಾಗಿದ್ದಾರೆ. ಇದರಿಂದ ತಮ್ಮ ಮನಸ್ಸಿಗೆ ನೆಮ್ಮದಿ ಎಂದು ವೈದ್ಯರಾದ ಬಸನಗೌಡ ಕುಸನೂರು ಅವರು ಹೇಳಿದ್ದಾರೆ.
Advertisement
Advertisement
ಬಸವನಗೌಡರಿಗೆ ಗೋವುಗಳು ಎಂದರೆ ಎಲ್ಲಿಲ್ಲದ ಪ್ರೀತಿ. ಚಿಕ್ಕ ವಯಸ್ಸಿನಲ್ಲಿ ಬಸವನಗೌಡರ ಮನೆಯಲ್ಲಿದ್ದ ಮೂರು ಹಸುಗಳನ್ನು ಮನೆಯವರು ಮಾರಲು ಮುಂದಾದ್ದರು. ಆದರೆ ಬಸವನಗೌಡರು ಪಟ್ಟು ಹಿಡಿದು ಮಾರಲು ಬಿಟ್ಟಿರಲಿಲ್ಲ. ಅಂದು ಗೋವುಗಳ ಮೇಲೆ ಹುಟ್ಟಿದ ಪ್ರೀತಿ ಇಂದಿಗೂ ಮುಂದುವರಿದಿದೆ. ಬಸವನಗೌಡರ ಗೋ ಪ್ರೀತಿಗೆ ಅವರ ಪತ್ನಿ ಡಾ.ವಿಜಯಲಕ್ಷ್ಮಿಯ ಬೆಂಬಲವೂ ಇದೆ.