ಬೀದರ್: ಕಲಿಯುಗದ ಈ ಕಾಲದಲ್ಲಿ ವೈದ್ಯ ವೃತ್ತಿಯೂ ಬ್ಯುಸಿನೆಸ್ ಆಗೋಗಿದೆ. ಆದರೆ ಪಬ್ಲಿಕ್ ಹೀರೋ ಬೀದರ್‍ನ ಮಕ್ಸೂದ್ ಚಂದಾ ಅವರು 40 ವರ್ಷಗಳಿಂದ ಕೇವಲ 2 ರೂಪಾಯಿ ತೆಗೆದುಕೊಳ್ಳುತ್ತಿದ್ದಾರೆ. ಬಡವರಿಗೆ ಸಂಪೂರ್ಣ ಉಚಿತವಾಗಿ ಚಿಕಿತ್ಸೆ ನೀಡುತ್ತಿದ್ದಾರೆ.
ಬೀದರ್ ನಗರದ ರಾಮ ಮಂದಿರ ಕಾಲೋನಿಯ ಡಾ.ಮಕ್ಸೂದ್ ಚಂದಾ ಇವತ್ತಿನ ಪಬ್ಲಿಕ್ ಹೀರೋ. ಬಡತನದಿಂದ ನೊಂದು ಬೆಂದು ಹೋಗಿರುವ ರೋಗಿಗಳು ಈ ವೈದ್ಯರ ಬಳಿ ಬಂದ್ರೆ ಸಾಕು ನಿಮ್ಮ ರೋಗಕ್ಕೆ ಮುಕ್ತಿ ನೀಡುತ್ತಾರೆ. ಬೀದರ್ ನಗರದ ರಾಮ ಮಂದಿರ ಕಾಲೋನಿಯಲ್ಲಿ ತಮ್ಮದೇ ಆದ ಒಂದು ಪುಟ್ಟ ಕ್ಲಿನಿಕ್ ಕಟ್ಟಿಕೊಂಡು ಗಡಿ ಜಿಲ್ಲೆಯ ಬಡ ರೋಗಿಗಳಿಗೆ ಉಚಿತ ವೈದ್ಯಕೀಯ ಸೇವೆ ನೀಡಿ ದೇವರ ಸ್ವರೂಪಿಯಾಗಿದ್ದಾರೆ.
Advertisement
Advertisement
ಪ್ರತಿ ದಿನ ನೂರಾರು ರೋಗಿಗಳಿಗೆ ಚಿಕಿತ್ಸೆ ನೀಡುವ ಡಾ.ಎ.ಮಕ್ಸೂದ್ ಚಂದಾ, 40 ವರ್ಷಗಳಿಂದ 2 ರೂಪಾಯಿ ತೆಗೆದುಕೊಳ್ಳುತ್ತಿದ್ದರು. ಆದರೆ ಇದೀಗ ಉಚಿತವಾಗಿ ಸೇವೆ ನೀಡುತ್ತಿದ್ದಾರೆ. ಡಾ.ಎ.ಮಕ್ಸೂದ್ ಚಂದಾ ಬಡ ಜನರನ್ನು ಕಂಡು ವೈಯಕ್ತಿಕ ಸಂಪಾದನೆ ಮಾಡೋದನ್ನು ಬಿಟ್ಟು ಸಮಾಜಕ್ಕೆ ನನ್ನ ಸೇವೆ ನೀಡಬೇಕು ಎಂದು ಉಚಿತ ಚಿಕಿತ್ಸೆ ನೀಡುತ್ತಾ ಬಂದಿದ್ದಾರೆ. ರೋಗಿಗಳಿಗೆ ಯಾವುದಾದರು ಮಾರಣಾಂತಿಕ ಕಾಯಿಲೆ ಇದ್ದರೆ ತಮ್ಮದೇ ಟ್ರಸ್ಟ್ ಕಡೆಯಿಂದ ಹೈದ್ರಾಬಾದ್‍ನಿಂದ ನುರಿತ ವೈದ್ಯರನ್ನು ಕರೆ ತಂದು ಚಿಕಿತ್ಸೆ ಕೊಡಿಸಿ ಮಾನವೀಯತೆ ಮೆರೆಯುತ್ತಾರೆ. ಪತ್ನಿ, ಪುತ್ರ, ಪುತ್ರಿ, ಅಳಿಯ ಸೇರಿದಂತೆ ಇಡೀ ಕುಟುಂಬವೇ ವೈದ್ಯ ವೃತ್ತಿಯನ್ನು ಮಾಡಿಕೊಂಡು ಹೋಗುತ್ತಿದ್ದಾರೆ. ಕುಗ್ರಾಮದಲ್ಲಿ ಹುಟ್ಟಿದ ನಾನು, ಬಡವರ ಬದುಕನ್ನು ಬಹಳ ಹತ್ತಿರದಿಂದ ನೋಡಿದ್ದು ಅದಕ್ಕೆ ಈ ರೀತಿಯ ಉಚಿತ ಸೇವೆ ನೀಡುತ್ತಿದ್ದೇನೆ ಎಂದು ಮಕ್ಸೂದ್ ಹೇಳುತ್ತಾರೆ.
Advertisement
Advertisement
ಕುಗ್ರಾಮದಲ್ಲಿ ಹುಟ್ಟಿ ಬಡವರ ಕಷ್ಟಗಳನ್ನು ಕಣ್ಣಾರೆ ಕಂಡಿರುವ ಡಾ.ಎ.ಮಕ್ಸೂದ್ ಚಂದಾ ಬಡವರಿಗಾಗಿ ಯಾಕೆ ಉಚಿತ ಸೇವೆ ನೀಡಬಾರದು ಎಂದು ಈ ಸೇವೆ ನಿಡುತ್ತಿದ್ದಾರೆ. ಸ್ವತಃ ಗೋಲ್ಡ್ ಮೇಡಲಿಸ್ಟ್ ಆಗಿರುವ ವೈದ್ಯರು ತಮ್ಮ ಸೇವೆ ಗಡಿ ಜಿಲ್ಲೆಗೆ ಬೇಕು ಎಂದು ಒಂದು ಸಣ್ಣ ಕ್ಲಿನಿಕ್ ತೆಗೆದುಕೊಂಡು ಪ್ರತಿದಿನ ಬರುವ ನೂರಾರು ರೋಗಿಗಳಿಗೆ ಉಚಿತ ಚಿಕಿತ್ಸೆ ನೀಡುತ್ತಿದ್ದಾರೆ. ಜಿಲ್ಲೆಯ ರೋಗಿಗಳು ಅಲ್ಲದೆ ಪಕ್ಕದ ತೆಲಂಗಾಣದಿಂದಲು ಕೂಡ ರೋಗಿಗಳು ಬಂದು ಉಚಿತ ಚಿಕಿತ್ಸೆ ಪಡೆಯುತ್ತಿದ್ದಾರೆ. ರೋಗಿಗಳಿಗೆ ಔಷಧಿಗಳ ಜೊತೆಗೆ ವಾಪಸ್ ಹೋಗಲು ಬಸ್ಸಿಗೆ ಹಣವಿಲ್ಲ ಅಂದರೂ ಅದನ್ನು ನೀಡಿದ ಉದಾಹರಣೆಗಳು ಕೂಡ ಇವೆ. ವೈದ್ಯರು ಅಂದರೆ ಸಾಕು ಅವರಿಗೆ ಒಂದು ಕಾರು, ಐಷಾರಾಮಿ ಆಸ್ಪತ್ರೆ ಇರಬೇಕು ಎಂಬ ಮನಸ್ಥಿತಿ ಇರುವ ವೈದ್ಯರುಗಳ ಮಧ್ಯೆ ಬಡ ರೋಗಿಗಳಿಗಾಗಿ ನಾನು ಎಂಬ ಈ ಅಪರೂಪದ ವೈದ್ಯರಿಗೆ ಜಿಲ್ಲೆಯ ಜನರೆ ಸಲಾಂ ಹಾಕುತ್ತಿದ್ದಾರೆ. ಸತತವಾಗಿ 40 ವರ್ಷಗಳಿಂದ ಉಚಿತ ವೈದ್ಯಕೀಯ ಸೇವೆ ನೀಡುತ್ತಿರುವ ಡಾ.ಎ.ಮಕ್ಸೂದ್ ಚಂದಾಗೆ ಆ ದೇವರು ಆರೋಗ್ಯ, ಆಯುಷ್ಯ ಕೊಟ್ಟು ಕಾಪಾಡಲಿ ಎಂದು ಆಸ್ಪತ್ರೆಗೆ ಬಂದ ರೋಗಿಗಳು ಹೇಳಿದ್ದಾರೆ.
ಒಟ್ಟಿನಲ್ಲಿ ಗ್ರಾಮೀಣ ಭಾಗದ ಕಡು ಬಡ ರೋಗಿಗಳಿಗಾಗಿ ತಮ್ಮ ಬದುಕನ್ನೇ ಮುಡುಪಾಗಿಟ್ಟ ಈ ವೈದ್ಯರು ಇತರ ವೈದರಿಗೆ ಮಾದರಿಯಾಗಿದ್ದಾರೆ.