ಹಾವೇರಿ: ಇವರೊಬ್ಬರು ಮಾಜಿ ಸೈನಿಕ. ಸೇನೆಯಲ್ಲಿ 16 ವರ್ಷಕಾಲ ದೇಶ ಕಾಯೋ ಕೆಲಸ ಮಾಡಿದ್ದಾರೆ. ಜೊತೆಗೆ ದೈವಭಕ್ತರು. ಇವರು ನಿವೃತ್ತಿ ನಂತರ ಸ್ವಂತ ಹಣ ಖರ್ಚು ಮಾಡಿ ಸಮಾಜಸೇವೆ ಮಾಡುತ್ತಿದ್ದಾರೆ. ಇವರೇ ಇವತ್ತಿನ ನಮ್ಮ ಪಬ್ಲಿಕ್ ಟಿವಿಯ ಹೀರೋ.
ಜಿಲ್ಲೆಯ ಸವಣೂರು ತಾಲೂಕಿನ ತೆವರಮೆಳ್ಳಿಹಳ್ಳಿಯ ಚಂದ್ರಯ್ಯ ವಿರಕ್ತಮಠ ಇವರೇ ಸಮಾಜ ಸೇವಕರು ಹಾಗೂ ಮಾಜಿ ಯೋಧರು. ಇವರು ಸ್ವಂತ ಹಣ ಖರ್ಚು ಮಾಡಿ ಅಯ್ಯಪ್ಪಸ್ವಾಮಿ ದೇವಸ್ಥಾನ ನಿರ್ಮಾಣ ಮಾಡಿದ್ದಾರೆ. ಪ್ರತಿನಿತ್ಯ ಅಯ್ಯಪ್ಪಸ್ವಾಮಿಗೆ ಪೂಜೆ ಮಾಡಿ ನಂತರ ಹೆದ್ದಾರಿಯಲ್ಲಿ ಹೋಗುವ ಬೈಕ್, ಕಾರು ಹಾಗೂ ಲಾರಿ ಚಾಲಕರನ್ನು ಕರೆದು ಅನ್ನಪ್ರಸಾದ ನೀಡುತ್ತಾರೆ. ಅಂದು ದೇಶ ಸೇವೆ ಮಾಡುತ್ತಿದ್ದರು. ಈಗ ದೈವಭಕ್ತರಾಗಿ ಸಮಾಜಸೇವೆ ಮಾಡುತ್ತಿದ್ದಾರೆ.
Advertisement
Advertisement
ನಾನು ಹಾವೇರಿಯ ಎನ್‍ಹೆಚ್ 4 ಪಕ್ಕದಲ್ಲೇ 13 ಗುಂಟೆ ಜಮೀನು ಖರೀದಿಸಿ 45 ಲಕ್ಷ ರೂ. ವೆಚ್ಚದಲ್ಲಿ ಅಯ್ಯಪ್ಪ ದೇಗುಲ ನಿರ್ಮಿಸಿದೆ. ನಂತರ ದಾರಿ ಹೋಕರು, ವಾಹನ ಸವಾರರಿಗೆ ಅನುಕೂಲವಾಗಲೆಂದು ಯಾತ್ರಿ ನಿವಾಸ ನಿರ್ಮಿಸಿದ್ದೇನೆ. ಪ್ರತಿ ಅಮಾವಾಸ್ಯೆ, ಹುಣ್ಣಿಮೆಯಂದು ಅನ್ನದಾನ ಮಾಡುತ್ತೇನೆ. ಶಬರಿ ಮಲೆ ಯಾತ್ರೆ ವೇಳೆ 2 ತಿಂಗಳು ಪ್ರತಿನಿತ್ಯ ಅನ್ನ ಪ್ರಸಾದ ಇರುತ್ತದೆ ಅಂತ ಚಂದ್ರಯ್ಯ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.
Advertisement
Advertisement
ಚಂದ್ರಯ್ಯ ಅವರು ದಿನ ಮಾಡುವ ಹಾಲಿನ ವ್ಯಾಪಾರದಿಂದ ಬರುವ ಹಣ ಮತ್ತು ಪಿಂಚಣಿ ಹಣದಲ್ಲಿ ಅನ್ನದಾನ ಮಾಡುತ್ತಾರೆ. ಇತರೆ ಸೇವೆಗಳಿಗಾಗಿ ಪ್ರತಿ ತಿಂಗಳು 10 ರಿಂದ 15 ಸಾವಿರ ರೂಪಾಯಿ ಖರ್ಚು ಮಾಡುತ್ತಾರೆ. ಅಷ್ಟೇ ಅಲ್ಲದೇ ಸ್ವಂತ ಹಣದಲ್ಲಿ 10 ಮದುವೆ ಮಾಡಿಸಿದ್ದಾರೆ. ಇವರ ಬಗ್ಗೆ ಗ್ರಾಮಸ್ಥರಿಗೆ ಹೆಮ್ಮೆ ಇದೆ ಎಂದು ಸ್ಥಳಿಯರು ತಿಳಿಸಿದ್ದಾರೆ.
16 ವರ್ಷ ಸೇನೆಯಲ್ಲಿದ್ದು, ದೇಶ ಸೇವೆ ಮಾಡಿದ ಚಂದ್ರಯ್ಯ ನಿವೃತ್ತರಾದ ಮೇಲೆಯೂ ಈ ರೀತಿ ಸಮಾಜ ಸೇವೆಯಲ್ಲಿ ತೊಡಗಿದ್ದಾರೆ. ಇದು ಒಂದು ರೀತಿ ದೇಶ ಸೇವೆಯೇ ಆಗಿದೆ.