-ಕೈಗೆಟುಕುವ ದರದಲ್ಲಿ ಸ್ಯಾನಿಟರಿ ನ್ಯಾಪ್‍ಕಿನ್
ಕೊಪ್ಪಳ: ಚಂದ್ರನ ಮೇಲೆ ರೋವರ್ ಇಳಿಸುವ ರಾಕೆಟ್ ಸೈನ್ಸ್ ಬಗ್ಗೆ ಮಾತನಾಡುವ ಈ ಕಾಲದಲ್ಲೂ ಮಹಿಳೆಯರ ಅಗತ್ಯವಾದ ಸ್ಯಾನಿಟರ್ ಪ್ಯಾಡ್ ಬಗ್ಗೆ ಮಾತನಾಡುವುಕ್ಕೆ ಮುಜುಗರ ಪಡುತ್ತೇವೆ. ಆದರೆ ನಮ್ಮ ಪಬ್ಲಿಕ್ ಹೀರೋ ಕೊಪ್ಪಳದ ಭಾರತಿ ಅವರು ಮಹಿಳೆಯರಲ್ಲಿ ಅರಿವು ಮೂಡಿಸುವುದರ ಜೊತೆಗೆ ತಾವೇ ಪ್ಲಾಸ್ಟಿಕ್ ಮುಕ್ತ ನ್ಯಾಪ್ಕಿನ್ ತಯಾರಿಸಿ, ಕೈಗೆಟುಕುವ ದರದಲ್ಲಿ ವಿತರಣೆ ಮಾಡುತ್ತಿದ್ದಾರೆ.
ಕೊಪ್ಪಳ ನಗರದ ಭಾರತಿ ಗುಡ್ಲಾನೂರ್ ಅವರು ಇಂತಹ ಸಾಮಾಜಿಕ ಕಾಳಜಿ ಕಾರ್ಯದಲ್ಲಿ ತಮ್ಮನ್ನು ತೊಡಗಿಸಿಕೊಂಡಿದ್ದಾರೆ. ಋತುಚಕ್ರದ ಸಮಯದಲ್ಲಿ ಮಹಿಳೆಯರಿಗೆ ಅಗತ್ಯವಾಗಿ ಬೇಕಾದ ಸ್ಯಾನಿಟರಿ ನ್ಯಾಪ್‍ಕಿನ್‍ಗಳನ್ನು ತಮ್ಮ ಮನೆಯಲ್ಲೇ ತಯಾರು ಮಾಡುತ್ತಿದ್ದಾರೆ. ವಾಸನೆ ತಡೆಗಟ್ಟುವ ಫ್ಲಮ್‍ಶೀಟ್, ಜೆಲ್‍ಶೀಟ್ ಬಳಸಿ ಶೇ.90ರಷ್ಟು ಪ್ಲಾಸ್ಟಿಕ್ ಮುಕ್ತವಾಗಿ ನ್ಯಾಪ್ಕಿನ್‍ಗಳನ್ನು ತಯಾರಿಸುತ್ತಿದ್ದಾರೆ. ಅಷ್ಟೇ ಅಲ್ಲದೆ ಈ ನೈಸರ್ಗಿಕ ಪ್ಯಾಡ್‍ಗಳ ಬಳಕೆ, ಅನುಕೂಲತೆ ಬಗ್ಗೆ ಮಹಿಳಾ ಕಾಲೇಜ್‍ಗಳು, ಹಾಸ್ಟೆಲ್‍ಗಳಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ.
Advertisement
Advertisement
ಕೇಂದ್ರ ಸರ್ಕಾರದ ಸ್ತ್ರಿಸ್ವಾಭಿಮಾನ ಯೋಜನೆಯಲ್ಲಿ ಸಾಲ ಪಡೆದು, ಕಳೆದ ವರ್ಷದ ಅಕ್ಟೋಬರ್ 2ರಂದು ಈ ಸ್ಯಾನಿಟರಿ ಪ್ಯಾಡ್ ತಯಾರಿಕಾ ಘಟಕ ಆರಂಭಿಸಿದ್ದಾರೆ. ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದ ಭಾರತಿ ಅವರಿಗೆ ಹಿಂದಿಯ ಪ್ಯಾಡ್‍ಮ್ಯಾನ್ ಸಿನಿಮಾ ಸ್ಫೂರ್ತಿಯಾಗಿದೆ.
Advertisement
ಮಹಿಳೆಯರಿಗೆ ಕೈಗೆಟುಕುವ ದರದ (5 ರೂಪಾಯಿ ಮೌಲ್ಯದ) ಈ ಪ್ಯಾಡ್‍ಗಳನ್ನು ಇದೀಗ ಬಸ್ ನಿಲ್ದಾಣಗಳಲ್ಲೂ ಸಿಗುವಂತೆ ಮಾಡಿದ್ದಾರೆ. ಭಾರತಿ ಅವರ ಈ ನ್ಯಾಪ್‍ಕಿನ್ ತಯಾರಿಕಾ ಘಟಕದಲ್ಲಿ ಏಳೆಂಟು ಜನ ಮಹಿಳೆಯರೂ ಉದ್ಯೋಗ ಪಡೆದಿದ್ದಾರೆ.