ಮಂಗಳೂರು: ಸರ್ಕಾರಗಳಿಗೆ ಎಷ್ಟೇ ಮನವಿ ಮಾಡಿದರೂ ಸಾಧ್ಯವಾಗದ್ದನ್ನ ಬೆಳ್ತಂಗಡಿಯ ಯುವಕನೊಬ್ಬ ಮಾಡಿ ತೋರಿಸುವ ಮೂಲಕ ಇದೀಗ ಪಬ್ಲಿಕ್ ಹೀರೋ ಆಗಿದ್ದಾರೆ.
ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಬೆಳ್ತಂಗಡಿ ತಾಲೂಕಿನ ಅತ್ಯಂತ ಕುಗ್ರಾಮ ಪೊಲಿಪು ನಿವಾಸಿ ಬಾಲಕೃಷ್ಣ ಜನರ ವರ್ಷಗಳ ನೋವಿಗೆ ಪರಿಹಾರ ಸೂಚಿಸಿದ್ದಾರೆ. ಶಿಶಿಲ ಗ್ರಾಮ ಪಂಚಾಯತ್ ವ್ಯಾಪ್ತಿಯ ಈ ಗ್ರಾಮ ದಟ್ಟ ಅರಣ್ಯಗಳ ಮಧ್ಯೆ ಇದೆ. ಶಿಶಿಲ ಪೇಟೆಯೇ ಇಲ್ಲಿನ ಜನರ ವಹಿವಾಟು ಕೇಂದ್ರ. ಆದ್ರೆ, ಮಳೆಗಾಲದಲ್ಲಿ ಹೊಳೆ ಮೈದುಂಬಿಕೊಳ್ಳೋ ಕಾರಣ ಹೊಳೆ ದಾಟೋದೇ ಕಷ್ಟವಾಗಿತ್ತು.
ನಮ್ಮ ಗ್ರಾಮದ ಸಮಸ್ಯೆಗೆ ಪರಿಹಾರ ಹುಡುಕಲೇ ಬೇಕು ಅಂತ ಪಣತೊಟ್ಟ ಬಾಲಕೃಷ್ಣ, ಯುವಕರನ್ನೆಲ್ಲಾ ಸೇರಿಸಿಕೊಂಡು ತೂಗು ಸೇತುವೆ ನಿರ್ಮಿಸಿದ್ದಾರೆ. ಇದು ಸಣ್ಣ ಸೇತುವೆಯಾದರೂ ಪೊಲಿಪು ಗ್ರಾಮಸ್ಥರಿಗೆ ಸಂಪರ್ಕ ಕೊಂಡಿಯಾಗಿದೆ. ಅಂದ ಹಾಗೆ, ಸಣ್ಣ ಅಂಗಡಿಯಿಟ್ಟುಕೊಂಡಿರುವ ಬಾಲಕೃಷ್ಣ ಅದರಲ್ಲಿ ಬಂದ 30 ಸಾವಿರ ರೂಪಾಯಿ ಕೂಡಿಟ್ಟು ಈ ಕಾರ್ಯಕ್ಕೆ ಬಳಸಿರುವುದಾಗಿ ಅವರು ಪಬ್ಲಿಕ್ ಟಿವಿ ಜೊತೆ ಮಾತನಾಡುತ್ತಾ ತಿಳಿಸಿದ್ದಾರೆ.
ಸುಮಾರು 35 ಮೀಟರ್ ಅಗಲದಲ್ಲಿ ಹರಿವ ಈ ಹೊಳೆಗೆ ಹಿಂದೆಲ್ಲಾ ಗ್ರಾಮದ ನಿವಾಸಿಗಳು ಅಡಿಕೆ ಮರವನ್ನು ಹಾಸಿ, ಸೇತುವೆ ಮಾಡುತ್ತಿದ್ದರು. ಆದರೆ, ಹೊಳೆಯ ನೀರು ಹೆಚ್ಚುತ್ತಿದ್ದಂತೆ ಅಡಿಕೆಯ ಸೇತುವೆ ಕೊಚ್ಚಿ ಹೋಗುತ್ತಿತ್ತು. ಕೆಲವರು ಜಲಸಮಾಧಿಯಾದ ಘಟನೆಗಳೂ ಇವೆ. ಆದ್ರೀಗ, ತನ್ನದೇ ಐಡಿಯಾದಿಂದ ಬಾಲಕೃಷ್ಣ ಸೇತುವೆ ನಿರ್ಮಿಸಿಕೊಟ್ಟಿದ್ದು, ಎಲ್ಲರಿಗೂ ವರದಾನವಾಗಿದೆ ಅಂತ ಶಿಶಿಲ ನಿವಾಸಿ ಕರುಣಾಕರ ಹೇಳಿದ್ದಾರೆ.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
https://www.youtube.com/watch?v=Zqn9Ca6SbW0