ರಾಯಚೂರು: ಮುಂಗಾರು ಮಳೆಯ ಆರಂಭದ ಅಬ್ಬರಕ್ಕೆ ಖುಷಿಯಾಗಿದ್ದ ರಾಯಚೂರು ಜಿಲ್ಲೆಯ ರೈತರು ಈಗ ಬರೀ ಮೋಡಗಳನ್ನ ನೋಡುತ್ತ ಮಳೆಗಾಗಿ ಕಾಯುತ್ತ ಕುಳಿತಿದ್ದಾರೆ. ಈ ಬಾರಿಯು ಬರಗಾಲದ ಹೆದರಿಕೆ ಶುರುವಾಗುತ್ತಿದೆ. ಬಿತ್ತನೆ ಮಾಡಿದ ರೈತರದ್ದು ಒಂದು ಚಿಂತೆಯಾದ್ರೆ, ಬಿತ್ತನೆ ಮಾಡದೇ ಖಾಲಿ ಕುಳಿತ ರೈತರು ಕೆಲಸವಿಲ್ಲದೆ ಕಂಗಾಲಾಗಿದ್ದಾರೆ. ರೈತರೆಲ್ಲಾ ದೇವರ ಮೊರೆ ಹೋಗುತ್ತಿದ್ದು ಭಜನೆ, ಪ್ರಾರ್ಥನೆಗಳ ಮೂಲಕ ಮಳೆ ತರಿಸಲು ಮುಂದಾಗಿದ್ದಾರೆ.
Advertisement
ಜೂನ್ ತಿಂಗಳ ಆರಂಭದಲ್ಲಿ ಇಡೀ ರಾಯಚೂರು ಜಿಲ್ಲೆಯಾದ್ಯಂತ ಸುರಿದ ಮಳೆ ಈ ಬಾರಿ ಬಂಪರ್ ಬೆಳೆಯ ನಿರೀಕ್ಷೆಯನ್ನ ಹುಟ್ಟಿಸಿತ್ತು. ಜಿಲ್ಲೆಯ ಶೇಕಡ 60 ರಷ್ಟು ರೈತರು ಸಹ ಹತ್ತಿ, ಮೆಣಸಿನಕಾಯಿ ಸೇರಿದಂತೆ ವಿವಿಧ ಬೆಳೆಗಳನ್ನ ಬಿತ್ತನೆ ಮಾಡಿದ್ದಾರೆ. ಆಷಾಡ ಗಾಳಿ ಹಿನ್ನೆಲೆ ಶೇಕಡಾ 40 ರಷ್ಟು ರೈತರು ಇನ್ನೊಂದು ಮಳೆಗೆ ಕಾಯುತ್ತಿದ್ದರು.
Advertisement
ಮಳೆ ಮಾತ್ರ ಒಂದು ತಿಂಗಳಾದ್ರೂ ಇನ್ನೂ ಸುಳಿದಿಲ್ಲ. ಜೂನ್ ತಿಂಗಳಲ್ಲಿ ವಾಡಿಕೆ ಮಳೆ 80.7 ಮಿಮೀ ಇದ್ರೆ, 121.8 ಮಿಮೀ ಮಳೆ ಬಂದಿತ್ತು. ಆದ್ರೆ ಜುಲೈ ತಿಂಗಳಲ್ಲಿ ಈವರೆಗೆ ವಾಡಿಕೆ ಮಳೆ ಪ್ರಮಾಣ 72.4 ಮಿಮೀ ಇದ್ದರೆ, ಮಳೆಯಾಗಿರೋದು ಮಾತ್ರ ಕೇವಲ 17.6 ಮಿಮೀ. ಅಂದ್ರೆ ಶೇಕಡಾ 76 ರಷ್ಟು ಮಳೆ ಕೊರತೆಯಾಗಿದೆ. ಹೀಗಾಗಿ ರೈತರು ಭಜನೆ ಮೂಲಕ ದೇವರ ಮೊರೆ ಹೋಗಿದ್ದಾರೆ.
Advertisement
Advertisement
ಜಿಲ್ಲೆಯ ಉಡಮಗಲ್ ಖಾನಾಪುರ ಗ್ರಾಮದಲ್ಲಿ ಮಳೆಗಾಗಿ ಗ್ರಾಮದ ಭೀಮೇಶ್ವರ ದೇವಾಲಯದಲ್ಲಿ ರೈತರು ಸಪ್ತಭಜನೆ ಆರಂಭಿಸಿದ್ದಾರೆ. ಸತತ ಏಳು ದಿನಕಾಲ ಮಡಿ ಬಟ್ಟೆ ಒಣಗದಂತೆ 49 ಜನರ 7 ತಂಡ ನಿರಂತರ ಭಜನೆ ಆರಂಭಿಸಿದೆ. 2015 ರಿಂದ ಸಪ್ತಭಜನೆ ಆರಂಭಿಸಿದ್ದು ಈ ಹಿಂದೆ ಮಳೆ ಬಂದಿದೆ ಅನ್ನೋ ನಂಬಿಕೆಯಲ್ಲಿ ಭಜನೆ ಮುಂದುವರೆಸಿದ್ದಾರೆ.
ಒಟ್ನಲ್ಲಿ, ಈ ಬಾರಿ ಬಹು ನಿರೀಕ್ಷೆ ಹುಟ್ಟಿಸಿದ್ದ ಮುಂಗಾರು ರೈತರ ಜೊತೆ ಆಟವಾಡಲು ಶುರುಮಾಡಿದೆ. ಬಿತ್ತನೆಯಾದ ಬೆಳೆ ನೀರಿಲ್ಲದೆ ಒಣಗುತ್ತಿದೆ. ಬೀಜ, ಗೊಬ್ಬರ ಅಂತೆಲ್ಲಾ ಸಾವಿರಾರು ರೂಪಾಯಿ ಖರ್ಚುಮಾಡಿದ ರೈತರು ಪುನಃ ಸಾಲಗಾರರಾಗುತ್ತಿದ್ದಾರೆ. ಈಗಲಾದ್ರೂ ವರುಣದೇವ ಕೃಪೆ ತೋರಬೇಕಿದೆ.