DistrictsKalaburagiKarnatakaLatestMain Post

ಪಿಎಸ್‍ಐ ದೈಹಿಕ ಪರೀಕ್ಷೆಯಲ್ಲೂ ಅಕ್ರಮ – ದಿವ್ಯಾ ಬಂಧನ ಸರ್ಕಾರದ ದೊಡ್ಡ ಸಾಧನೆಯಲ್ಲ: ಪ್ರಿಯಾಂಕ್ ಖರ್ಗೆ

ಕಲಬುರಗಿ: ಪಿಎಸ್‍ಐ ಪರೀಕ್ಷೆ ದೈಹಿಕ, ಓಎಮ್‍ಆರ್, ಬ್ಲೂಟೂತ್ ಸೇರಿದಂತೆ ಮೂರು ರೀತಿಯಲ್ಲಿ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿಯಲ್ಲೂ ಅಕ್ರಮ ನಡೆದಿದೆ ಇದರಲ್ಲಿ ನೂರಾರು ಅಭ್ಯರ್ಥಿಗಳು ಭಾಗಿಯಾಗಿದ್ದಾರೆ ಎಂದು ಕೆಪಿಸಿಸಿ ವಕ್ತಾರರಾದ ಪ್ರಿಯಾಂಕ್ ಖರ್ಗೆ ಸ್ಫೋಟಕ ಹೇಳಿಕೆ ನೀಡಿದ್ದಾರೆ.

ಕಲಬುರಗಿ ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಹದಿನೆಂಟು ದಿನದಿಂದ ತಲೆಮರೆಸಿಕೊಂಡಿದ್ದ ದಿವ್ಯಾ ಹಾಗರಗಿ ಬಂಧನ ಸರ್ಕಾರದ ದೊಡ್ಡ ಸಾಧನೆಯಲ್ಲ. ಅವರನ್ನು ಅರೆಸ್ಟ್ ಮಾಡಿ ತಮ್ಮ ಬೆನ್ನು ತಾವೇ ತಟ್ಟಿಕೊಳ್ಳುತ್ತಿದ್ದಾರೆ. ಇದು ಹಾಸ್ಯಾಸ್ಪದವಾಗಿದೆ. ಆರ್‌.ಡಿ ಪಾಟೀಲ್, ದಿವ್ಯಾ ಹಾಗರಗಿ ಬಂಧನ ಇದು ಪ್ರಾಥಮಿಕ ಹಂತ. ಎಲ್ಲಿ ಪರೀಕ್ಷಾ ಕೇಂದ್ರ ನಿಗದಿ ಮಾಡಿದರು. ಈ ಹಗರಣದಲ್ಲಿ ಯಾರು ಯಾರಿಗೆ ಹಣ ನೀಡಿದ್ದಾರೆ, ಹಗರಣದ ವ್ಯಾಪ್ತಿ ಎಷ್ಟು ಎಂಬುದರ ಬಗ್ಗೆ ಮಾಹಿತಿ ಎಲ್ಲಿದೆ? ಆದರೆ ಗೃಹ ಸಚಿವರು ತಮ್ಮ ಸಾಧನೆ ಹೇಳಿಕೊಂಡಿದ್ದಾರೆ. ತನಿಖೆ ಯಾವ ದಿಕ್ಕಿನಲ್ಲಿ ನಡೆಯುತ್ತಿದೆ ಎನ್ನುವ ಮಾಹಿತಿ ಅವರಿಗಿಲ್ಲ ಎಂದರು.  ಇದನ್ನೂ ಓದಿ: ಹೈಕಮಾಂಡ್‌ ಗರಂ – ಆರಗ ಖಾತೆ ಬದಲಾವಣೆ?

ಈ ನಡುವೆ 545 ಪಿಎಸ್‍ಐ ಹುದ್ದೆ ನೇಮಕಾತಿ ಅಕ್ರಮ ಪಟ್ಟಿಯನ್ನು ರದ್ದುಗೊಳಿಸಿದ್ದು ಮರು ಪರೀಕ್ಷೆಗೆ ಆದೇಶಿಸಿರುವುದು ಸ್ವಾಗತಾರ್ಹ. ಆದರೆ, ಗೃಹ ಮಂತ್ರಿ ಪ್ರಕಾರ ಆರೋಪಿಗಳನ್ನು ಹೊರತುಪಡಿಸಿ ಉಳಿದವರಿಗೆ ಪರೀಕ್ಷೆ ನಡೆಸಲಾಗುವುದು ಎಂದು ಹೇಳಿದ್ದಾರೆ. ಇದು ಅಸ್ಪಷ್ಟವಾಗಿದ್ದು ಸರ್ಕಾರದ ನಿರ್ಧಾರ ಗೊಂದಲಕ್ಕೆ ಕಾರಣವಾಗಿದೆ. ಮರುಪರೀಕ್ಷೆ ಎಂದರೆ ಲಿಖಿತ ಪರೀಕ್ಷೆಯೋ ಅಥವಾ ದೈಹಿಕ ಪರೀಕ್ಷೆಯೂ ಸೇರಿದೆಯಾ? ಈ ಬಗ್ಗೆ ಸ್ಪಷ್ಟತೆ ಇಲ್ಲ ಯಾಕೆಂದರೆ ತನಿಖೆ ಇನ್ನೂ ಪೂರ್ಣಗೊಂಡಿಲ್ಲ. ಓಎಮ್‍ಆರ್ ಶಿಟ್‍ನಿಂದ ಶುರುವಾದ ಅಕ್ರಮ ಇದೀಗ ಬ್ಲೂಟೂತ್‍ಗೆ ಬಂದು ನಿಂತಿದೆ. ಕೇವಲ ಲಿಖಿತ ಪರೀಕ್ಷೆ ಅಲ್ಲದೆಯೂ ಬೆಳಗಾವಿಯಲ್ಲಿ ನಡೆದ ದೈಹಿಕ ಪರೀಕ್ಷೆಯಲ್ಲಿ ಅಕ್ರಮ ನಡೆದ ಬಗ್ಗೆ ವರದಿಗಳಿವೆ ಹಾಗಾಗಿ ದೈಹಿಕ ಪರೀಕ್ಷೆಯೂ ನಡೆಸಲಾಗುತ್ತಿದೆಯಾ? ಎನ್ನುವುದರ ಬಗ್ಗೆ ಸ್ಪಷ್ಟಪಡಿಸಬೇಕು ಎಂದು ಒತ್ತಾಯಿಸಿದರು. ಇದನ್ನೂ ಓದಿ: ಗಲಭೆಕೋರರ ಕುಟುಂಬಕ್ಕೆ ಜಮೀರ್ ಫುಡ್‌ಕಿಟ್ ಹಂಚಿಕೆಗೆ ಬ್ರೇಕ್

ಪಿಎಸ್‍ಐ ಪರೀಕ್ಷೆ ದೈಹಿಕ, ಓಎಮ್‍ಆರ್, ಬ್ಲೂಟೂತ್ ಸೇರಿದಂತೆ ಮೂರು ರೀತಿಯಲ್ಲಿ ಬೆಂಗಳೂರು, ಹುಬ್ಬಳ್ಳಿ, ಬೆಳಗಾವಿಯಲ್ಲೂ ಅಕ್ರಮ ನಡೆದಿದೆ ಇದರಲ್ಲಿ ನೂರಾರು ಅಭ್ಯರ್ಥಿಗಳು ಭಾಗಿಯಾಗಿದ್ದಾರೆ. 57,000 ಅಭ್ಯರ್ಥಿಗಳಿಗೆ ಅನ್ಯಾಯವಾಗಿದೆ. ಕೇವಲ ಕಲಬುರಗಿ ಒಂದನ್ನೇ ಪರಿಗಣಿಸಿ ಆದರೆ ಏಳೆಂಟು ಜನ ಆರೋಪಿಗಳನ್ನು ಹೊರೆತುಪಡಿಸಿ ಉಳಿದವರನ್ನು ಪರೀಕ್ಷೆ ಬರೆಯಲು ಅವಕಾಶ ನೀಡುವ ಸರ್ಕಾರದ ನಿರ್ಧಾರ ಜನರ ಗಮನವನ್ನು ಬೇರೆಡೆ ತಿರುಗಿಸಿ ಪ್ರಕರಣ ಮುಚ್ಚಿಹಾಕುವ ಯತ್ನ ನಡೆಯುತ್ತಿದೆ ಎಂದು ಆರೋಪಿಸಿದರು.

ಕೆಲ ಪ್ರಾಮಾಣಿಕ ಅಭ್ಯರ್ಥಿಗಳು ತಾವು ಸರಿಯಾಗಿ ಪರೀಕ್ಷೆ ಬರೆದಿದ್ದೇವೆ ಈ ಕುರಿತು ಕೋರ್ಟ್‍ಗೆ ಹೋಗುವುದಾಗಿ ಹೇಳಿದ್ದಾರೆ. ಆದರೆ ಹೆಚ್ಚಿನ ರೀತಿಯಲ್ಲಿ ಪರೀಕ್ಷೆಯಲ್ಲಿ ಅಕ್ರಮ ನಡೆದರೆ ಮರುಪರೀಕ್ಷೆ ನಡೆಸಬಹುದು ಎಂದು ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಹಾಗಾಗಿ ಅಭ್ಯರ್ಥಿಗಳು ನ್ಯಾಯಾಲಯಕ್ಕೆ ಹೋಗಿ ತಮ್ಮ ಸಮಯ ವ್ಯರ್ಥವಾಗಿ ಕಾನೂನಿನ ಸಾಧಕ ಭಾದಕ ತಿಳಿದುಕೊಂಡು ಮುಂದುವರಿಯುವುದು ಬೇಡ ಎಂದು ಕಿವಿ ಮಾತು ಹೇಳಿದರು.

ಇಂದೇ ಯಾಕೆ ಆದೇಶ?
ಯಾಕೆ ನಿನ್ನೆ ಮೊನ್ನೆ ಮರುಪರೀಕ್ಷೆಗೆ ಆದೇಶ ನೀಡಲು ಯಾಕೆ ಸಾಧ್ಯವಾಗಿಲ್ಲ? ಎಂದು ಪ್ರಶ್ನಿಸಿದ ಅವರು ದೈಹಿಕ ಪರೀಕ್ಷೆಯಲ್ಲಿ ಸಹ ಅಕ್ರಮ ನಡೆದಿದೆ ದೈಹಿಕ ಮರು ಪರೀಕ್ಷೆ ನಡೆಸುತ್ತಿದ್ದೀರಾ ಅನ್ನುವ ಬಗ್ಗೆ ಸರ್ಕಾರ ಸ್ಪಷ್ಟಪಡಿಸಬೇಕು. ನನಗೆ ಅಥವಾ ಕಾಂಗ್ರೆಸ್‍ಗೆ ಉತ್ತರ ಕೊಡುವ ಬದಲು 57,000 ಅಭ್ಯರ್ಥಿಗಳಿಗೆ ಉತ್ತರ ನೀಡುವ ಮೂಲಕ ತಮ್ಮ ಸರ್ಕಾರ ಭ್ರಷ್ಟಾಚಾರ ವಿರುದ್ಧವಾಗಿದ್ದು ಪಾರದರ್ಶಕವಾಗಿದೆ ಎಂದು ಸರ್ಕಾರ ತೋರಿಸಬೇಕು ಎಂದು ಖರ್ಗೆ ಒತ್ತಾಯಿಸಿದರು. ಇದನ್ನೂ ಓದಿ: ಗಲಭೆಕೋರರ ಕುಟುಂಬಕ್ಕೆ ಜಮೀರ್ ಫುಡ್‌ಕಿಟ್ ಹಂಚಿಕೆಗೆ ಬ್ರೇಕ್

ಸಿಐಡಿಯವರು ನೀಡಿದ ಮೊದಲನೇಯ ನೋಟಿಸ್ ಅಸ್ಪಷ್ಟ ಹಾಗೂ ಕಾನೂನುಬಾಹಿರವಾಗಿತ್ತು. ಆ ನೋಟಿಸ್‍ಗೆ ಲಿಖಿತ ಉತ್ತರ ನೀಡಿದ್ದೇನೆ. ಈಗ ಮತ್ತೆ ನೋಟಿಸ್ ಕಳುಹಿಸಿದ್ದಾರೆ. ಇದಕ್ಕೆ ಉತ್ತರ ಕೊಡುವ ಅವಶ್ಯಕತೆ ಇಲ್ಲ. ಅಭ್ಯರ್ಥಿಗಳ ಭವಿಷ್ಯದ ಹಿತದೃಷ್ಠಿಯಿಂದ ಹಗರಣವನ್ನು ಪಾರ್ದದರ್ಶಕವಾಗಿ ತನಿಖೆ ನಡೆಸಿ ಎಂದು ಆಗ್ರಹಿಸಿದವರಿಗೆ ನೋಟಿಸ್ ಕೊಡುತ್ತಿದ್ದಾರೆ. ಈ ಸರ್ಕಾರಕ್ಕೆ ತೃಪ್ತಿಯಾಗುವ ಹಾಗಿದ್ದರೆ ನನ್ನನ್ನೂ ಬಂಧಿಸಿ ಮಂಪರು ಪರೀಕ್ಷೆಗೆ ಒಳಪಡಿಸಲಿ ಅದಕ್ಕೂ ಮೊದಲು ಯುವಕರಿಗೆ ನ್ಯಾಯ ಕೊಡಿಸಲಿ ಎಂದು ಲೇವಡಿ ಮಾಡಿದರು.

ಬಿಟ್ ಕಾಯಿನ್ ವಿಚಾರದಲ್ಲಿಯೂ ಇದೇ ತರ ಖರ್ಗೆ ಹೇಳಿಕೆ ನೀಡಿ ಅದನ್ನು ಅರ್ಧಕ್ಕೆ ನಿಲ್ಲಿಸಿದರು ಅವರಿಗೆ ಹಿಟ್ ಅಂಡ್ ರನ್ ಅಭ್ಯಾಸವಾಗಿದೆ ಹಾಗಾಗಿ ಅವರ ಮಾತುಗಳನ್ನು ಗಂಭೀರವಾಗಿ ಪರಿಗಣಿಸಬಾರದು ಎಂದು ಮೈಸೂರು ಸಂಸದ ಪ್ರತಾಪ್ ಸಿಂಹ ಟೀಕಿಸಿರುವ ಕುರಿತು ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಪ್ರಿಯಾಂಕ್, ಅವರ ಮಾತಿಗೆ ನಾನು ಉತ್ತರ ಕೊಡುವ ಅವಶ್ಯಕತೆ ಇಲ್ಲ. ನನ್ನ ಮಾತು ಗಂಭೀರವಾಗಿ ಪರಿಗಣಿಸುವುದು ಬೇಡ ಆದರೆ, ಈ ಪ್ರಕರಣವನ್ನು ಸಿಐಡಿಗೆ ವಹಿಸಿದ್ದೀರಿ? ನನ್ನ ಮಾತು ಗಂಭೀರವಾಗಿ ತೆಗೆದುಕೊಳ್ಳದಿದ್ದರೆ, ಕಕ ಅಭಿವೃದ್ದಿ ಮಂಡಳಿಯಿಂದ ಸಾಂಸ್ಕೃತಿಕ ಸಂಘಕ್ಕೆ ಅನುದಾನ ಯಾಕೆ ನಿಲ್ಲಿಸಿದರು? ಬಿಟ್ ಕಾಯಿನ್ ಹಗರಣವನ್ನು ಪಾರದರ್ಶಕವಾಗಿ ತನಿಖೆ ನಡೆದರೆ ಬಿಜೆಪಿಯವರಿಗೆ ಮೂರನೇಯ ಸಿಎಂ ಸಿಗುತ್ತಾರೆ ಎಂದು ನಾನು ಈ ಹಿಂದೆ ಹೇಳಿದ್ದೆ ಈಗಲೂ ಆ ಮಾತಿಗೆ ಬದ್ಧ ಎಂದರು.

ರಾಜ್ಯ ಸರ್ಕಾರದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿದೆ ಜಿಲ್ಲೆಯ ಶಾಸಕರೊಬ್ಬರಿಗೆ ಹಣ ಕೊಡಬೇಕು ಎಂದು ಅಧಿಕಾರಿಯೊಬ್ಬರು ಗುತ್ತಿಗೆದಾರರಿಂದ ಜಿಲ್ಲಾಧಿಕಾರಿ ಕಚೇರಿಯ ಮುಂದೆ ಹಣ ಪಡೆದುಕೊಂಡಿರುವುದೇ ಇದಕ್ಕೆ ಸಾಕ್ಷಿ ಎಂದು ಕಿಡಿಕಾರಿದರು.

ಮಾಧ್ಯಮಗೋಷ್ಠಿಯಲ್ಲಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಜಗದೇವ ಗುತ್ತೇದಾರ, ಸಂತೋಷ ಪಾಟೀಲ ಧನ್ನೂರು, ಈರಣ್ಣ ಝಳಕಿ, ರಾಜೀವ್ ಜಾನೆ ಸೇರಿದಂತೆ ಮತ್ತಿತರಿದ್ದರು.

Leave a Reply

Your email address will not be published.

Back to top button