ಬೆಂಗಳೂರು: ಪಿಎಸ್‍ಐ ಪರೀಕ್ಷೆಯನ್ನು (PSI Recruitment Exam) ಸೆ.22ರ ಬದಲು ಸೆ.28ರ ಶನಿವಾರ ನಡೆಸಲು ತೀರ್ಮಾನಿಸಲಾಗಿದೆ ಎಂದು ಗೃಹಸಚಿವ ಜಿ.ಪರಮೇಶ್ವರ್ (G.Parameshwar) ತಿಳಿಸಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯುಪಿಎಸ್‍ಸಿ ಪರೀಕ್ಷೆ ಹಾಗೂ ಪಿಎಸ್‍ಐ ಪರೀಕ್ಷೆ ಒಂದೇ ದಿನ ನಿಗದಿಯಾಗಿತ್ತು. ಈ ವಿಚಾರವಾಗಿ ಐಪಿಎಸ್ ಪರೀಕ್ಷೆ ಮುಂದೂಡಿಕೆ ಮಾಡಲು ಮನವಿ ಮಾಡಲಾಗಿತ್ತು. ಅದರಂತೆ ಪಿಎಸ್‍ಐ ಪರೀಕ್ಷೆ ಮುಂದೂಡಲಾಗಿದೆ ಎಂದು ಅವರು ತಿಳಿಸಿದ್ದಾರೆ.
ರಾಜಧಾನಿ ಬೆಂಗಳೂರು ಸೇರಿದಂತೆ ಆರು ಜಿಲ್ಲೆಗಳ ಒಟ್ಟು 164 ಕೇಂದ್ರಗಳಲ್ಲಿ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಪರೀಕ್ಷೆಯನ್ನು ಸೆ.22ರಂದು ನಡೆಸಲು ಕರ್ನಾಟಕ ಪರೀಕ್ಷಾ ಪ್ರಾಧಿಕಾರ (KEA) ಮೊದಲು ನಿರ್ಧರಿಸಿತ್ತು. ಅದೇ ದಿನ ಯುಪಿಎಸ್‍ಸಿ ಪರೀಕ್ಷೆ ನಿಗದಿಯಾಗಿದ್ದರಿಂದ ಪರೀಕ್ಷೆ ಮುಂದೂಡುವಂತೆ ಕೆಲವರು ಸಾಮಾಜಿಕ ಜಾಲತಾಣದಲ್ಲಿ ಒತ್ತಡ ಹಾಕಿದ್ದರು. ಇದರ ಬೆನ್ನಲ್ಲೇ ಪರೀಕ್ಷೆ ಮುಂದೂಡುವುದಿಲ್ಲ ಎಂದು ಪ್ರಾಧಿಕಾರ ಹೇಳಿತ್ತು. ಇದೀಗ ಗೃಹಸಚಿವರು ಈ ಗೊಂದಲಕ್ಕೆ ತೆರೆ ಎಳೆದಿದ್ದಾರೆ.
ದಾವಣಗೆರೆ, ಧಾರವಾಡ, ಕಲಬುರಗಿ, ಶಿವಮೊಗ್ಗ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪರೀಕ್ಷೆ ನಡೆಯಲಿದೆ. ದೈಹಿಕ ಪರೀಕ್ಷೆಯಲ್ಲಿ ಅರ್ಹತೆ ಪಡೆದಿರುವ 66,990 ಮಂದಿ ಲಿಖಿತ ಪರೀಕ್ಷೆ ಬರೆಯಲಿದ್ದು, ಈಗಿನಿಂದಲೇ ಸಿದ್ಧತೆ ನಡೆಸಲಾಗಿದೆ.