ಹಾಸನ: ಮುಖ್ಯಮಂತ್ರಿ ಅವರಂತೆ ಹಾಸನ ಜಿಲ್ಲಾಧಿಕಾರಿ ಅರಸೀಕೆರೆ ತಾಲೂಕಿನಲ್ಲಿ ಗ್ರಾಮ ವಾಸ್ತವ್ಯ ಮಾಡಿ ಗಮನ ಸೆಳೆದರು. ಇದೀಗ ಚನ್ನರಾಯಪಟ್ಟಣ ನಗರ ಪಿಎಸ್‍ಐಯೊಬ್ಬರು ಗ್ರಾಮದಲ್ಲಿ ವಾಸ್ತವ್ಯ ಹೂಡಿ ಪ್ರಶಂಸೆ ಗಳಿಸಿದ್ದಾರೆ.
ಚನ್ನರಾಯಪಟ್ಟಣ ತಾಲೂಕಿನ ಗುಳಸಿಂದ ಗ್ರಾಮ ಪಟ್ಟಣದ ಹೊರವಲಯದಲ್ಲಿದ್ದು ನಗರ ಠಾಣೆ ಪಿಎಸ್‍ಐ ಮಂಜುನಾಥ್ ತಮ್ಮ ಸಿಬ್ಬಂದಿಯೊಂದಿಗೆ ವಾಸ್ತವ್ಯ ಮಾಡಿ ಸಾರ್ವಜನಿಕರ ಕುಂದು ಕೊರತೆಗಳನ್ನ ವಿಚಾರಿಸಿದ್ದಾರೆ.
Advertisement
Advertisement
ಗ್ರಾಮದ ದೇವಸ್ಥಾನದ ಬಳಿ ಗ್ರಾಮ ಸಭೆ ನಡೆಸಿದ ನಂತರ ಮಂಜುನಾಥ್ ಸರ್ಕಾರಿ ಶಾಲೆಯಲ್ಲಿ ವಾಸ್ತವ್ಯ ಹೂಡಿದ್ದರು. ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಅಥವಾ ಸಹಾಯಕ್ಕಾಗಿ ಬರಲು ಸಾರ್ವಜನಿಕರು ಹಿಂಜರಿಯಬಾರದು ಎಂದು ಮನವಿ ಮಾಡಿದ ಸಬ್ ಇನ್ಸ್ ಪೆಕ್ಟರ್ ತಿಂಗಳಲ್ಲಿ ಒಂದು ಗ್ರಾಮದಲ್ಲಿ ವಾಸ್ತವ್ಯ ಮಾಡುವುದು ನಿಯಮವಾಗಿದೆ ಎಂದು ತಿಳಿಸಿದರು.
Advertisement
Advertisement
ಈ ಬಗ್ಗೆ ಮಾತನಾಡಿ ನಗರ ಠಾಣೆ ಸಬ್ ಇನ್ಸ್ ಪೆಕ್ಟರ್ ಮಂಜುನಾಥ್ ಅವರು, ಕೆಲವು ಜನರು ಪೊಲೀಸ್ ಠಾಣೆಗೆ ಹೋಗಲು ಸ್ವಲ್ಪ ಮುಜುಗರ ಮಾಡಿಕೊಳ್ಳುತ್ತಾರೆ. ಇದೇ ವಿಚಾರವಾಗಿ ಯಡಿಯೂರಿನಲ್ಲಿ ಡಬಲ್ ಮರ್ಡರ್ ಆಗಿತ್ತು. ಆರೋಪಿಯನ್ನು ಪತ್ತೆ ಹಚ್ಚಿ ನ್ಯಾಯಾಲಯಕ್ಕೆ ಒಪ್ಪಿಸಿದ್ದೇವೆ. ಈಗ ಆತ ಬಂಧನದಲ್ಲಿ ಇದ್ದಾನೆ. ಈಗಲು ಕೆಲವರಿಗೆ ಪೊಲೀಸ್ ಠಾಣೆ ಎಂದರೆ ಸಂಕೋಚ ಹಾಗೂ ಭಯದ ವಾತಾವರಣ ಇದೆ. ಹಾಗಾಗಿ ನಾವು ಪ್ರತಿ ಹಳ್ಳಿ-ಹಳ್ಳಿಗೆ ಬೀಟ್ ಸೇವೆ ಮಾಡುತ್ತಿದ್ದೇವೆ ಎಂದರು.
ನಮ್ಮ ಪೊಲೀಸ್ ಇಲಾಖೆಯಲ್ಲಿ ಫ್ರೆಂಡ್ಲಿ ಪೊಲೀಸಿಂಗ್ ಇದೆ. ನಾವು ಏಕೆ ಮುಕ್ತವಾಗಿ ಫೋನ್ ನಂಬರ್ ಕೊಡುತ್ತೇವೆ ಎಂದರೆ ನಿಮಗೆ ಸಂಕೋಚ ಇದ್ದು, ಠಾಣೆಗೆ ಬರುವುದಕ್ಕೆ ಆಗಲಿಲ್ಲ ಎಂದರೂ ಕರೆ ಮೂಲಕ ನಿಮ್ಮ ಸಮಸ್ಯೆ ಹೇಳಿಕೊಂಡರೆ, ನಾವು ಬೀಟ್ ಸರ್ವಿಸ್‍ನಲ್ಲಿರುವ ಅಧಿಕಾರಿಯನ್ನು ಕಳುಹಿಸುತ್ತೇವೆ. ಪೊಲೀಸ್ ಠಾಣೆಗೆ ಹೋದರೆ ಕೆಟ್ಟವರಾಗುತ್ತೇವೆ ಎಂದುಕೊಳ್ಳುತ್ತಾರೆ. ಪೊಲೀಸ್ ಠಾಣೆಯಲ್ಲಿ ಇರುವವರೆಲ್ಲ ಕೆಟ್ಟವರಲ್ಲ. ನಾವು ನಿಮ್ಮವರೆ. ನಮಗೂ ಅಕ್ಕ-ತಂಗಿ ಇದ್ದಾರೆ. ಪೊಲೀಸ್ ಠಾಣೆಗೆ ಬರಲು ಸಂಕೋಚ ಪಡೆದುಕೊಳ್ಳಬೇಡಿ ಎಂದು ಮಂಜುನಾಥ್ ಮನವಿ ಮಾಡಿದರು.