ಕಲಬುರಗಿ: ನಕಲಿ ಮತದಾನ ಸೆರೆಹಿಡಿಯಲು ಹೋದ ಪಬ್ಲಿಕ್ ಟಿವಿ ಕ್ಯಾಮರಾಮನ್ ಮೇಲೆ ಕಾಂಗ್ರೆಸ್ ಗುಂಡಾ ಕಾರ್ಯಕರ್ತರು ಹಲ್ಲೆ ಮಾಡಿ ಕ್ಯಾಮರ ಧ್ವಂಸಮಾಡಿರುವ ಘಟನೆ ಕಲಬುರಗಿಯ ರೋಜಾ ಬಡಾವಣೆಯಲ್ಲಿ ನಡೆದಿದೆ.
ನಕಲಿ ಮತದಾನ ಸಂಬಂಧ ಬಿಜೆಪಿ ಅಭ್ಯರ್ಥಿ ಉಮೇಶ್ ಜಾಧವ್ ಹಾಗೂ ಕೈ ಕಾರ್ಯಕರ್ತರ ಮಧ್ಯೆ ವಾಗ್ವಾದ ನಡೆದಿತ್ತು. ಇದನ್ನು ಸೆರೆಹಿಡಿಯಲು ಹೋದಾಗ ಅಲ್ಲಿನ ರೌಡಿಶೀಟರ್ ಬಾಬಾಖಾನ್ ಮತ್ತು ಆತನ ಸಂಗಡಿಗರು ಪಬ್ಲಿಕ್ ಟಿವಿ ಕ್ಯಾಮೆರಾ ಕಸಿದು ಒಡೆದಿದ್ದಾರೆ. ಇದೇ ವೇಳೆ ಕ್ಯಾಮೆರಾ ಉಳಿಸಿಕೊಳ್ಳಲು ಹೋದ ಕಲಬುರಗಿ ಕ್ಯಾಮೆರಾಮನ್ ಮನೀಶ್ ಮೇಲೆ ಮನಬಂದಂತೆ ಹಲ್ಲೆ ನಡೆಸಿ ಥಳಿಸಿ ಬೆದರಿಕೆ ಹಾಕಿದ್ದಾರೆ.
Advertisement
ನಿಮಗೆ ಈ ಏರಿಯಾದಲ್ಲಿ ಬಂದು ಶೂಟಿಂಗ್ ಮಾಡುವಷ್ಟು ಧೈರ್ಯ ಬಂತಾ ಎಂದು ರೌಡಿಶೀಟರ್ ಬಾಬಾಖಾನ್ ಅವಾಜ್ ಹಾಕಿ ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ. ರೌಡಿಶೀಟರ್ ಬಾಬಾಖಾನ್ ಈ ಹಿಂದೆ 2009 ರಲ್ಲಿ ಸಹ ಖಾಸಗಿ ವಾಹಿನಿಯ ಕ್ಯಾಮರಾ ಧ್ವಂಸ ಮಾಡಿದ್ದ. ಆದರೆ ಪೊಲೀಸರು ಆತನ ಪ್ರಭಾವಕ್ಕೆ ಒಳಗಾಗಿ ಸೂಕ್ತ ಸಾಕ್ಷ್ಯಗಳಿಲ್ಲ ಎಂದು ಪ್ರಕರಣಕ್ಕೆ ಬಿ ರಿಪೋಟ್9 ಹಾಕಿದ್ದರು. ಪರಿಣಾಮ ಇಂದು ರೌಡಿ ಕಾಂಗ್ರೆಸ್ ಕಾರ್ಯಕರ್ತ ಬಾಬಾಖಾನ್ ಮತ್ತೆ ಮಾಧ್ಯಮಗಳ ಮೇಲೆ ಹಲ್ಲೆ ಮಾಡಿ ಕೃತ್ಯ ಎಸಗಿದ್ದಾನೆ. ಇಷ್ಟಾದರೂ ಆತನಿಗೆ ಪೊಲೀಸ್ ಹಾಗೂ ಕಾನೂನಿನ ಭಯ ಇಲ್ಲದಂತಾಗಿದೆ.
Advertisement
ಘಟನೆಯ ಬಳಿಕ ಸ್ಥಳಕ್ಕೆ ಕಲಬುರಗಿ ಎಸ್‍ಪಿ ಯಡಾ ಮಾರ್ಟಿನ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಕುರಿತು ರೋಜಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.