ಬೆಂಗಳೂರು: ನೂರು ರೂಪಾಯಿ ಹೆಚ್ಚಿಗೆ ಸಿಗುತ್ತೆ ಅಂತ ಆಸೆಬಿದ್ದ ಪ್ರಾವಿಷನ್ ಸ್ಟೋರ್ ಮಹಿಳೆಗೆ 70 ಸಾವಿರ ಹಣ ನಾಮ ಹಾಕಿರುವ ಘಟನೆ ಬೆಂಗಳೂರಿನ ಬೊಮ್ಮನಹಳ್ಳಿಯಲ್ಲಿ ನಡೆದಿದೆ.
ಡಬಲ್ ರೇಟ್ ಬೇಕಾದರೂ ಕೊಡುತ್ತೀನಿ ಎಂದು ಪ್ರಾವಿಷನ್ ಸ್ಟೋರ್ ಮಹಿಳೆಗೆ ವಂಚನೆ ಮಾಡಲಾಗಿದೆ. ಹೆಚ್ಚಿಗೆ ಹಣ ನೀಡುವ ಆಸೆ ತೋರಿಸಿ ಖರ್ತನಾಕ್ ಜೋಡಿ ತಮ್ಮ ಕೈ ಚಳಕ ತೋರಿಸಿದ್ದಾರೆ.
Advertisement
ಗಾರ್ವೆಭಾವಿ ಪಾಳ್ಯದ ಪೂಜಾ ಪ್ರಾವಿಷನ್ ಸ್ಟೋರ್ ಗೆ ಆರೋಪಿ ಬಂದಿದ್ದಾನೆ. ಅಂಗಡಿಯಲ್ಲಿ ಊಟದ ಎಲೆ ಹಾಗೂ ಪೇಪರ್ ಗ್ಲಾಸ್ ಕೇಳಿದ್ದಾನೆ. ಅಂಗಡಿಯಲ್ಲಿ ನೂರು ಊಟದ ಪ್ಲೇಟ್ ಖರೀದಿಸಿ ಮೊದಲಿಗೆ 2 ಸಾವಿರ ನೀಡಿದ್ದಾನೆ. ಆಗ ಮಹಿಳೆ ಚಿಲ್ಲರೆ ಇಲ್ಲ ಅಂದಿದ್ದಕ್ಕೆ ನೂರು ಪೇಪರ್ ಗ್ಲಾಸ್ ಕೊಡಿ ಎಂದಿದ್ದಾನೆ. ಆಗ ಪ್ರಾವಿಷನ್ ಸ್ಟೋರ್ ನಲ್ಲಿ ಪೇಪರ್ ಗ್ಲಾಸ್ ಇಲ್ಲ, ಊಟದ ಪ್ಲೇಟಿನ ಹಣ ಕೊಡಿ ಎಂದು ಓನರ್ ಕೇಳಿದ್ದಾರೆ. ಈ ವೇಳೆ ಆರೋಪಿ ಪಕ್ಕದ ಅಂಗಡಿಯಿಂದಾದರೂ ಪೇಪರ್ ಗ್ಲಾಸ್ ತಂದುಕೊಡಿ, ಬೇಕಿದ್ದರೆ ನೀವು ಹೆಚ್ಚಿಗೆ ಹಣ ತೆಗೆದುಕೊಳ್ಳಿ ಎಂದಿದ್ದಾನೆ.
Advertisement
Advertisement
ಆರೋಪಿಯ ಮಾತನ್ನ ನಂಬಿ ಎದುರು ರಸ್ತೆಯ ಅಂಗಡಿಗೆ ಮಹಿಳೆ ತೆರಳಿದ್ದಾರೆ. ಈ ವೇಳೆ ಮಾರ್ಗಮಧ್ಯೆ ಅಪರಿಚಿತ ಮಹಿಳೆಯೊಬ್ಬಳು ಅಡ್ರೆಸ್ ಕೇಳುವ ನೆಪದಲ್ಲಿ ಅಂಗಡಿಯಾಕೆಯ ಜೊತೆ ಮಾತಿಗೆ ಇಳಿದಿದ್ದಾಳೆ. ಆಗ ಅಂಗಡಿ ಬಳಿಯಿದ್ದ ಪ್ರಮುಖ ಆರೋಪಿ, ಪ್ರಾವಿಷನ್ ಸ್ಟೋರ್ ಕ್ಯಾಶ್ ಬ್ಯಾಗ್‍ನಲ್ಲಿದ್ದ 70 ಸಾವಿರ ಹಣ ಎಗರಿಸಿ ಎಸ್ಕೇಪ್ ಆಗಿದ್ದಾನೆ.
Advertisement
ಸದ್ಯಕ್ಕೆ ಅಂಗಡಿ ಮಾಲೀಕೆ ಬೊಮ್ಮನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ. ಪೊಲೀಸರು ಖರ್ತನಾಕ್ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ.