ಬೆಂಗಳೂರು: ಕನ್ನಡ ಉಳಿಸಲು ಕನ್ನಡ ಮಾಧ್ಯಮ ನಡೆಸುತ್ತಿರುವ ಖಾಸಗಿ ಶಾಲೆಗಳಿಗೆ ಸರ್ಕಾರ ಅನುದಾನ ನೀಡಬೇಕು ಎಂದು ಕಾಂಗ್ರೆಸ್ ಸದಸ್ಯ ಯತೀಂದ್ರ ಸಿದ್ದರಾಮಯ್ಯ (Yathindra Siddaramaiah) ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ವಿಧಾನ ಪರಿಷತ್ ಪ್ರಶ್ನೋತ್ತರ ಕಲಾಪದಲ್ಲಿ ಪ್ರಶ್ನೆ ಕೇಳಿದ ಅವರು, ಇಂದು ಕನ್ನಡ ಶಾಲೆಗಳನ್ನ ನಡೆಸೋದು ಬಹಳ ಕಷ್ಟ. ಅನೇಕ ಖಾಸಗಿ ಕನ್ನಡ ಮಾಧ್ಯಮ ಶಾಲೆಗಳು ಕಷ್ಟದಲ್ಲಿವೆ. ಸರ್ಕಾರ ಕನ್ನಡ ಶಾಲೆಗಳನ್ನ ಉಳಿಸಬೇಕು. ಕನ್ನಡ ಉಳಿವಿಗಾಗಿ ಕನ್ನಡ ಶಾಲೆ ನಡೆಸುತ್ತಿರೋ ಎಲ್ಲಾ ಖಾಸಗಿ ಶಾಲೆಗಳನ್ನ ಅನುದಾನ ಕ್ಕೆ ಒಳಪಡಿಸಬೇಕು.ಕನ್ನಡ ಮೀಡಿಯಂ ಶಾಲೆಗಳಿಗೆ ಅನುದಾನ ಕೊಡಬೇಕು ಎಂದು ಮನವಿ ಮಾಡಿದ್ದಾರೆ.
ಇದಕ್ಕೆ ಸಚಿವ ಮಧು ಬಂಗಾರಪ್ಪ (Madhu Bangarappa) ಉತ್ತರ ನೀಡಿ, ನಮ್ಮ ಸರ್ಕಾರದಿಂದ ಕನ್ನಡ ಮಾಧ್ಯಮ ಶಾಲೆಗಳಿಗೆ ಹೆಚ್ಚು ಸಹಕಾರ ಕೊಡುತ್ತಿದ್ದೇವೆ. 1994-95 ಪೂರ್ವದ ಅವಧಿಯಲ್ಲಿ ಶಾಲೆಗಳಿಗೆ ಅನುದಾನ ನೀಡುವ ಕೆಲಸ ಸರ್ಕಾರ ಮಾಡ್ತಿದೆ. ಕನ್ನಡ ಕಲಿಸೋ ಕನ್ನಡ ಮಾಧ್ಯಮ ಶಾಲೆಗಳಿಗೆ ಅನುದಾನ ಕೊಡುವ ಬಗ್ಗೆ ಸಿಎಂ ಅವರ ಸಲಹೆ ಪಡೆದು ಮುಂದಿನ ತೀರ್ಮಾನ ಮಾಡುತ್ತೇವೆ ಎಂದಿದ್ದಾರೆ.