ಏಕದಿನ ಕ್ರಿಕೆಟ್‍ಗೆ ಶೋಯೆಬ್ ಮಲಿಕ್ ನಿವೃತ್ತಿ, ನನಗೆ ನಿಮ್ಮ ಬಗ್ಗೆ ಹೆಮ್ಮೆ ಇದೆ ಎಂದ ಸಾನಿಯಾ

Public TV
2 Min Read
sania mirza shoaib malik

ಲಂಡನ್: ಪಾಕಿಸ್ತಾನದ ಅನುಭವಿ ಆಟಗಾರ ಶೋಯೆಬ್ ಮಲಿಕ್ ಅವರು ಏಕದಿನ ಕ್ರಿಕೆಟ್ ನಿವೃತ್ತಿ ಘೋಷಣೆ ಮಾಡಿದ್ದು ಈ ಕುರಿತು ಟ್ವೀಟ್ ಮಾಡಿರುವ ಶೋಯೆಬ್ ಪತ್ನಿ ಹಾಗೂ ಭಾರತದ ಟೆನಿಸ್ ತಾರೆ ಸಾನಿಯಾ ಮಿರ್ಜಾ ಅವರು ಪತಿಯ ಸಾಧನೆ ಬಗ್ಗೆ ಹೆಮ್ಮೆ ಇದೆ ಎಂದು ಹೇಳಿದ್ದಾರೆ.

ಶುಕ್ರವಾರ ನಡೆದ ಪಾಕಿಸ್ತಾನ ಮತ್ತು ಬಾಂಗ್ಲಾದೇಶದ ನಡುವಿನ ಪಂದ್ಯದ ನಂತರ ಶೋಯೆಬ್ ಮಲ್ಲಿಕ್ ಅವರು ಏಕದಿನ ಕ್ರಿಕೆಟ್ ನಿವೃತ್ತಿ ಘೋಷಣೆ ಮಾಡಿದರು. ಈ ಮೂಲಕ 20 ವರ್ಷಗಳ ತನ್ನ ಕ್ರಿಕೆಟ್ ಜೀವನಕ್ಕೆ ತೆರೆ ಎಳೆದಿದ್ದಾರೆ. ಇದಕ್ಕೆ ಟ್ವಿಟ್ಟರ್ ಮೂಲಕ ಅಭಿಪ್ರಾಯ ತಿಳಿಸಿರುವ ಪತ್ನಿ ಸಾನಿಯಾ ಮಿರ್ಜಾ ಅವರು ಎಲ್ಲ ಕಥೆಗೂ ಅಂತ್ಯ ಎಂಬುದು ಇರುತ್ತದೆ. ಆದರೆ ಜೀವನದಲ್ಲಿ ಪ್ರತಿಯೊಂದು ಅಂತ್ಯವು ಹೊಸ ಆರಂಭವಾಗುತ್ತದೆ ಎಂದು ಹೇಳಿದ್ದಾರೆ.

shoaib malik

ಗಂಡನ 20 ವರ್ಷದ ಕ್ರಿಕೆಟ್ ಜೀವನಕ್ಕೆ ಮೆಚ್ಚುಗೆ ಮಾತನಾಡಿರುವ ಸಾನಿಯಾ, ‘ಪ್ರತಿಯೊಂದು ಕಥೆಯಲ್ಲೂ ಒಂದು ಅಂತ್ಯವಿದೆ. ಆದರೆ ಜೀವನದಲ್ಲಿ ಪ್ರತಿಯೊಂದು ಅಂತ್ಯವು ಹೊಸ ಆರಂಭವಾಗಿದೆ. ನೀವು ಹೆಮ್ಮೆಯಿಂದ ನಿಮ್ಮ ದೇಶಕ್ಕಾಗಿ 20 ವರ್ಷಗಳಿಂದ ಆಟವಾಡಿದ್ದೀರ ಮತ್ತು ನೀವು ತುಂಬಾ ಗೌರವ ಮತ್ತು ನಮ್ರತೆಯಿಂದ ಅದನ್ನು ಮುಂದುವರಿಸಿದ್ದೀರಿ. ಇಜಾನ್ (ಮಗ) ಮತ್ತು ನಾನು ನೀವು ಸಾಧಿಸಿದ ಎಲ್ಲದರ ಬಗ್ಗೆ ತುಂಬಾ ಹೆಮ್ಮೆಪಡುತ್ತೇನೆ’ ಎಂದು ಬರೆದುಕೊಂಡಿದ್ದಾರೆ.

2019ರ ವಿಶ್ವಕಪ್ ಶೋಯೆಬ್ ಮಲಿಕ್ ಅವರ ಪಾಲಿಗೆ ಸ್ವಲ್ಪ ಕಷ್ಟವಾಗಿತ್ತು. ಏಕೆಂದರೆ ತಾನು ಅಡಿದ 3 ಪಂದ್ಯದಲ್ಲಿ 2 ಬಾರಿ ಶೂನ್ಯಕ್ಕೆ ಔಟ್ ಆಗಿರುವ ಮಲಿಕ್ ಮೂರು ಪಂದ್ಯಗಳಿಂದ ಒಟ್ಟು 8 ರನ್‍ಗಳನ್ನು ಗಳಿಸಿದ್ದರು. ಅವರನ್ನು ಜೂನ್ 16 ರಂದು ನಡೆದ ಭಾರತದ ನಡುವಿನ ಪಂದ್ಯದ ನಂತರ ತಂಡದಿಂದ ಕೈಬಿಡಲಾಗಿತ್ತು.

ಕೇವಲ ಎರಡು ಪಂದ್ಯಗಳಲ್ಲಿ ಕೆಟ್ಟ ಪ್ರದರ್ಶನ ನೀಡಿರುವುದಕ್ಕೆ ತಂಡ ದಿಂದ ಕೈಬಿಟ್ಟಿದ್ದಕ್ಕೆ ಬೇಸರ ವ್ಯಕ್ತಪಡಿಸಿದ್ದ ಶೋಯೆಬ್, ‘ನನಗೆ ಇದರ ಬಗ್ಗೆ ಯಾವುದೇ ಪಶ್ಚಾತ್ತಾಪವಿಲ್ಲ. ಆದರೆ ನನ್ನ ಬ್ಯಾಟಿಂಗ್ ಕ್ರಮಕ್ಕೆ ನಾನು ತುಂಬಾ ಹೊಂದಿಕೊಂಡಿದ್ದೆ. ತಂಡಕ್ಕೆ ಬೇಕಾದ ಎಲ್ಲಾ ಕ್ರಮಾಂಕದಲ್ಲೂ ಬ್ಯಾಟಿಂಗ್ ಮಾಡಿದ್ದೇನೆ. ಆದರೆ ನನ್ನನ್ನು ಹಲವು ಬಾರಿ ಕೈಬಿಡಲಾಗಿದೆ, 20 ವರ್ಷದ ಕ್ರಿಕೆಟ್ ಜೀವನದಲ್ಲಿ ನಾನು ಹಲವು ವರ್ಷ ಅಂತರರಾಷ್ಟ್ರೀಯ ಕ್ರಿಕೆಟ್ ತಪ್ಪಿಸಿಕೊಂಡಿದ್ದೇನೆ. ಹೀಗಿರುವಾಗ ವಿಶ್ವಕಪ್‍ನಲ್ಲಿ ಅಡಿದ ಎರಡು ಕೆಟ್ಟ ಆಟಗಳ ಬಗ್ಗೆ ಇಲ್ಲಿ ತೀರ್ಮಾನ ತೆಗೆದುಕೊಳ್ಳಲು ನನಗೆ ಇಷ್ಟವಿಲ್ಲ’ ಎಂದು ಹೇಳಿದರು.

ಪಾಕಿಸ್ತಾನದ ಪರ 287 ಏಕದಿನ ಪಂದ್ಯಗಳನ್ನು ಆಡಿರುವ ಮಲ್ಲಿಕ್, 7,534 ರನ್ ಗಳಿಸಿದ್ದು, 35 ಟೆಸ್ಟ್ ಪಂದ್ಯಗಳನ್ನು ಆಡಿದ್ದು 1898 ರನ್ ಹಾಗೂ 111 ಟಿ20 ಪಂದ್ಯಗಳಿಂದ 2,263 ರನ್ ಗಳಿಸಿದ್ದಾರೆ. ಏಕದಿನ ಕ್ರಿಕೆಟಿನಲ್ಲಿ 158 ವಿಕೆಟ್ ಪಡೆದಿರುವ ಶಕೀಬ್, ಟೆಸ್ಟ್ ಕ್ರಿಕೆಟ್‍ನಲ್ಲಿ 32 ವಿಕೆಟ್ ಪಡೆದಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *