ಉಡುಪಿ: ಇದು ಯಾರೂ ಹೇಳಿಕೊಟ್ಟು ಮಾಡಿಸುತ್ತಿರುವುದಲ್ಲ. ಜನರ ಮನಸ್ಸಿನಲ್ಲಿರುವ ಭಾವನೆಗಳು ಸ್ಫೋಟಗೊಂಡಾಗ ಈ ರೀತಿ ಪ್ರತಿಭಟನೆಗಳು ಆಗುತ್ತವೆ ಎಂದು ಹೇಳುವ ಮೂಲಕ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಸಚಿವ ಸುನಿಲ್ ಕುಮಾರ್ ಕಿಡಿಕಾರಿದ್ದಾರೆ.
ಕೊಡಗಿನಲ್ಲಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆತ ಪ್ರಕರಣ ಸಂಬಂಧ ಸುದ್ದಿಗಾರರಿಗೆ ಪ್ರತಿಕ್ರಿಯಿಸಿದ ಅವರು, ಸಿದ್ದರಾಮಯ್ಯ ಅವರು ಸಾವರ್ಕರ್ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡುತ್ತಾ ಬಂದಿದ್ದಾರೆ. ಸಾವರ್ಕರ್ ಅವಹೇಳನ ಸಹಿಸಿಕೊಳ್ಳಲು ಯುವ ಸಮುದಾಯ ಸಿದ್ಧವಿಲ್ಲ. ಸಿದ್ದರಾಮಯ್ಯಗೆ ಹಣೆ ಮೇಲೆ ಕುಂಕುಮ ಇಟ್ಟವರನ್ನು ಕಂಡರೆ ಆಗಲ್ಲ. ಸಾವರ್ಕರ್ ಫೋಟೋ ಕಂಡರೆ ಆಗಲ್ಲ. ತನ್ನ ನಡವಳಿಕೆ, ಹೇಳಿಕೆ, ಆಡಳಿತದಲ್ಲಿ ಪ್ರತ್ಯೇಕತೆಯ ಭಾವನೆ ತೋರಿಸುತ್ತಾರೆ. ಇದನ್ನು ಕರ್ನಾಟಕದ ಜನ ಸಹಿಸುವುದಿಲ್ಲ, ಪ್ರತಿಭಟಿಸುತ್ತಿದ್ದಾರೆ ಎಂದು ಸಿಡಿಮಿಡಿಗೊಂಡರು. ಇದನ್ನೂ ಓದಿ: ತಂದೆಗೆ ಹಿಂದೂ ಸಂಘಟನೆಗಳಿಂದ ಜೀವ ಬೆದರಿಕೆಯಿದೆ: ಯತೀಂದ್ರ ಸಿದ್ದರಾಮಯ್ಯ
ಸಾವರ್ಕರ್ ಬಗ್ಗೆ ಹೇಳಿಕೆ ಕೊಡುವಾಗ ಪ್ರತಿಭಟನೆಯನ್ನು ಸಹಿಸುವ ಶಕ್ತಿಯೂ ಇರಬೇಕು. ಏನು ಬೇಕಾದರೂ ಹೇಳಿಕೆ ಕೊಟ್ಟು ಜೀರ್ಣ ಮಾಡಿಕೊಳ್ಳುತ್ತೇನೆ ಎನ್ನುವ ಕಾಲ ಹೊರಟು ಹೋಗಿದೆ. ಹೋರಾಟದ ಕಾರಣಕ್ಕೆ ಸಾವರ್ಕರ್ ಅವರನ್ನು ವೀರ ಸಾವರ್ಕರ್ ಎಂದು ಕರೆದಿದ್ದಾರೆ. ಸಾವರ್ಕರ್ ಬಗ್ಗೆ ಹಗುರವಾಗಿ ಮಾತನಾಡುತ್ತಾರೆ ಅಂದರೆ ಇತಿಹಾಸದ ಬಗ್ಗೆ ಅರ್ಧಂಬದ ತಿಳಿದುಕೊಂಡಿದ್ದಾರೆ ಎಂದರ್ಥ. ಸಾವರ್ಕರ್ ಅಂತಸತ್ವ ತಿಳಿದವರು ಯಾರು ಅವರನ್ನು ಟೀಕಿಸಲು ಸಾಧ್ಯವಿಲ್ಲ. ಸಿದ್ದರಾಮಯ್ಯನವರೇ ದಯಮಾಡಿ ಅಂಡಮಾನಿನ ಸೆಲ್ಯೂಲರ್ ಜೈಲು ನೋಡಿಕೊಂಡು ಬನ್ನಿ ಎಂದು ಟಾಂಗ್ ನೀಡಿದರು.
ಸಮಾಜವಾದಿ ಎಂದು ಹೇಳಿಕೊಂಡು ಲಕ್ಷಾಂತರ ಜನರನ್ನು ಸೇರಿಸಿ ಹುಟ್ಟುಹಬ್ಬ ಮಾಡುತ್ತೀರಿ. ಸಾವರ್ಕರ್ ಇದ್ದ ಜೈಲನ್ನು ನೋಡಿದರೆ ಕಣ್ಣಲ್ಲಿ ನೀರು ಬರುತ್ತದೆ. ಅವರು ನಡೆಸಿದ ಹೋರಾಟ ಮತ್ತು ಬ್ರಿಟಿಷರ ಕ್ರೂರತೆ ಯಾವ ರೀತಿ ಇತ್ತು ಅನ್ನೋದು ಗೊತ್ತಾಗುತ್ತದೆ. ರಾಜ್ಯಾದ್ಯಂತ ಸಾವರ್ಕರ್ ಭಾವಚಿತ್ರ ಇನ್ನಷ್ಟು ಜಾಸ್ತಿ ಆಗುತ್ತದೆ. ಸಾವರ್ಕರ್ ಈ ದೇಶದ ರಾಷ್ಟ್ರೀಯತೆಯ ಪ್ರತೀಕ. ಸಾವರ್ಕರ್ ಕಾರ್ಯಕ್ರಮಗಳು, ಬ್ಯಾನರ್ಗಳು, ಪುತ್ಥಳಿಗಳು ಮುಂದಿನ ದಿನಗಳಲ್ಲಿ ವ್ಯಾಪಕ ಆಗಲಿದೆ. ಸಾವರ್ಕರ್ ಹೆಸರು ಮುನ್ನಲೆಗೆ ಬರಲು ಸಿದ್ದರಾಮಯ್ಯನವರೇ ಕಾರಣವಾಗಿದ್ದಾರೆ ಎಂದು ಹೇಳಿದರು.