ಉತ್ತರ ಪ್ರದೇಶದಲ್ಲಿ ಮುಂದುವರಿದ ಪೌರತ್ವದ ಕಿಚ್ಚು- ಸಾವಿನ ಸಂಖ್ಯೆ 17ಕ್ಕೆ ಏರಿಕೆ

Public TV
2 Min Read
CAA Lucknow

ನವದೆಹಲಿ: ಪೌರತ್ವ ಕಾಯ್ದೆ(ಸಿಎಎ) ವಿರೋಧಿಸಿ ಉತ್ತರ ಪ್ರದೇಶದಲ್ಲಿ ನಡೆದ ಪ್ರತಿಭಟನೆಯಲ್ಲಿ ಮೃತಪಟ್ಟರ ಸಂಖ್ಯೆ 16ಕ್ಕೆ ಏರಿಕೆ ಆಗಿದೆ.

ಉತ್ತರ ಪ್ರದೇಶದಲ್ಲಿ ಪೌರತ್ವದ ಕಿಚ್ಚು ಜೋರಾಗಿದ್ದು, 260 ಭದ್ರತಾ ಸಿಬ್ಬಂದಿ ಗಾಯಗೊಂಡಿದ್ದರೆ, ಈ ಪೈಕಿ 57 ಮಂದಿ ಗುಂಡೇಟಿನಿಂದ ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕಾನ್ಪುರದಲ್ಲಿ ಪ್ರತಿಭಟನಾಕಾರರು ಯತಿಮ್ಖಾನಾ ಪೊಲೀಸ್ ಠಾಣೆಗೆ ಇಟ್ಟಿಗೆಯಿಂದ ಹೊಡೆದು ಬೆಂಕಿ ಹಚ್ಚಿದ ಪರಿಣಾಮ ಪೊಲೀಸರು ಸೇರಿದಂತೆ ಸಾರ್ವಜನಿಕರೂ ಗಾಯಗೊಂಡಿದ್ದಾರೆ. ಇತ್ತ ರಾಮ್‍ಪುರದಲ್ಲಿ ಶನಿವಾರ ನಡೆದ ಪ್ರತಿಭಟನೆಯಲ್ಲಿ ಓರ್ವ ವ್ಯಕ್ತಿ ಸಾವನ್ನಪ್ಪಿದ್ದು, ಪೊಲೀಸರು ಸೇರಿದಂತೆ ಅನೇಕರು ಪ್ರತಿಭಟನೆಯ ಘರ್ಷಣೆಯಲ್ಲಿ ಗಾಯಗೊಂಡಿದ್ದಾರೆ.

ಸುಳ್ಳು ಸುದ್ದಿ ಹಬ್ಬುವವರನ್ನು, ಹಿಂಸಾತ್ಮಕ ಪ್ರತಿಭಟನೆ ಮಾಡುವವರನ್ನು, ಜನರ ದಾರಿ ತಪ್ಪಿಸುವ ಗುಂಪುಗಳನ್ನು ಗುರುತಿಸಿ ಕ್ರಮ ಕೈಗೊಳ್ಳುವಂತೆ ಉತ್ತರ ಪ್ರದೇಶದ ಪೊಲೀಸರಿಗೆ ಸಿಎಂ ಯೋಗಿ ಆದಿತ್ಯನಾಥ್ ಸೂಚನೆ ನೀಡಿದ್ದಾರೆ.

ರಾಜ್ಯದಾದ್ಯಂತ ನಿಷೇಧಾಜ್ಞೆ ಜಾರಿಯಿದ್ದರೂ ನಿಯಮ ಉಲ್ಲಂಘಿಸಿದ ಮಹಿಳಾ ಪ್ರತಿಭಟನಾಕಾರರು ಸೇರಿದಂತೆ ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ಬಂಧಿಸಿದ್ದಾರೆ. ಮೀರತ್, ಹಾಪುರ್, ಭುಲಂಧರ್ ಶಹರ್, ಗಾಜಿಯಾಬಾದ್, ಗೌತಮ್ ಬುದ್ಧ ನಗರ್‍ನಲ್ಲಿ 120 ಮಂದಿಯನ್ನು ಬಂಧಿಸಲಾಗಿದೆ. ಕಾನ್ಪುರದಲ್ಲಿ 40 ಮಂದಿಯನ್ನು ಬಂಧಿಸಲಾಗಿದ್ದು, 15 ಸಾವಿರ ಪ್ರತಿಭಟನಾಕಾರರ ಮೇಲೆ ದೂರು ದಾಖಲಾಗಿದೆ. ಇತ್ತ ಪ್ರಯಾಗ್‍ರಾಜ್‍ನಲ್ಲಿ 10 ಸಾವಿರ ಪ್ರತಿಭಟನಾಕಾರರ ವಿರುದ್ಧ ದೂರು ದಾಖಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಹಳೆ ದೆಹಲಿಯ ದರಿಯಾಗಂಜ್‍ನಲ್ಲಿ ನಡೆದ ಹಿಂಸಾಚಾರ ಪ್ರಕರಣದ ಹಿನ್ನೆಲೆಯಲ್ಲಿ ಬಂಧನಕ್ಕೊಳಗಾಗಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ್ ಆಜಾದ್ ಸೇರಿದಂತೆ 15 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ಅವರನ್ನು 14 ದಿನಗಳ ಕಾಲ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

ಅಸ್ಸಾಂನಲ್ಲಿ ಕೂಡ ಸಿಎಎ ವಿರೋಧಿಸಿ ಪ್ರತಿಭಟನಾ ಮೆರವಣಿಗೆಗಳು ನಡೆದವು. ಆದರೆ ಯಾವುದೇ ಹಿಂಸಾಚಾರ ನಡೆದಿಲ್ಲ. ಪಶ್ಚಿಮ ಬಂಗಾಳ, ಮಹಾರಾಷ್ಟ್ರ, ಮೇಘಾಲಯದಲ್ಲಿ ಶಾಂತಿಯುತ ವಾತಾವರಣವಿದೆ.

ಸಿಎಎ ವಿರೋಧಿಸಿ ಆರ್‍ಜೆಡಿ(ರಾಷ್ಟ್ರೀಯ ಜನತಾ ದಳ) ಕರೆ ನೀಡಿದ್ದ ಬಂದ್ ಹಿನ್ನೆಲೆ ಬಿಹಾರದ ಹಲವು ಜಿಲ್ಲೆಗಳಲ್ಲಿ ಭಾರೀ ವಿಧ್ವಂಸಕ ಕೃತ್ಯಗಳು ನಡೆದಿರುವ ಬಗ್ಗೆ ವರದಿಯಾಗಿದೆ. ಇತ್ತ ಚೆನ್ನೈ ರೈಲು ನಿಲ್ದಾಣದಲ್ಲಿ ರೈಲುಗಳನ್ನು ತಡೆಯಲು ಸಿಪಿಐ ಪ್ರತಿಭಟನಾಕಾರರು ಯತ್ನಿಸಿದರು. ಕಾಂಗ್ರೆಸ್ ನೇತೃತ್ವದಲ್ಲಿ ಕೇರಳದ ಎಲ್ಲಾ ಜಿಲ್ಲಾ ಕೇಂದ್ರಗಳಲ್ಲಿ ಸಿಎಎ ವಿರೋಧಿಸಿ ಪ್ರತಿಭಟನೆ ನಡೆಸಲಾಯಿತು.

Share This Article
Leave a Comment

Leave a Reply

Your email address will not be published. Required fields are marked *